ಹುಬ್ಬಳ್ಳಿ: ಮತದಾರರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತದಾನ ಮಾಡುವ ಮೂಲಕ ಕಾಂಗ್ರೆಸ್ಗೆ ಕಪಾಳ ಮೋಕ್ಷ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ನಗರದಲ್ಲಿಂದು ಮಾತನಾಡಿದ ಅವರು, ಮೋದಿ ಮೋದಿ ಎಂದು ಹೇಳುವ ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಿರಿ ಎಂಬ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಪ್ರತಿಕ್ರಿಯಿಸಿ, ಇನ್ನು ಸ್ವಲ್ಪ ದಿನ ತಾಳಿ, ಮತಗಳ ಮೂಲಕ ಜನ ಕಪಾಳಕ್ಕೆ ಹೊಡಿತಾರೆ. ಈ ಮೂಲಕ ಪರೋಕ್ಷವಾಗಿ ಮತದಾರರು ಕಾಂಗ್ರೆಸ್ಗೆ ಕಪಾಳಮೋಕ್ಷ ಮಾಡುತ್ತಾರೆ ಎಂದರು.
ಬಳಿಕ ಚುನಾವಣ ಪ್ರಚಾರ ವಿಚಾರವಾಗಿ ಮಾತನಾಡಿ, ನಮ್ಮ ಕ್ಷೇತ್ರಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರಚಾರಕ್ಕೆ ಬರುತ್ತಾರೆ. ರಾಷ್ಟ್ರೀಯ ನಾಯಕರು ಸೆಲೆಬ್ರೆಟಿಗಳು ಕೂಡಾ ಪ್ರಚಾರಕ್ಕೆ ಬರುತ್ತಾರೆ ಎರಡು ಮೂರು ದಿನಗಳಲ್ಲಿ ರಾಷ್ಟ್ರೀಯ ನಾಯಕರ ಟೂರ್ ಫಿಕ್ಸ್ ಆಗತ್ತೆ ಎಂದು ಹೇಳಿದರು. ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣಯಿದೆ. ಎಲ್ಲ ಕಡೆ ಮೋದಿ ಪರ ಅಲೆ ಇದೆ. ಹೀಗಾಗಿ ರಾಜ್ಯದಲ್ಲಿ ಭಿನ್ನಮತ ಶಮನ ಆಗುತ್ತದೆ. ಈಗಾಗಲೇ ಸಂಗಣ್ಣ ಕರಡಿ ಅವರು ಸಮಾಧಾನ ಆಗಿದ್ದಾರೆ. ಅವರು ಧಾರವಾಡ ಮತ್ತು ನಮ್ಮ ಕ್ಷೇತ್ರಕ್ಕೂ ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದರು.
ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಗೆ ಬಂದಿರೋದರಿಂದ ಬಲ ಹೆಚ್ಚಿದೆ. ಮೂರ್ನಾಲ್ಕು ಜಿಲ್ಲೆಗಳಲ್ಲಿ ಅವರ ಪ್ರಭಾವ ಇದೆ. ಬಿಜೆಪಿಗೆ ಬಂದ್ರೆ ಎಲ್ಲರೂ ಶುದ್ಧವಾಗ್ತಾರೆ ಎಂಬ ಸಂತೋಷ್ ಲಾಡ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅದು ಅವರ ಅನುಭವದ ಮಾತು ಎಂದು ಹೇಳುವ ಮೂಲಕ ಲಾಡ್ ಹೇಳಿಕೆಗೆ ಬೊಮ್ಮಾಯಿ ತಿರುಗೇಟು ನೀಡಿದರು.
ಕಾಂಗ್ರೆಸ್ದು ಯಾವತ್ತೂ ಹೊಡಿ-ಬಡಿ ಸಂಸ್ಕೃತಿಯೇ: ಪ್ರಹ್ಲಾದ ಜೋಶಿ
ಕಾಂಗ್ರೆಸ್ಸಿಗರಿಗೆ ಯಾವಾಗಲೂ ಹೊಡಿ-ಬಡಿ ಸಂಸ್ಕೃತಿಯೇ ಇದೆ. ರಾಜ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಇದ್ದುಕೊಂಡು ಹೀಗೆ ಹೊಡಿ ಬಡಿಯುವ ರೀತಿ ಪ್ರಚೋದನೆ ನೀಡುವುದು ಅವರ ವ್ಯಕ್ತಿತ್ವ ಮತ್ತು ಹುದ್ದೆಗೆ ಘನತೆ, ಗೌರವ ತರುವಂಥದ್ದಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರಲ್ಲಿಂದು ಮಾತನಾಡಿದ ಅವರು, ಮೋದಿ ಬಗ್ಗೆ ದ್ವೇಷ ಕಾರುವುದೇಕೆ? ರಾಜ್ಯದ ಕಾಂಗ್ರೆಸ್ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ದ್ವೇಷ ಕಾರುವ ಮನೋಭಾವವಿದೆ. ಇದಕ್ಕೆಲ್ಲ ಜನರೇ ಉತ್ತರ ಕೊಡುತ್ತಾರೆ. ಪ್ರಧಾನಿ ಮೋದಿ ಅವರ ವರ್ಚಸ್ಸು ಕುಗ್ಗುವಂತೆ ಮಾಡಲು ಭಾವಿಸಿದ್ದರೆ ಅದು ನಿಮ್ಮ ಭ್ರಮೆ. ನೀವೆಷ್ಟು ಮೋದಿ ಅವರನ್ನು ದ್ವೇಷಿಸುತ್ತೀರಿ ಮತ್ತು ಸೇಡಿನ ಭಾವನೆಯಿಂದ ವರ್ತಿಸುತ್ತಿರೋ? ಅಷ್ಟೇ ಪ್ರೀತಿಯಿಂದ ಜನ ಮೋದಿ ಅವರನ್ನು ಕಾಣುತ್ತಾರೆ ಎಂದು ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟರು.
ಬರ ಪರಿಹಾರ ಅನುದಾನ ಹಂಚಿಕೆಯಲ್ಲಿ ಕೇಂದ್ರದಿಂದ ಅನ್ಯಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವ್ಯವಸ್ಥಿತವಾಗಿ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಕೇಂದ್ರದಿಂದ ಜಿಎಸ್ ಟಿ ಹಣ ಬಾಕಿ ಉಳಿಸಿಕೊಂಡಿಲ್ಲ, ಎಸ್ ಡಿಆರ್'ಎಫ್ ನಿಯಮಾವಳಿಯಲ್ಲಿ ಬದಲಾವಣೆ ಮಾಡಿ ರಾಜ್ಯ ಸರ್ಕಾರಕ್ಕೆ ಅನುಕೂಲ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದಾಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬರ ಪರಿಹಾರ, ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಬಹಳಷ್ಟು ಕಡೆಗೆ ಕುಡಿಯುವ ನೀರಿಗೆ ಹಾಹಾಕಾರ ಇದೆ. ಆದರೂ ಸಹಿತ ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್'ಗೆ ಹೋಗಿದ್ದು ಖಂಡನೀಯ, ಇದು ದ್ವೇಷದ ರಾಜಕಾರಣ ಎಂದು ಜೋಶಿ ಹರಿಹಾಯ್ದರು.
ಇದನ್ನೂ ಓದಿ: ಮೋದಿ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ಆರೋಪ: ಸಚಿವ ಶಿವರಾಜ್ ತಂಗಡಗಿ ವಿರುದ್ಧ ದೂರು ದಾಖಲು - COMPLAINT AGAINST THANGADAGI