ಶಿವಮೊಗ್ಗ: ಯುವ ದಸರಾ ಅಂಗವಾಗಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ದೇಹದಾರ್ಢ್ಯ ಅಸೋಸಿಯೇಷನ್ ವತಿಯಿಂದ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿತ್ತು.
ಸ್ಪರ್ಧಿಗಳು ವಿವಿಧ ಭಂಗಿಯಲ್ಲಿ ತಮ್ಮ ದೇಹ ಪ್ರದರ್ಶಿಸಿದರು. ಈ ವೇಳೆ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ಪ್ರೋತ್ಸಾಹ ನೀಡಿದರು. ಬೆಂಗಳೂರು, ಚಿಕ್ಕಮಗಳೂರು, ಹಾಸನ, ಮೈಸೂರು, ಬೆಳಗಾವಿ ಮತ್ತು ಮಂಗಳೂರು ಸೇರಿ ಹಲವು ಜಿಲ್ಲೆಗಳಿಂದ ಸ್ಪರ್ಧಿಗಳು ಆಗಮಿಸಿದ್ದರು. 55 ಕೆ.ಜಿ.ಯಿಂದ 90 ಕೆ.ಜಿ.ಯವರೆಗೆ ಒಟ್ಟು 6 ವಿಭಾಗದಲ್ಲಿ ಸ್ಪರ್ಧೆ ನಡೆಯಿತು. 220 ಸ್ಪರ್ಧಾಳುಗಳು ಭಾಗವಹಿಸಿದ್ದರು.
ದೇಹದಾರ್ಢ್ಯ ಸ್ಪರ್ಧೆಯ ಆಯೋಜಕರು ಹಾಗೂ ಜಿಲ್ಲಾ ದೇಹದಾರ್ಢ್ಯ ಅಸೋಸಿಯೇಷನ್ನ ಕಾರ್ಯದರ್ಶಿ ಯೋಗೇಶ್ 'ಈಟಿವಿ ಭಾರತ' ಜೊತೆ ಮಾತನಾಡಿ, "ಕಳೆದ ವರ್ಷಗಳಿಗಿಂತ ಈ ವರ್ಷ ದೇಹದಾರ್ಢ್ಯ ಸ್ಪರ್ಧೆಯು ಚೆನ್ನಾಗಿ ಹಾಗೂ ಅದ್ಧೂರಿಯಾಗಿ ನಡೆದಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಆಗಮಿಸಿದ್ದರು. ಗೆದ್ದವರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗಿದೆ" ಎಂದರು.
ದೇಹದಾರ್ಢ್ಯ ಸ್ಪರ್ಧಿ ಅಸ್ಕರ್ ಪಾಷಾ ಮಾತನಾಡಿ, "ನಾನು ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದೇನೆ. ಈ ಹಿಂದೆ ಬೇರೆ ಬೇರೆ ಜಿಲ್ಲೆಯಲ್ಲಿ ಸ್ಪರ್ಧಿಸಿದ್ದೇನೆ. ಅಲ್ಲಿ ಬಹುಮಾನ ಪಡೆದಿದ್ದೇನೆ. ಇಲ್ಲಿ ಭಾಗವಹಿಸಿರುವುದಕ್ಕೆ ತುಂಬ ಸಂತೋಷವಾಗುತ್ತಿದೆ" ಎಂದರು.
ಮತ್ತೊಬ್ಬ ಸ್ಪರ್ಧಿ ಸಂತೋಷ್ ಮಾತನಾಡಿ, "ನಾನು ಇಲ್ಲಿನ ಸ್ಪರ್ಧೆಯಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಬಂದಿದ್ದೇನೆ. ಇಲ್ಲಿನ ಸ್ಪರ್ಧೆ ಚೆನ್ನಾಗಿ ಇದೆ. ದೇಹದಾರ್ಢ್ಯ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಇದೂ ಒಂದು ಕ್ರೀಡೆಯಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: ಶ್ರೀರಂಗಪಟ್ಟಣ ದಸರಾದಲ್ಲಿ ಕುಸ್ತಿ: ಅಖಾಡಕ್ಕಿಳಿದು ಮಹಿಳಾ ಪೈಲ್ವಾನರ ಸೆಣಸಾಟ - Srirangapatna dasara