ಬೆಂಗಳೂರು: ಬಿಎಂಟಿಸಿ ಹಾಗೂ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ವತಿಯಿಂದ 'ಪ್ರಯಾಸ್ ಯೋಜನೆ'ಯಡಿ ಅಕ್ಟೋಬರ್ ಅಂತ್ಯಕ್ಕೆ 391 ನೌಕರರ ಪಿಂಚಣಿ ಪಾವತಿ ಆದೇಶಗಳನ್ನು ನೀಡಲಾಗಿದೆ.
ದೇಶ ಹಾಗೂ ರಾಜ್ಯದಲ್ಲಿ ಈ ಯೋಜನೆಯಡಿ ಅತಿ ಹೆಚ್ಚು ಪಿಂಚಣಿ ಆದೇಶಗಳನ್ನು ನೀಡಲಾಗುತ್ತಿದೆ. 58 ವರ್ಷ ತುಂಬಿದ ನೌಕರರಿಗೆ ಪಿಂಚಣಿ ಪಾವತಿ ಆದೇಶ ಪಡೆಯುವ ಸೌಲಭ್ಯ ಕಲ್ಪಿಸಲಾಗಿದೆ.
2020ರ ಜುಲೈ 21ರಿಂದ ಪ್ರಯಾಸ್ ಯೋಜನೆಯನ್ನು ಆರಂಭಿಸಲಾಗಿದ್ದು, ಇದು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯ ಒಂದು ಪ್ರಯತ್ನ. ಇದರಿಂದಾಗಿ ನೌಕರರು ಕೆಲಸ ಮಾಡುವ ಸಂಸ್ಥೆ ಹಾಗೂ ಪ್ರಾದೇಶಿಕ ಭವಿಷ್ಯನಿಧಿ ಕಚೇರಿ ಸಹಯೋಗದೊಂದಿಗೆ ದಾಖಲೆಗಳನ್ನು ಕ್ರೋಢೀಕರಿಸಿ ಮುಂಚಿತವಾಗಿ ಸಲ್ಲಿಸಬೇಕಿದೆ ಎಂದು ಬಿಎಂಟಿಸಿ ತಿಳಿಸಿದೆ.
ಜೂನ್‌ನಲ್ಲಿ ಲೆಕ್ಕಪತ್ರ ಇಲಾಖೆಯಿಂದ ಸಂಸ್ಥೆಯ ನೌಕರರಿಗೆ ಪ್ರಯಾಸ್ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ತಿಳುವಳಿಕೆ ನೀಡಲಾಗಿತ್ತು. ಹೀಗಾಗಿ, ನೌಕರರು ಸಕಾಲದಲ್ಲಿ ಒದಗಿಸಿದ ದಾಖಲೆಗಳನ್ವಯ ಇಲಾಖೆಯಿಂದ ಪಿಂಚಣಿ ಸಿದ್ಧಪಡಿಸಿ, ಒಟ್ಟು 100ಕ್ಕೂ ಹೆಚ್ಚು ಅರ್ಹ ನೌಕರರ ಪಿಂಚಣಿ ಪಾವತಿ ಆದೇಶಗಳನ್ನು ಬಿಎಂಟಿಸಿ ಬಿಡುಗಡೆಗೊಳಿಸಿದೆ.
ಈ ಸಾಧನೆಗೆ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಪ್ರಶಂಸನೀಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಪ್ರಯಾಸ್ ಯೋಜನೆಯಡಿ ಪಿಂಚಣಿ ಇತ್ಯರ್ಥಗೊಂಡಿದೆ. ಕೆಲವು ವರ್ಗಾವಣೆ ಅನೆಕ್ಸರ್-ಕೆ ಸಂಬಂಧಿತ ಪಿಂಚಣಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಶೇ.100ರಷ್ಟು ಪಾವತಿ ಆದೇಶಗಳನ್ನು ನೌಕರರಿಗೆ ಬಿಡುಗಡೆಗೊಳಿಸಲಾಗಿದೆ ಎಂದು ಬಿಎಂಟಿಸಿ ಹೇಳಿದೆ.
ಇದನ್ನೂ ಓದಿ: ಭಾರತ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡ ಬಿಎಂಟಿಸಿ