ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ಬೆಲೆ ಹೆಚ್ಚಳದ ಕುರಿತು ಪ್ರಯಾಣಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಇದರ ಅವಧಿಯನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಶನ್ ಲಿಮಿಟೆಡ್ ಅಕ್ಟೋಬರ್ 21ರಿಂದ 28ರವರೆಗೆ ವಿಸ್ತರಿಸಿದೆ.
ಬೆಂಗಳೂರಲ್ಲಿ ನಿತ್ಯವೂ ಲಕ್ಷಾಂತರ ಜನ ನಮ್ಮ ಮೆಟ್ರೋದ ಮೂಲಕ ಪ್ರಯಾಣಿಸುತ್ತಿದ್ದು, ಸದ್ಯ ಮೆಟ್ರೋ ನಿಗಮವು ಟಿಕೆಟ್ ದರ ಹೆಚ್ಚಳಕ್ಕೆ ಮುಂದಾಗಿದೆ. ಈ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ನಮ್ಮ ಮೆಟ್ರೋ ಆಡಳಿತ ಮಂಡಳಿ ಮುಂದಾಗಿದೆ. ಮೆಟ್ರೊದ ನಿರ್ಧಾರಕ್ಕೆ ಈಗಾಗಲೇ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ನಿಗಮವು ಜನಾಭಿಪ್ರಾಯ ಸಂಗ್ರಹಣಾ ಅವಧಿಯನ್ನು ವಿಸ್ತರಣೆ ಮಾಡಿದೆ.
Date Extended for Public Suggestions on Metro Fare revision in various social media modes as detailed below 👇 pic.twitter.com/OBGJ4wSLWp
— ನಮ್ಮ ಮೆಟ್ರೋ (@OfficialBMRCL) October 20, 2024
ಸಾರ್ವಜನಿಕರು ಅವರು ಅಭಿಪ್ರಾಯಗಳನ್ನು ಮೇಲ್ ಮಾಡಬಹುದು ಅಥವಾ ವಾಟ್ಸ್ ಆ್ಯಪ್ ಸಂಖ್ಯೆ 9448291173 ಗೆ ಸಲಹೆಗಳನ್ನು ಕಳುಹಿಸಬಹುದಾಗಿದೆ. ಸಾರ್ವಜನಿಕರ ಅಭಿಪ್ರಾಯದ ಮೇಲೆಯೇ ಬಿಎಂಆರ್‌ಸಿಎಲ್ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ನಮ್ಮ ಮೆಟ್ರೋ ಟಿಕೆಟ್ ಬೆಲೆಯು 10 ರೂ.ಗಳಿಂದ ಪ್ರಾರಂಭವಾಗಿ 60 ರೂಪಾಯಿ ವರೆಗಿದ್ದು, ಇತ್ತೀಚಿನ ದಿನಗಳಲ್ಲಿ ಮೆಟ್ರೋ ಟಿಕೆಟ್ ದರ ಹೆಚ್ಚಳವಾಗಿರಲಿಲ್ಲ. ಇದೀಗ ಟಿಕೆಟ್ ದರವನ್ನು ಶೇಕಡಾ 20ರಷ್ಟು ಹೆಚ್ಚಳ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಏಳು ವರ್ಷದ ನಂತರ ಬೆಲೆ ಏರಿಕೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
''ಟಿಕೆಟ್ ದರ ಏರಿಕೆ ಸಂಬಂಧ ದಿ ಫೇರ್ ಪಿಕ್ಸೇಷನ್ ಕಮಿಟಿ ರಚನೆಯಾಗಿದೆ. ಈ ಸ್ವತಂತ್ರ ಸಂಸ್ಥೆಯು ಎಷ್ಟು ರೂ. ಏರಿಕೆ ಮಾಡಬೇಕು ಎಂಬುದನ್ನು ನಿರ್ಧರಿಸಲಿದೆ. ರಾಜ್ಯ ಹಾಗೂ ಕೇಂದ್ರದ ಹಿರಿಯ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡ ಕಮಿಟಿ ಇದಾಗಿದ್ದು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಲಿದೆ. ಖರ್ಚ, ವೆಚ್ಚ ನೋಡಿಕೊಂಡು ದರ ಏರಿಕೆ ಮಾಡಲಾಗುವುದು'' ಎಂದು ನಮ್ಮ ಮೆಟ್ರೋ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: UG NEET: ಮಾಪ್ ಅಪ್ ಸುತ್ತಿನ ಅರ್ಹತೆಗೆ ಅರ್ಜಿ ಸಲ್ಲಿಸಲು ಅ.23ರವರೆಗೆ ಅವಕಾಶ