ಹುಬ್ಬಳ್ಳಿ : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಾವು ಮಾಡಿದ ಸಾಧನೆ ಬಗ್ಗೆ ಹೇಳಲಿಕ್ಕೆ ಆಗೋಲ್ಲ. ಆದ್ದರಿಂದ ಧರ್ಮಗಳ ಮೇಲೆ ಚುನಾವಣೆ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಿ. ಕೆ ಹರಿಪ್ರಸಾದ್ ಅವರು ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ದೇಶದಲ್ಲಿ ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಪದೇ ಪದೇ ಹೇಳಿಕೆ ನೀಡುತ್ತಾರೆ. ದೇಶದಲ್ಲಿ ಯಾವ ಹಿಂದೂಗಳು ಅಪಾಯದಲ್ಲಿಲ್ಲ, ಮುಸ್ಲಿಮರೂ ಅಪಾಯದಲ್ಲಿಲ್ಲ. ಅಪಾಯವಿರುವುದು ಬಿಜೆಪಿ ಎಂದು ಹರಿಹಾಯ್ದರು.
ಮೋದಿಯವರು ಸಂವಿಧಾನ ಧರ್ಮ ಗ್ರಂಥ ಎಂದು ಜಾಹೀರಾತುಗಳನ್ನು ಕೊಟ್ಟಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಎಸ್. ಸಿ, ಎಸ್. ಟಿ ಮೀಸಲಾತಿ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಅವರೊಬ್ಬ ಸುಳ್ಳಿನ ಸರ್ದಾರ ಎಂದು ಟೀಕಿಸಿದರು.
ಮೋದಿಯವರು ಮುಂದಿನ 5 ವರ್ಷಗಳ ಕಾಲ ಏನು ಮಾಡುತ್ತೇವೆಂದು ಪ್ರಣಾಳಿಕೆಯಲ್ಲಿ ಏಕೆ ಹೇಳಿಲ್ಲ?. ಈ ಹಿಂದೆ ಏನು ಮಾಡಿದ್ದೇವೆಂದು ಸಹ ಹಾಕಿಲ್ಲ. ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಟೊಳ್ಳು ಭರವಸೆಗಳು ಇವೆ. ಅವರದು ಇದು ಅಮೃತ ಕಾಲ ಅಲ್ಲ, ಅನ್ಯಾಯದ ಕಾಲ ಎಂದು ಕಿಡಿಕಾರಿದ ಅವರು, 5 ನ್ಯಾಯ ಪತ್ರಗಳನ್ನು ನಾವು ಬಿಡುಗಡೆ ಮಾಡಿದ್ದೇವೆ. 10 ವರ್ಷಗಳಲ್ಲಿ ಮೋದಿ ಒಂದೇ ಒಂದು ಸತ್ಯವನ್ನು ಜನರಿಗೆ ಹೇಳಿಲ್ಲ. ಅವರ ಹೇಳಿಕೆಯಲ್ಲಿ ಸಾಕಷ್ಟು ದ್ವಂದ್ವ ಇದೆ ಎಂದರು.
ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆಂದು ಮೋದಿಯವರ ಪಕ್ಕ ಇರುವವರು ಹೇಳುತ್ತಾ ಇದ್ದಾರೆ. ಮೋದಿಯವರ ಸರ್ಕಾರಕ್ಕೆ ಆರ್ಥಿಕ ಸಲಹೆಗಾರ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆಂದು ಹೇಳುತ್ತಾರೆ. ಸಂವಿಧಾನವನ್ನು ಸಂಪೂರ್ಣವಾಗಿ ಓದಿದವರು ಮೋದಿಯವರ ರೀತಿಯಲ್ಲಿ ಹೇಳಿಕೆ ಕೊಡುವುದಿಲ್ಲ ಎಂದು ತಿಳಿಸಿದರು.
ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ಎಲ್ಲಿಯೂ ಮೀಸಲಾತಿಯಿಲ್ಲ. ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿಯಿದೆ. ಅವರ ಇವತ್ತಿನ ಹೇಳಿಕೆ ಹಾಸ್ಯಾಸ್ಪದ ಎಂದ ಹರಿಪ್ರಸಾದ್, ಇವತ್ತಿನ ಜಾಹೀರಾತನ್ನು ಖಂಡನೆ ಮಾಡುತ್ತೇವೆ ಎಂದರು.
1947 ರಿಂದ 2014ರ ವರೆಗೂ ಎಲ್ಲಾ ಪ್ರಧಾನ ಮಂತ್ರಿಗಳ ಸಾಲ 54 ಲಕ್ಷ ಕೋಟಿ. 2014 ರಿಂದ 2024 ರವರೆಗೂ 181 ಲಕ್ಷ ಕೋಟಿ ಸಾಲ. ಸಾಲ ಮಾಡಿರುವುದು ಬಹಳ ಒಳ್ಳೆಯದು. ಆದರೆ ಸಾಲ ಮಾಡಿ ಯಾರನ್ನ ಉದ್ಧಾರ ಮಾಡಿದ್ದೀರಿ ಹೇಳಿ? ಎಂದು ಪ್ರಶ್ನಿಸಿದರು.
ನಾಗಪುರದಲ್ಲಿರುವ ಸೂತ್ರಧಾರರು ಸಂವಿಧಾನವನ್ನು ಮೌನವಾಗಿ ಬದಲಾವಣೆ ಮಾಡೋಣ, ಬಹಿರಂಗವಾಗಿ ಬೇಡ ಎಂದು ಹೇಳಿಕೆ ನೀಡುತ್ತಾ ಇದ್ದಾರೆ ಎಂದು ಬಿ ಕೆ ಹರಿಪ್ರಸಾದ್ ಆರೋಪಿಸಿದರು.
ಇದನ್ನೂ ಓದಿ : 140 ಕೋಟಿ ಜನರ ಮನಸ್ಸಿನಲ್ಲಿ ನಂಬಿಕೆ, ವಿಶ್ವಾಸ ಮರುಸ್ಥಾಪಿಸಿರುವುದು ನಮ್ಮ ಸಾಧನೆ: ಪ್ರಧಾನಿ ಮೋದಿ - PM Modi Interview