ದಾವಣಗೆರೆ : ಲೋಕಸಭಾ ಚುನಾವಣೆ ಮುಗಿದು ತಿಂಗಳುಗಳೇ ಕಳೆದಿವೆ. ಬಿಜೆಪಿ ಭದ್ರಕೋಟೆಯಾಗಿದ್ದ ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ಕೇಕೆ ಹಾಕಿದೆ. ಚುನಾವಣೆ ಮುಗಿದರೂ ಬಿಜೆಪಿ ಒಳ ಜಗಳಕ್ಕೆ ಕಡಿವಾಣ ಬೀಳುವ ಲಕ್ಷಣಗಳು ಮಾತ್ರ ಕಾಣ್ತಿಲ್ಲ.
ದಾವಣಗೆರೆ ಬಿಜೆಪಿಯಲ್ಲಿ ಮಾಜಿ ಸಚಿವ ಎಸ್. ಎ ರವೀಂದ್ರನಾಥ್, ಎಂ. ಪಿ ರೇಣುಕಾಚಾರ್ಯ ಹಾಗೂ ಮಾಜಿ ಸಂಸದ ಜಿ ಎಂ ಸಿದ್ದೇಶ್ವರ್, ಹರಿಹರ ಶಾಸಕ ಬಿ. ಪಿ ಹರೀಶ್ ಹೀಗೆ ಎರಡು ಗುಂಪುಗಳಾಗಿವೆ. ಎರಡು ಬಣಗಳು ಸೃಷ್ಟಿ ಆಗಿದ್ದು, ಉಭಯ ಬಣದ ನಾಯಕರು ಗುಪ್ತ ಸಭೆ ಹಾಗೂ ಮಾಧ್ಯಮಗೋಷ್ಟಿಗಳನ್ನು ಮಾಡ್ತಾ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ದಾವಣಗೆರೆ ಒಂದು ಕಾಲದಲ್ಲಿ ಬಿಜಿಪಿ ಭದ್ರಕೋಟೆಯಾಗಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಗಳಲ್ಲಿ ಮತದಾರ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬಿಜೆಪಿಯ ಭಿನ್ನಮತ ಎಂಬ ಮಾತುಗಳು ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿದೆ. ಬಿಜೆಪಿಯಲ್ಲಿ ಸಿದ್ದೇಶ್ವರ್ ಬೆಂಬಲಿಗರು ಮಾಜಿ ಸಚಿವ ಎಂ. ಪಿ ರೇಣುಕಾಚಾರ್ಯ ನೇತೃತ್ವದ ತಂಡಕ್ಕೆ 'ಲಗಾನ್ ಟೀಮ್' ಎಂದು ಹೆಸರಿಟ್ಟು ವಾಗ್ದಾಳಿ ನಡೆಸುತ್ತಿದ್ದಾರೆ.
ಇತ್ತ ಮಾಜಿ ಸಚಿವ ಎಂ. ಪಿ ರೇಣುಕಾಚಾರ್ಯ, ಮಾಜಿ ಸಚಿವ ಎಸ್. ಎ ರವೀಂದ್ರನಾಥ್ ಅವರ ನೇತೃತ್ವದ ಬಣ ಮಾಜಿ ಸಂಸದ ಜಿ. ಎಂ ಸಿದ್ದೇಶ್ವರ್ ನೇತೃತ್ವದ 'ಗೆಸ್ಟ್ ಹೌಸ್ ಬಾಯ್ಸ್ ಟೀಮ್' ಎಂದು ಹೆಸರಿಸಿ ಟೀಕೆ ಮಾಡ್ತಿದ್ದಾರೆ. ಈ ಎರಡು ಬಣಗಳು ಲೋಕಸಭಾ ಚುನಾವಣೆ ಸೋಲನ್ನು ಮುಂದಿಟ್ಟುಕೊಂಡು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ.
ಕೆಲ ದಿನ ತಣ್ಣಗಾಗಿದ್ದ ಬಣಗಳ ಕಿತ್ತಾಟ ಜಿಎಂಐಟಿಯಲ್ಲಿ ಜಿ. ಎಂ ಸಿದ್ದೇಶ್ವರ್ ಅವರ ನೇತೃತ್ವದಲ್ಲಿ ಶಾಸಕ ಯತ್ನಾಳ್ ಸೇರಿದಂತೆ ಅತೃಪ್ತ ನಾಯಕರು ಸೇರಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಸಭೆ ನಡೆಸಿದ್ದರು ಎಂಬುದು ಕಾರ್ಯಕರ್ತರ ಆರೋಪ ಆಗಿದೆ. ಈ ಸಭೆಯಿಂದ ಲಗಾನ್ ಟೀಂ ಆಕ್ರೋಶಕ್ಕೆ ಕಾರಣವಾಗಿತ್ತು. ಅದಾದ ಬಳಿಕ ಮಾಜಿ ಸಚಿವ ಎಂ. ಪಿ ರೇಣುಕಾಚಾರ್ಯ, ಮಾಜಿ ಸಚಿವ ಎಸ್. ಎ ರವೀಂದ್ರನಾಥ್ ಸಭೆ ಸೇರಿ ವಾಗ್ದಾಳಿ ನಡೆಸಿದ್ದು, ಪಕ್ಷದ ಸ್ಥಿತಿ ಹದೆಗೆಡುವಂತೆ ಮಾಡಿತು.
ದಾವಣಗೆರೆಗೆ ಯತ್ನಾಳ್ ಭೇಟಿ, ಸಾವಿರ ಕೋಟಿ ರೂ. ಬಾಂಬ್, ಲಗಾನ್ ಟೀಂ ಕೆಂಡ : ದಾವಣಗೆರೆ ಜಿಎಂಐಟಿ ಗೆಸ್ಟ್ ಹೌಸ್ನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಜಿ. ಎಂ ಸಿದ್ದೇಶ್ವರ್, ಪ್ರತಾಪ್ ಸಿಂಹ, ಬಿ. ಪಿ ಹರೀಶ್ ಒಟ್ಟಾಗಿ ಸಭೆ ಸೇರಿದ್ದರು. ಈ ಸಭೆ ದಾವಣಗೆರೆ ಬಿಜೆಪಿಯಲ್ಲಿ ಗದ್ದಲಕ್ಕೆ ಕಾರಣವಾಗಿತ್ತು. ನಾವೇನು ಚರ್ಚೆ ಮಾಡೋಕೆ ಬಂದಿಲ್ಲ ಎನ್ನುತ್ತಲೇ ಸಿಎಂ ಆಗಲು ಸಾವಿರ ಕೋಟಿ ಇಟ್ಟುಕೊಂಡಿದ್ದಾರೆ ಎಂಬ ಯತ್ನಾಳ್ ಹೇಳಿಕೆ ಲಗಾನ್ ಟೀಂನ ಕೆರಳಿಸಿತ್ತು.
ಯತ್ನಾಳ್ರನ್ನ ಜಿಎಂಐಟಿಗೆ ಕರೆಸಿದ್ದ ಜಿ. ಎಂ ಸಿದ್ದೇಶ್ವರ್ ವಿರುದ್ಧ ದಾವಣಗೆರೆಯಲ್ಲಿ ಮಾಜಿ ಸಚಿವ, ಹಿರಿಯ ರಾಜಕಾರಣಿ ಎಸ್. ಎ ರವೀಂದ್ರನಾಥ್ ನಿವಾಸಿದಲ್ಲಿ ಮಾಜಿ ಸಚಿವ ಎಂ. ಪಿ ರೇಣುಕಾಚಾರ್ಯ, ಮಾಜಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಮಾಡಾಳ್ ಮಲ್ಲಿಕಾರ್ಜುನ್, ಮಾಜಿ ಎಂಎಲ್ಸಿ ಶಿವಯೋಗಿಸ್ವಾಮಿ ಸೇರಿ ಗುಪ್ತ ಸಭೆ ನಡೆಸಿ, ಜಿ ಎಂ ಸಿದ್ದೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ಬಗ್ಗೆ ಮಾಜಿ ಸಚಿವ ಎಸ್. ಎ ರವೀಂದ್ರನಾಥ್ ಪ್ರತಿಕ್ರಿಯಿಸಿ, "ಈ ರೀತಿಯಾಗಿ ಒಳ್ಳೆ ಮಾತುಗಳನ್ನಾಡಿದ್ದಾರೆ ಎಂದು ರಾಜ್ಯ ನಾಯಕರ ಗಮನಕ್ಕೆ ತರುತ್ತೇವೆ. ಇಲ್ಲಿತನಕ ನಾಯಕರಿಗೆ ವೈಯಕ್ತಿಕವಾಗಿ ಯಾರ ವಿರುದ್ಧವೂ ದೂರು ಕೊಟ್ಟಿಲ್ಲ, ಬಿಜೆಪಿ ಒಡೆದ ಮನೆಯಾಗಿಲ್ಲ. ರಾಜ್ಯ ನಾಯಕರಿಗೆ ದೂರು ಕೊಡುತ್ತೇವೆ'' ಎಂದಿದ್ದಾರೆ.
ಸಿದ್ದೇಶ್ವರ್ ಒಂದು ಬಾರಿ ಸೋತಿದ್ದಕ್ಕೆ ಈ ರೀತಿ ಅಳೋದು ಏಕೆ ಎಂಬ ಹೇಳಿಕೆಗೆ ಕೆಂಡ : ಇದೇ ವೇಳೆ ಮಾಜಿ ಸಚಿವ ರವೀಂದ್ರನಾಥ್, ನಾವು ಹಲವು ಬಾರಿ ಸೋತಿದ್ದೇವೆ. ಆದ್ರೆ ಜಿ. ಎಂ ಸಿದ್ದೇಶ್ವರ್ ಒಂದು ಬಾರಿ ಸೋತಿದ್ದಕ್ಕೆ ಈ ರೀತಿ ಅಳೋದು ಏಕೆ ಎಂಬ ಹೇಳಿಕೆ ಗೆಸ್ಟ್ ಹೌಸ್ ಬಾಯ್ಸ್ ಟೀಂಅನ್ನು ಕೆಂಡವಾಗಿಸಿತ್ತು.
ಕೆಲ ದಿನ ಬಳಿಕ ವಿಜಯದಶಮಿ ಬೈಕ್ ರ‍್ಯಾಲಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಜಿ. ಎಂ ಸಿದ್ದೇಶ್ವರ್ ಅವರು ರವೀಂದ್ರನಾಥ್ ವಿರುದ್ಧ ಏಕ ವಚನದಲ್ಲಿ ಮಾತಾಡಿದ್ದರು. 'ಅವನಿಗೆ ವಯಸ್ಸು ಆಗಿದೆ. ಬುದ್ಧಿ ಜ್ಞಾನ ಇಟ್ಟುಕೊಂಡು ಮಾತನಾಡಲಿ. ಅಲ್ಲದೆ ಎಸ್ ಎ ರವೀಂದ್ರನಾಥ್ಗೆ ಬುದ್ಧಿ ಕಡಿಮೆಯಾಗಿದೆ. ಬುದ್ಧಿ ಸ್ಥಿಮಿತತೆ ಕಳೆದುಕೊಂಡ ಮೇಲೆ ಈ ರೀತಿ ಮಾತಾಡ್ತಾ ಇದಾರೆ. ರಾಜ್ಯ ನಾಯಕರಿದ್ದಾರೆ. ಅವರು ಗಮನಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಇವರೆಲ್ಲ ಏನ್ ಮಾಡಿದ್ದಾರೆ ಎಂಬುದು ಗೊತ್ತಿದೆ. ರಾಜ್ಯದ ಕೇಂದ್ರ ನಾಯಕರಿಗೆ ದೂರು ಕೊಟ್ಟಿದ್ದೇನೆ. ಅವರು ಕ್ರಮ ತೆಗೆದುಕೊಳ್ಳಲಿದ್ದಾರೆ' ಎಂದರು.
ಇದನ್ನೂ ಓದಿ : ದಾವಣಗೆರೆಯಲ್ಲಿ ರೆಬಲ್ಸ್ ಸಭೆ : ವಿಜಯೇಂದ್ರ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ ಎಂದ ಯತ್ನಾಳ್ - BJP dissidents meeting