ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ನಾಸೀರ್ ಹುಸೇನ್ ಗೆಲುವಿನ ಬಳಿಕ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಲಾಗಿದೆ ಎಂದು ಆರೋಪಿಸಿ, ಬಿಜೆಪಿ ಶಾಸಕರು ವಿಧಾನಸೌಧ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಮತ್ತೊಂದು ಕಡೆ ಯುವ ಮೋರ್ಚಾ ಕಾರ್ಯಕರ್ತರು, ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ವಿಧಾನಸೌಧ ಪೊಲೀಸ್ ಠಾಣೆ ಎದುರು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಸೇರಿ ಹಲವರು ಭಾಗವಹಿಸಿದ್ದರು. ಕಾಂಗ್ರೆಸ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ನಾಯಕರು, ಈ ಸಂಬಂಧ ಬುಧವಾರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮತ್ತು ಕಾಂಗ್ರೆಸ್ ಕಚೇರಿಗಳಿಗೆ ಮುತ್ತಿಗೆ ಹಾಕುವ ಬಗ್ಗೆ ಕರೆ ಕೊಟ್ಟರು.
ಕೆಪಿಸಿಸಿ ಕಚೇರಿ ಮುತ್ತಿಗೆ: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಪಕ್ಷದ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿದರು. ಮುತ್ತಿಗೆ ಯತ್ನಕ್ಕೆ ಅವಕಾಶ ನೀಡದ ಪೊಲೀಸರು, ಪ್ರತಿಭಟನಾನಿತರರನ್ನು ವಶಕ್ಕೆ ಪಡೆದು ಪರಿಸ್ಥಿತಿ ನಿಯಂತ್ರಿಸಿದರು.
ಸರ್ಕಾರಕ್ಕೆ ನೈತಿಕತೆ ಇಲ್ಲವೆಂದ ಅಶೋಕ್: ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ''ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಲಾಗಿದ್ದು, ನಾಳೆ ಪಾಕಿಸ್ತಾನ ಬಾವುಟವನ್ನೂ ಹಾರಿಸಿ ಬಿಡುತ್ತಾರೆ. ಹಾಗಾಗಿ ಇದಕ್ಕೆಲ್ಲ ಅವಕಾಶ ನೀಡಿದ ಕಾಂಗ್ರೆಸ್ ಸರ್ಕಾರಕ್ಕೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ಕೂಡಲೇ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ದೂರು ನೀಡಲಾಗುವುದು'' ಎಂದು ತಿಳಿಸಿದರು.
ವಿಧಾನಸೌಧ ಪೊಲೀಸ್ ಠಾಣೆ ಎದುರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಜನ ಕಂಡು ಕೇಳರಿಯದ ಘಟನೆ ನಡೆದಿದೆ. ಏಳೂವರೆ ಕೋಟಿ ಜನರ ಸ್ಥಳ ವಿಧಾನಸೌಧ, ಪ್ರಜಾಪ್ರಭುತ್ವದ ಶಕ್ತಿ ಕೇಂದ್ರ ವಿಧಾನಸೌಧ, ಇಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ನಾಸಿರ್ ಹುಸೇನ್ ಪರ ಸಿಎಂ ಸೇರಿ ಕಾಂಗ್ರೆಸ್ ನಾಯಕರೆಲ್ಲ ಸೇರಿ ಪ್ರಚಾರ ನಡೆಸಿದ್ದರು'' ಎಂದು ಕಿಡಿಕಾರಿದರು.
''ಮೊನ್ನೆ ನಗರದ ಅರಮನೆ ಮೈದಾನದಲ್ಲಿ ಸಂವಿಧಾನ ಜಾಥಾ ಮಾಡಿದರು. ಯಾರ ಕೈಗೆ ಸಂವಿಧಾನ ಕೊಡಬೇಕು? ಸಂವಿಧಾನ ರಕ್ಷಣೆ ಮಾಡುವವರ ಕೈಗೆ ದೇಶವನ್ನು ಕೊಡಬೇಕು. ಸಂವಿಧಾನ ಹಾಗೂ ಭಾರತ ಮಾತೆಗೆ ಗೌರವ ಕೊಡುವುದು ಇದೆನಾ? ಈ ಸರ್ಕಾರ ಒಂದು ಕ್ಷಣವೂ ಇರಬಾರದು, ಹಾಗಾಗಿ ಬುಧವಾರ ರಾಜ್ಯಪಾಲರನ್ನು ಭೇಟಿ ಮಾಡುತ್ತೇನೆ, ನಮ್ಮೆಲ್ಲ ನಾಯಕರ ನಿಯೋಗದೊಂದಿಗೆ ಭೇಟಿ ನೀಡಿ, ಕಾಂಗ್ರೆಸ್ ಸರ್ಕಾರ ವಜಾಗೊಳಿಸಲು ದೂರು ನೀಡಲಿದ್ದೇವೆ'' ಎಂದರು.
ಸಿ.ಟಿ ರವಿ ಆಕ್ರೋಶ: ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಸಿ. ಟಿ. ರವಿ, ''ಕಾಶ್ಮೀರ ಕಣಿವೆಯಲ್ಲಿ ಕೇಳುತ್ತಿದ್ದ ಘೋಷಣೆಯು ಈ ಹಿಂದೆ ಫ್ರೀಡಂ ಪಾರ್ಕ್ವರೆಗೆ ಬಂದಿದೆ. ಕಾಂಗ್ರೆಸ್ ಬೆಂಬಲಿಸುವವರು ಇಂತಹವರು ಇರಬೇಕು. ಅತಿಯಾದ ಓಲೈಕೆಯ ಪರಿಣಾಮ ಈ ಸ್ಥಿತಿಗೆ ಬಂದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಅಂತವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು'' ಎಂದು ಆಗ್ರಹಿಸಿದರು.
ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ: ಸೊಮೊಟೊ ಪ್ರಕರಣ ದಾಖಲು