ಬಾಗಲಕೋಟೆ: ಬಂತನಾಳ ಶ್ರೀಗಳು, ದಿವಂಗತ ಹಳಕಟ್ಟಿ ಸೇರಿದಂತೆ ಹಲವು ಹಿರಿಯರು ಸೇರಿ ಬಿಎಲ್ಡಿಇ ಸಂಸ್ಥೆ ಕಟ್ಟಿದ್ದಾರೆ. ಯಾರೋ ಕಟ್ಟಿರುವ ಹುತ್ತಕ್ಕೆ ಹಾವಾಗಿ ಬಂದು ಬಿಎಲ್ಡಿಇ ಸಂಸ್ಥೆ ಅಧ್ಯಕ್ಷನಾಗಿ ಮಜಾ ಮಾಡುತ್ತಿದ್ದಿಯಾ. ಸಂಸ್ಥೆಯಿಂದ ಹೊರ ಬಂದು ಸಂಸ್ಥೆ, ಕಾರ್ಖಾನೆಯನ್ನು ಕಟ್ಟು. ಅವಾಗ ನಿನ್ನ ಯೋಗ್ಯತೆ ಏನೆಬುಂದು ಗೊತ್ತಾಗುತ್ತದೆ. ನಿನ್ನ ಗೌಡಿಕೆ, ಅಧಿಕಾರ ದರ್ಪ ನಮ್ಮ ಮುಂದೆ ಇನ್ಮೇಲೆ ತೋರಿಸಬೇಡ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಅವರು ಸಚಿವ ಎಂ.ಬಿ. ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.
ನವನಗರದ ಪತ್ರಿಕಾಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಶೆಡ್ ಗಿರಾಕಿ ಮತ್ತು ನನ್ನನ್ನು ದನ ಕಾಯುವವನು ಎಂದು ಹೇಳಿಕೆ ನೀಡಿರುವ ನಿನ್ನ ಯೋಗ್ಯತೆ ಏನೆಂಬುದು ಜನರಿಗೆ ಗೊತ್ತಿದೆ. ನಾನು ಮಂತ್ರಿಯಾಗಿ, ಒಬ್ಬ ಉದ್ಯಮಿಯಾಗಿ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ನಿನ್ನ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರ ಮಾಡಿಲ್ಲ ಎಂದು ಆಣೆ ಮಾಡಿ ಹೇಳು: ಬಸವೇಶ್ವರ ಸಕ್ಕರೆ ಕಾರ್ಖಾನೆ ಕಟ್ಟುತ್ತೇನೆ, ಉದ್ಯೋಗ ಕೊಡುತ್ತೇನೆಂದು ಜಮೀನನ್ನು ಕಡಿಮೆ ದರದಲ್ಲಿ ಖರೀದಿಸಿ, ಈಗ ತಮಿಳುನಾಡಿನವರಿಗೆ ಮಾರಾಟ ಮಾಡಿದ್ದು ಗೊತ್ತಿದೆ. ಕೆಐಎಡಿಬಿಯಿಂದ ಬೇರೆಯವರ ಹೆಸರಿನಲ್ಲಿ ನಿವೇಶನ ಖರೀದಿಸಿ, ತಾವು ಆಸ್ತಿ ಮಾಡಿಕೊಂಡಿದ್ದು ಗೊತ್ತಿದೆ. ಕೈಗಾರಿಕೆ ಕಟ್ಟಿ ಎಷ್ಟು ಜನರಿಗೆ ಉದ್ಯೋಗ ನೀಡಿದ್ದೀಯಾ ಹೇಳು. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡು. ರಾಜಕೀಯಕ್ಕೆ ಬಂದ ನಂತರ ಹಾಗೂ ನೀರಾವರಿ ಸಚಿವರಾದ ಬಳಿಕ ಒಂದು ಭ್ರಷ್ಟಾಚಾರ, ಯಾರದ್ದೂ ಆಸ್ತಿ ಕಬಳಿಸಿಲ್ಲ ಎಂದು ನಿನ್ನ ತಂದೆ, ತಾಯಿ ಮೇಲೆ ಆಣೆ ಮಾಡಿ ಹೇಳು ಎಂದು ನಿರಾಣಿ ಸವಾಲು ಹಾಕಿದರು.
ಇದನ್ನೂ ಓದಿ: ವಿಪಕ್ಷಗಳನ್ನು ಬೆದರಿಸಿ ಬಾಯಿ ಮುಚ್ಚಿಸಲಾಗಲ್ಲ, ಹೋರಾಟ ನಿಲ್ಲಲ್ಲ: ವಿಜಯೇಂದ್ರ - BY Vijayendra