ಶಿವಮೊಗ್ಗ: ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪಟ್ಟಣದಲ್ಲಿ ಡೆಂಗ್ಯೂ ಹೆಚ್ಚಳವಾಗಿರುವ ಕಾರಣ ಶಿಕಾರಿಪುರ ಶಾಸಕರು, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ ವಿಜಯೇಂದ್ರ ಯಡಿಯೂರಪ್ಪ ಅವರು ಇಂದು ಸಂಜೆ ದಿಢೀರ್ ಶಿರಾಳಕೊಪ್ಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಅನಾರೋಗ್ಯ ಪೀಡಿತ ಜನರಿಗೆ ಉತ್ತಮ ಸೇವೆಯನ್ನು ವೈದ್ಯರು ನೀಡಬೇಕು, ಅನಾವಶ್ಯಕವಾಗಿ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಬಾರದು. ಸಾಧ್ಯವಾದಷ್ಟು ಸರ್ಕಾರಿ ಆಸ್ಪತ್ರೆಯಲ್ಲಿಯೇ ಬಡವರಿಗೆ ಚಿಕಿತ್ಸೆ ನೀಡಬೇಕು. ಆರೋಗ್ಯ ಸಿಬ್ಬಂದಿ ಜನರ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಅನಾರೋಗ್ಯ ಪೀಡಿತರನ್ನು ಮಾತನಾಡಿಸಿ ಆಸ್ಪತ್ರೆಯಲ್ಲಿ ಲಭಿಸುತ್ತಿರುವ ಸೇವೆ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ನಂತರ ನೂತನವಾಗಿ ನಿರ್ಮಾಣವಾಗುತ್ತಿರುವ 50 ಹಾಸಿಗೆಯ ಆಸ್ಪತ್ರೆಗೆ ಭೇಟಿ ನೀಡಿ, ಕಾಮಗಾರಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಸ್ಪತ್ರೆಗೆ ಬೇಕಾಗಿರುವ ಮೂಲ ಸೌಕರ್ಯಗಳ ಪಟ್ಟಿ ಹಾಗೂ ಅವಶ್ಯಕತೆ ಇರುವ ಸಿಬ್ಬಂದಿಯ ಪಟ್ಟಿಯನ್ನು ನೀಡಿ, ಸರ್ಕಾರದಿಂದ ಮಂಜೂರು ಮಾಡಿಸುವುದಾಗಿ ವೈದ್ಯಾಧಿಕಾರಿಗಳಿಗೆ ತಿಳಿಸಿದರು.
ಇದೇ ವೇಳೆ, ಶಂಕಿತ ಡೆಂಗ್ಯೂಗೆ ಸಾವನ್ನಪ್ಪಿದ 9 ತಿಂಗಳ ಮಗುವಿನ ಮನೆಗೆ ಭೇಟಿ ನೀಡಿದರು. ಈ ವೇಳೆ, ಮಗುವಿನ ಪೋಷಕರಿಗೆ ಸಾಂತ್ವನ ಹೇಳಿದರು. ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ವಿರೇಂದ್ರ ಪಾಟೀಲ್, ನಗರಾಧ್ಯಕ್ಷರಾದ ಚೆನ್ನವೀರ ಶೆಟ್ರು, ಉಪಾಧ್ಯಕ್ಷರಾದ ನವೀದ್, ಸಾಧಿಕ, ಶ್ರೀ ಕೆಜಿಎನ್ ಅಯೂಬ್ , ಖಾನಿ ಅಯುಬ್ ಉಪಸ್ಥಿತರಿದ್ದರು.
ಇದನ್ನೂ ಓದಿ : ವ್ಯಾಪಕವಾಗಿ ಹಬ್ಬುತ್ತಿರುವ ಡೆಂಗ್ಯೂ ಬಗ್ಗೆ ಸುದೀರ್ಘ ಚರ್ಚೆ; ಟಾಸ್ಕ್ ಫೋರ್ಸ್ ರಚನೆಗೆ ಸಿಎಂ ಸೂಚನೆ - CM MEETING