ಬೆಂಗಳೂರು : ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಕೊಡಗಿನ ಬಾಲಕಿ ಮೀನಾ ಎಂಬುವವರು ಖುಷಿಯಲ್ಲಿ ಮನೆಗೆ ಬರುವಾಗಲೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಖಂಡಿಸಿದ್ದಾರೆ. ಹೆಣ್ಣುಮಕ್ಕಳ ರಕ್ಷಣೆಗೆ ಮುಂದಾಗಲಿ, ಇಲ್ಲವಾದರೆ ಸರಣಿ ಘಟನೆಗಳ ಹೊಣೆ ಹೊತ್ತು ರಾಜೀನಾಮೆ ನೀಡಿ ಹೊರಗೆ ಹೋಗಲಿ ಎಂದು ಆಗ್ರಹಿಸಿದ್ದಾರೆ.
ಘಟನೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಪ್ರತಿಕ್ರಿಯೆ ನೀಡಿರುವ ವಿಜಯೇಂದ್ರ, ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾಳ ಹತ್ಯೆಯ ನೆರಳು ಸರಿಯುವ ಮುನ್ನವೇ ಕೊಡಗಿನಲ್ಲಿ ಮತ್ತೊಂದು ಪೈಶಾಚಿಕ ಘಟನೆ ವರದಿಯಾಗಿದೆ. ಮೀನಾ ಎಂಬ ವಿದ್ಯಾರ್ಥಿನಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದ ಸಂಭ್ರಮದ ಕ್ಷಣ ಅನುಭವಿಸುತ್ತಾ ಶಾಲೆಯಿಂದ ಮನೆಗೆ ಹಿಂದಿರುಗುವಾಗ ಕ್ರೂರವಾಗಿ ಕೊಲೆಯಾಗಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದಿದ್ದಾರೆ.
ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿಟ್ಟುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿರುವ ಸರ್ಕಾರದಿಂದ ಕೊಲೆಗಡುಕರಿಗೆ, ದುಷ್ಟರಿಗೆ ಭಯವೇ ಇಲ್ಲದಂತಾಗಿದೆ. ರಾಜ್ಯದಲ್ಲಿ ಹೆಣ್ಣುಮಕ್ಕಳು ಭಯದಿಂದ ಬದುಕಬೇಕಾದ ದುಃಸ್ಥಿತಿ ತಂದೊಡ್ಡಿರುವ ಕಾಂಗ್ರೆಸ್ ಸರ್ಕಾರ ಜನರ ಪಾಲಿಗೆ ಕಂಟಕ ಪ್ರಾಯವಾಗಿದೆ. ಹದಗೆಟ್ಟ ಕಾನೂನು ಸುವ್ಯವಸ್ಥೆ ನಿಯಂತ್ರಿಸಲಾಗದ ಕಾಂಗ್ರೆಸ್ ಸರ್ಕಾರ ತನ್ನ ಜಾಣ ನಿದ್ದೆಯಿಂದ ಎಚ್ಚರಗೊಂಡು ಹೆಣ್ಣುಮಕ್ಕಳ ರಕ್ಷಣೆಗೆ ಮುಂದಾಗಲಿ. ಇಲ್ಲವಾದರೆ ಸರಣಿ ಘಟನೆಗಳ ಹೊಣೆ ಹೊತ್ತು ರಾಜೀನಾಮೆ ನೀಡಿ ಹೊರಗೆ ಹೋಗಲಿ ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅದೆಷ್ಟು ಅರಾಜಕತೆ ಸೃಷ್ಟಿಸಿದೆ ಎಂದರೆ, ಮನೆಯಿಂದ ಶಾಲೆ, ಕಾಲೇಜಿಗೆ ಹೋದ ಮಕ್ಕಳು ಮರಳಿ ಮನೆ ಸೇರುವ ಮುನ್ನವೇ ಬೀದಿ ಹೆಣವಾಗಿ ಬೀಳುತ್ತಿದ್ದಾರೆ. ಕೊಡಗಿನಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಶಾಲೆಗೆ ಕೀರ್ತಿ ತಂದ ಬಾಲಕಿ ಮೀನಾ ಖುಷಿಯಲ್ಲಿ ಮನೆಗೆ ಬರುವಾಗಲೇ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾಳೆ. ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಸರ್ಕಾರದ ದಾಹ ತೀರಲು ಇನ್ನು ಎಷ್ಟು ಹೆಣ್ಣು ಮಕ್ಕಳ ಜೀವ ಬೇಕು ಹೇಳಿ? ಎಂದು ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಪ್ರಶ್ನಿಸಿದೆ.
ಇದನ್ನೂ ಓದಿ : ನೇಹಾ ಹಿರೇಮಠ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು: ಬಿ.ವೈ.ವಿಜಯೇಂದ್ರ - B Y Vijayendra