ಬೆಳಗಾವಿ : ಮುಡಾ ಕಾರ್ಮೋಡ ಮುಖ್ಯಮಂತ್ರಿ ಕುರ್ಚಿ ಆವರಿಸಿಕೊಂಡಿದೆ. ಒಬ್ಬರಾದ ಮೇಲೆ ಒಬ್ಬ ಸಚಿವರು ಸಿದ್ದರಾಮಯ್ಯ ಐದು ವರ್ಷ ಪೂರೈಸುತ್ತಾರೆ ಎನ್ನುತ್ತಿದ್ದಾರೆ. ಅದು ಸಾಧ್ಯವಿಲ್ಲ ಅಂತಾ ಅವರಿಗೂ ಗೊತ್ತಿದೆ. ಆದರೆ, ಸಿಎಂ ಮನಸ್ಸು ಗೆಲ್ಲಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಲೇವಡಿ ಮಾಡಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕೋಮಾದಲ್ಲಿದೆ ಎಂದು ಜನ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಶುರು ಆಗಿಲ್ಲ. ಹೊಸ ಕೆಲಸ ಘೋಷಣೆ ಮಾಡಿಲ್ಲ. ಸಿಎಂ ಮತ್ತು ಸಚಿವರಿಗೆ ಬೆಂಗಳೂರೇ ಕರ್ನಾಟಕ ಎಂಬ ಭಾವನೆ ಬಂದಿದೆ. ಯಾರೂ ಜಿಲ್ಲಾ ಪ್ರವಾಸ ಕೈಗೊಂಡಿಲ್ಲ. ಪ್ರಗತಿ ಪರಿಶೀಲನೆ ಮಾಡಿಲ್ಲ. ಹೊಸ ಗುದ್ದಲಿ ಪೂಜೆ ಮಾಡಿಲ್ಲ, ಗುದ್ದಲಿಯೂ ಕಾಣಿಸುತ್ತಿಲ್ಲ ಎಂದು ಕಿಡಿಕಾರಿದರು.
ಕಳೆದ ಮೂರು-ನಾಲ್ಕು ತಿಂಗಳಿನಿಂದ ಜನರ ಪರವಾಗಿ ಸರ್ಕಾರ ಇಲ್ಲದ ವಾತಾವರಣ ನಿರ್ಮಾಣವಾಗಿದೆ. ಗ್ಯಾರಂಟಿಗಳ ಬಗ್ಗೆ ಉದ್ದುದ್ದ ಭಾಷಣ ಮಾಡಿ, ಲೋಕಸಭೆ ಚುನಾವಣೆ ವೇಳೆ ಮೂರು ಕಂತಿನ ಹಣ ಬಿಡುಗಡೆ ಮಾಡಿದರು. ಲೋಕಸಭೆ ಚುನಾವಣೆ ಬಳಿಕ ಗೃಹಲಕ್ಷ್ಮಿ ಸೇರಿ ಎಲ್ಲವನ್ನೂ ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಉತ್ತರ ಕರ್ನಾಟಕವನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ : ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ ಹೊಸ ಸಿಎಂ ಇರುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ದುರಂತ ಎಂದರೆ ಈ ಸರ್ಕಾರ ಬಂದ ಮೇಲೆ ಉತ್ತರ ಕರ್ನಾಟಕದ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಉ.ಕ ವನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ. ಇದು ಉತ್ತರ ಕರ್ನಾಟಕ ವಿರೋಧಿ ಸರ್ಕಾರ. ಅಭಿವೃದ್ಧಿ ಹೀನ, ಜನ ವಿರೋಧಿ ಸರ್ಕಾರ. ಇದು ಎಷ್ಟು ಬೇಗ ತೊಲಗುತ್ತದೆಯೋ ಅಷ್ಟು ಒಳ್ಳೆಯದು ಎಂದು ವಿಜಯೇಂದ್ರ ಕಿಡಿಕಾರಿದರು.
ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವ ಕೇಂದ್ರದಲ್ಲೂ ಆಚರಿಸುವ ಕುರಿತು ಮಾಧ್ಯಮಗಳ ಪ್ರಶ್ನೆಗೆ, ಪ್ರಮುಖ ಮುಖಂಡರ ಜೊತೆಗೆ ಚರ್ಚಿಸಿ, ಕೇಂದ್ರದ ಗಮನ ಸೆಳೆಯುತ್ತೇವೆ ಎಂದು ಹೇಳಿದರು.
ಹರಿಯಾಣ, ಜಮ್ಮು ಕಾಶ್ಮೀರದ ಫಲಿತಾಂಶವನ್ನು ನಾವು ನೋಡಿದ್ದೇವೆ. ಹರಿಯಾಣದ ಪ್ರಜ್ಞಾವಂತ ಮತದಾರರು ಮೂರನೇ ಬಾರಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಬೋಗಸ್ ಗ್ಯಾರಂಟಿಗಿಂತ ಮೋದಿ ಗ್ಯಾರಂಟಿ ಲೇಸು ಎಂದು ಮತ ಹಾಕಿದ್ದಾರೆ. ಸಾಕಷ್ಟು ಅಪಪ್ರಚಾರದ ನಡುವೆಯೂ ಐತಿಹಾಸಿಕ ಗೆಲುವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಅಧಿಕಾರಕ್ಕೆ ಬಂದಿಲ್ಲ. ಆದರೆ, 29 ಸ್ಥಾನ ಗೆದ್ದು ಬಲಿಷ್ಠ ವಿರೋಧ ಪಕ್ಷವಾಗಿ ಹೊರ ಹೊಮ್ಮಿದೆ. ಅಲ್ಪಸಂಖ್ಯಾತರ ತುಷ್ಠೀಕರಣ ಮಾಡುವ ಕಾಂಗ್ರೆಸ್ ಕೇವಲ 6 ಸ್ಥಾನ ಗೆದ್ದು ಧೂಳಿಪಟವಾಗಿದೆ. ಇದು ಮಹಾರಾಷ್ಟ್ರದ ಚುನಾವಣೆ ಮೇಲೂ ಪರಿಣಾಮ ಬೀರಲಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಯಾವುದೇ ಕ್ಷಣದಲ್ಲಿ ಸಿಎಂ ರಾಜೀನಾಮೆ ನೀಡಬಹುದು: 87 ಕೋಟಿ ರೂ. ಹಗರಣ ಆಗಿದೆ ಎಂದು ಸಿಎಂ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಮುಡಾ ಹಗರಣದ ಬಗ್ಗೆ ಮಾತಾಡಲೇ ಇಲ್ಲ. ಎಲ್ಲಿ ಚರ್ಚಿಸಿದರೆ ಮುಜುಗರ ಆಗುತ್ತದೆ ಎಂದು ಪಲಾಯನವಾದ ಮಾಡಿದರು. ತಪ್ಪು ಒಪ್ಪಿಕೊಂಡು 14 ಸೈಟ್ಗಳನ್ನು ವಾಪಸ್ ನೀಡಿದ್ದಾರೆ. ಸಿದ್ದರಾಮಯ್ಯ ಎಲ್ಲೋ ಒಂದು ಕಡೆ ಅಸಹಾಯಕತೆ, ನೋವಿನಲ್ಲಿದ್ದಾರೆ. ವಿಶ್ವಾಸ ಕಳೆದುಕೊಂಡಿದ್ದಾರೆ. ಹಾಗಾಗಿ, ಯಾವುದೇ ಕ್ಷಣದಲ್ಲಿ ಸಿಎಂ ರಾಜೀನಾಮೆ ನೀಡಬಹುದು. ಇನ್ನು ಐದು ವರ್ಷ ಅವರೇ ಸಿಎಂ ಎನ್ನುತ್ತಾ ಅವರದೇ ಸಚಿವರು ಗುಪ್ತ ಸಭೆ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಕುಟುಕಿದರು.
ದೇಶದಲ್ಲಿ ಕರ್ನಾಟಕ ಅಭಿವೃದ್ಧಿಯಲ್ಲಿ ಈ ಸರ್ಕಾರ ನಂ. 1 ಅಲ್ಲ. ಸಿದ್ದರಾಮಯ್ಯ ಆರೋಪಿ ನಂ.1 ಅಪರಾಧಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಭಂಡತನ ಬಿಟ್ಟು ಎಷ್ಟು ಬೇಗ ರಾಜೀನಾಮೆ ಕೊಡುತ್ತಾರೆ ಅಷ್ಟು ಒಳ್ಳೆಯದು ಎಂದು ಬಿಜೆಪಿ ರಾಜ್ಯಾಧ್ಯಕ್ಷರು ವಾಗ್ದಾಳಿ ಮಾಡಿದರು.
ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಭೇಟಿಯಾಗಿದ್ದೆ: ರಮೇಶ್ ಜಾರಕಿಹೊಳಿ ಅವರನ್ನು ಹುಡುಕುತ್ತಿದ್ದೇನೆ. ಅವರು ಸಿಗುತ್ತಿಲ್ಲ. ಹಾಗಾಗಿ, ಸತೀಶ್ ಜಾರಕಿಹೊಳಿ ಸಿಕ್ಕರು. ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಭೇಟಿಯಾಗಿದ್ದೆ. ಇದರಲ್ಲಿ ರಾಜಕಾರಣ ಹುಡುಕುವ ಅವಶ್ಯಕತೆ ಇಲ್ಲ. ನಮ್ಮ ಪಕ್ಷದ ಜೊತೆಗೆ ಎಲ್ಲ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಒಳ್ಳೆಯದು ಎಂದು ವಿಜಯೇಂದ್ರ ಹೇಳಿದರು.
ಮಾಧ್ಯಮಗೋಷ್ಟಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ವಿಠಲ ಹಲಗೇಕರ್, ದುರ್ಯೋಧನ ಐಹೊಳೆ, ಮಾಜಿ ಶಾಸಕರಾದ ಡಾ. ವಿಶ್ವನಾಥ ಪಾಟೀಲ, ಜಗದೀಶ್ ಮೆಟಗುಡ್ಡ, ಸಂಜಯ ಪಾಟೀಲ, ಅನಿಲ ಬೆನಕೆ, ಅರವಿಂದ ಪಾಟೀಲ ಸೇರಿ ಮತ್ತಿತರರು ಇದ್ದರು.
ಬಿಜೆಪಿ ಅವಧಿಯಲ್ಲಿ ನಡೆದ ಕೋವಿಡ್ ಹಗರಣ ಎಸ್ಐಟಿಗೆ ಹಸ್ತಾಂತರಿಸುವ ನಿರ್ಧಾರ ಕೈಗೊಂಡ ಸರ್ಕಾರದ ನಿರ್ಧಾರಕ್ಕೆ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಗಳಿಗೆ ಏನು ಮಾಡಬೇಕು ಅಂತಾ ತೋಚುತ್ತಿಲ್ಲ. ವಿರೋಧ ಪಕ್ಷಗಳನ್ನು ಬೆದರಿಸಿದರೆ ಸರೆಂಡರ್ ಆಗುತ್ತವೆ ಎನ್ನುವ ಭ್ರಮೆಯಲ್ಲಿದ್ದಾರೆ. ಈ ರೀತಿ ಹಳೆ ಪ್ರಕರಣಗಳನ್ನು ರೀ ಓಪನ್ ಮಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಗೆ ಅವರ ಇಲಾಖೆಯ ಪಿಡಿಓ ಸಮಸ್ಯೆಗಳನ್ನು ಆಲಿಸಲು ಸಮಯ ಇಲ್ಲ. ಆದರೆ, ಒಂದು ಗಂಟೆ ನನ್ನ ಬಗ್ಗೆ ಚರ್ಚಿಸಲು ಸುದ್ದಿಗೋಷ್ಠಿ ನಡೆಸುತ್ತಾರೆ. ಈ ನಾಲಾಯಕ ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತಾ ಇದರಿಂದ ಗೊತ್ತಾಗುತ್ತದೆ. ನಮ್ಮನ್ನು ಹೆದರಿಸುವುದರಿಂದ ಮುಖ್ಯಮಂತ್ರಿ ಸ್ಥಾನ ಉಳಿಯುತ್ತದೆ ಎನ್ನುವ ಭ್ರಮೆಯಲ್ಲಿ ಅವರಿದ್ದು, ಇದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಮುಖ್ಯಮಂತ್ರಿ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಸಿದ್ದರಾಮಯ್ಯ ಐದು ವರ್ಷ ಪೂರೈಸುತ್ತಾರೆಂದು ಹೇಳುವವರೇ ಸಿಎಂ ರೇಸ್ನಲ್ಲಿ ಮುಂದಿದ್ದಾರೆ; ವಿಜಯೇಂದ್ರ