ಬೆಂಗಳೂರು : ಜನಪ್ರತಿನಿಧಿಗಳು ಆಡಳಿತ ನಡೆಸಬೇಕು. ಆದರೆ, ಕರ್ನಾಟಕದಲ್ಲಿ ಆಡಳಿತವನ್ನ ಕೆಲ ಕುಟುಂಬಗಳು ಮತ್ತು ಈವೆಂಟ್ ಮ್ಯಾನೇಜ್ಮೆಂಟ್ನವರು ನಡೆಸುತ್ತಿದ್ದಾರೆ. ಯಾರದ್ದೋ ಮನೆಯ ಕಿಚನ್‍ನಲ್ಲಿ ಸರ್ಕಾರ ನಡೆಯುತ್ತಿದೆ ಎಂದೆನಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಅವಧಿಯನ್ನು ಅಸಮರ್ಥ ಸಂಪುಟ, ಅಭಿವೃದ್ಧಿ ಶೂನ್ಯ ಸರ್ಕಾರ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್ ಟೀಕಿಸಿದ್ದಾರೆ.
ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರ ಹೋಟೆಲ್ ಜಿ. ಎಂ ರಿಜಾಯ್ಸ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ಜನಪ್ರತಿನಿಧಿಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಬೆಲೆ ಹೆಚ್ಚಳ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಪಿಕ್ ಪಾಕೆಟ್ ಕಾಂಗ್ರೆಸ್ ಎಂದು ನಾವು ಈ ಹಿಂದೆ ಹೇಳಿದ್ದೆವು. ಅದನ್ನು ಸರ್ಕಾರ ಸರಿ ಮಾಡಿಕೊಂಡಿಲ್ಲ. ಕರ್ನಾಟಕದಲ್ಲಿ ಆಡಳಿತವನ್ನು ಕೆಲವು ಕುಟುಂಬದ ಸದಸ್ಯರು, ಇವೆಂಟ್ ಮ್ಯಾನೇಜ್‍ಮೆಂಟಿನ ಸದಸ್ಯರು ಸರ್ಕಾರ ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಈ ಸರ್ಕಾರ ನಡೆಯುತ್ತಿದೆ ಎಂದರು.
ವಿಧಾನಸೌಧದ ಆಡಳಿತ ಯಾರದೋ ಮನೆಯ ಕಿಚನ್‍ನಲ್ಲಿ ನಡೆಯುವಂತೆ ಭಾಸವಾಗುತ್ತಿದೆ. ಒಂದು ವರ್ಷದ ಈ ಸರ್ಕಾರದ ಅವ್ಯವಸ್ಥೆ ದಿನದಿಂದ ದಿನಕ್ಕೆ ಬಯಲಾಗುತ್ತಿದೆ. ಈ ಅಸಮರ್ಥ ಸರ್ಕಾರದ ವಿರುದ್ಧ ಬಿಜೆಪಿ ಜನಾಂದೋಲನ ನಡೆಸಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಪತನದ ಕುರಿತು ಏಕನಾಥ್ ಶಿಂಧೆ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸುನೀಲ್ ಕುಮಾರ್,
ರಾಜ್ಯ ಸರ್ಕಾರ ಅಭದ್ರಗೊಳಿಸುವ ಕಾರ್ಯವನ್ನ ಬಿಜೆಪಿ ಮಾಡಲ್ಲ. ಕಾಂಗ್ರೆಸ್ ನಾಯಕತ್ವದಲ್ಲಿ ಗೊಂದಲ ಉಂಟಾಗಿದೆ. ಅವರದ್ದೇ ಅಸಮಾಧಾನದಿಂದ ಸರ್ಕಾರ ಪತನವಾಗಬಹುದು ಎಂದರು.
ಸಿದ್ದರಾಮಯ್ಯ ಹಾಗೂ ಡಿ. ಕೆ ಶಿವಕುಮಾರ್ ನಡುವೆ ಮತ್ತೆ ಸಿಎಂ ವಾರ್ ಆರಂಭವಾಗಿದೆ. ಅದರದ್ದೇ ಭಾರದಿಂದ ಕುಸಿಯುತ್ತಿರೋ ಸರ್ಕಾರವಿದು. ಅವರೊಳಗೆ ಗೊಂದಲ ಇದೆ. ಜಾರಕಿಹೊಳಿ, ಗೃಹ ಸಚಿವರು ಮೀಟಿಂಗ್ ಮಾಡಿದ್ಧಾರೆ. ಅದೆಲ್ಲಾ ಹೊರಬರಲಿದೆ ಎಂದು ಹೇಳಿದರು.
ಯಾವ ಭಾರದಿಂದ ಸರ್ಕಾರ ಕುಸಿಯುತ್ತದೆ ನೋಡೋಣ. ಡಿ ಕೆ ಶಿವಕುಮಾರ್ ಭಾರದಿಂದ ಕುಸಿಯುತ್ತದೊ? ಸಿದ್ದರಾಮಯ್ಯ ಭಾರದಿಂದ ಕುಸಿಯುತ್ತದೆಯೋ? ನಾವು ಕಾದು ನೋಡುತ್ತೇವೆ. ಅವರವರ ಭಾರದಿಂದ ಕುಸಿದು ಬಿದ್ದರೆ ವಿಪಕ್ಷವಾಗಿ ನಾವು ಸುಮ್ಮನೆ ಕೂರೋದಿಲ್ಲ ಎಂದರು. ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ತಲೆದಂಡದ ಬಗ್ಗೆ ಮಾತನಾಡುವವರು ಮೊದಲು ತಮ್ಮ ತಲೆ ಉಳಿಸಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಟ್ ನೀಡಿದರು.
ಪರಿಷತ್ ಟಿಕೆಟ್ ಗೊಂದಲ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಘುಪತಿ ಭಟ್ ಅವರ ಮನವೊಲಿಕೆಗೆ ನಾನೇ ಸ್ವತಃ ಮಾತಾಡಿದ್ದೇನೆ. ಅವರು ಪಕ್ಷೇತರರಾಗಿ ಸ್ಪರ್ಧಿಸುವಷ್ಟು ಮುಂದೆ ಹೋಗಲ್ಲ ಎಂಬ ವಿಶ್ವಾಸವಿದೆ ಎಂದರು. ವಿಧಾನಸಭಾ ಚುನಾವಣೆ ಮುಗಿದು ಸರ್ಕಾರ ರಚನೆಯಾಗಿ ಒಂದು ವರ್ಷ ಮುಗಿಯುತ್ತಿದೆ. ಗೊತ್ತುಗುರಿ ಇಲ್ಲದ ಆಡಳಿತವನ್ನು ಕರ್ನಾಟಕದ ಜನತೆ ಕಳೆದ ಒಂದು ವರ್ಷದಲ್ಲಿ ನೋಡಿದ್ದಾರೆ. ಅಭಿವೃದ್ಧಿ ಶೂನ್ಯ ಸರಕಾರ ಇದು ಎಂದು ಟೀಕಿಸಿದರು.
ಈ ಒಂದು ವರ್ಷದ ಅವಧಿಯಲ್ಲಿ ಯಾವ ಯೋಜನೆಗೆ ಅನುದಾನ ಕೊಟ್ಟಿದ್ದಾರೆ ಎಂಬ ಮಾಹಿತಿಯನ್ನು ಸರ್ಕಾರ ಬಿಡುಗಡೆ ಮಾಡಬೇಕು. ಸ್ಥಳೀಯ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಯಾವ ಯೋಜನೆಗಳಿಗೆ, ಎಷ್ಟು ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನ ಕೊಟ್ಟಿದ್ದಾರೆ ಎಂದು ಸರ್ಕಾರ ಬಹಿರಂಗಪಡಿಸಿದರೆ ಸಾಕು ಎಂದು ವ್ಯಂಗ್ಯವಾಗಿ ನುಡಿದರು.
ಇಂಥ ಅಭಿವೃದ್ಧಿ ಶೂನ್ಯ ಆಡಳಿತ ನೀಡಿದ ಸರ್ಕಾರವನ್ನು ಕರ್ನಾಟಕದ ಜನತೆ ಯಾವತ್ತೂ ನೋಡಿರಲಿಲ್ಲ. ವಿಧಾನಸಭಾ ಕ್ಷೇತ್ರಗಳು, ಇಲಾಖೆಗಳಿಗೆ ಒಂದು ರೂಪಾಯಿ ಅನುದಾನವನ್ನೂ ಕೊಡದೆ ಒಂದು ವರ್ಷ ಕಾಲವನ್ನು ಈ ಸರ್ಕಾರ ಕಳೆದಿದೆ. ನಾವೆಲ್ಲ ಶಾಸಕರು ಒಂದು ವರ್ಷದಿಂದ ಒಂದು ಗುದ್ದಲಿ ಪೂಜೆ ಮಾಡಲಾಗಿಲ್ಲ. ಒಂದು ಅನುದಾನ ಬಂದಿದೆ ಎಂದು ಜನರ ಹತ್ತಿರ ಹೋಗಲೂ ಆಗಿಲ್ಲ ಎಂದು ವಿವರಿಸಿದರು.
ಸರ್ಕಾರಿ ನೌಕರರಿಗೆ ಸಂಬಳ ಸಿಗುತ್ತಿಲ್ಲ: ಜನರು ಕೂಡ ಈ ಸರ್ಕಾರದಿಂದ ಅನುದಾನ ಬರುವುದಿಲ್ಲ ಎಂಬಷ್ಟರ ಮಟ್ಟಿಗೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಸಂಪುಟವನ್ನು ಗಮನಿಸಿದರೆ ಇಡೀ ಸಂಪುಟವೇ ಅಸಮರ್ಥವಾಗಿದೆ. ಸಚಿವರ ಮೇಲೆ ಹಿಡಿತವಿಲ್ಲದೇ ಮುಖ್ಯಮಂತ್ರಿಗಳು ಅಸಮರ್ಥವಾಗಿದ್ದಾರೆ. ಯೋಜನೆ ರೂಪಿಸುವುದರಲ್ಲಿ ಮುಖ್ಯಮಂತ್ರಿಗಳು ಅಸಮರ್ಥವಾಗಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ಸಿಗುತ್ತಿಲ್ಲ ಅನ್ನುವಷ್ಟರ ಮಟ್ಟಿಗೆ ಅಸಮರ್ಥ ಮುಖ್ಯಮಂತ್ರಿಯ ಆಡಳಿತವನ್ನು ಕರ್ನಾಟಕದಲ್ಲಿ ನೋಡುತ್ತಿದ್ದೇವೆ ಎಂದು ವಿ. ಸುನೀಲ್ ಕುಮಾರ್ ಆರೋಪಿಸಿದರು.
ಕಾನೂನು ಸುವ್ಯವಸ್ಥೆ ನಿಭಾಯಿಸುವುದರಲ್ಲಿ ಗೃಹ ಸಚಿವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಬರ ಪರಿಹಾರದಲ್ಲಿ ಕಂದಾಯ ಸಚಿವರು ಎಷ್ಟು ದೊಡ್ಡ ಪ್ರಮಾಣದಲ್ಲಿ ವೈಫಲ್ಯ ಕಂಡಿದ್ದಾರೆಂದರೆ ಮಂತ್ರಿಮಂಡಲದ ಒಬ್ಬ ಸದಸ್ಯರೂ ಬರ ಪರಿಹಾರದ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ ಎಂದು ಅವರು ಆಕ್ಷೇಪಿಸಿದರು. ಹಣ ಬಿಡುಗಡೆ ಮಾಡಿಲ್ಲ. ಕಂದಾಯ ಸಚಿವರಿಂದ ಗ್ರಾಮೀಣಾಭಿವೃದ್ಧಿ ಸಚಿವರವರೆಗೆ ಎಲ್ಲ ಸಂಪುಟವು ಬರ ಪರಿಹಾರದ ನಿರ್ವಹಣೆಯಲ್ಲಿ ಅಸಮರ್ಥವಾಗಿದೆ ಎಂದು ಟೀಕಿಸಿದರು.
ರೈತರಿಗೆ ಈಗ ಹೊಸ ಸಾಲ ಸಿಗುತ್ತಿಲ್ಲ. ರೈತರ ಸಾಲದ ಬಡ್ಡಿ ಮನ್ನಾ ಮಾಡಿದ್ದಾಗಿ ಘೋಷಣೆ ಮಾಡಿ, 496 ಕೋಟಿ ಅನುದಾನವನ್ನು ಬಿಡುಗಡೆ ಮಾಡದ ಕಾರಣ ಪಿಎಲ್‍ಡಿ ಬ್ಯಾಂಕ್, ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳಲ್ಲಿ ರೈತರಿಗೆ ಮರುಸಾಲ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಅದಕ್ಕೆ ಕೃಷಿ- ಸಹಕಾರಿ ಸಚಿವರು ಇವತ್ತು ಅಸಮರ್ಥವಾಗಿರುವುದೇ ಕಾರಣ ಎಂದು ವಿಶ್ಲೇಷಿಸಿದರು.
ಈ ಸರ್ಕಾರ ಬಂದ ಬಳಿಕ ಕರ್ನಾಟಕದ ಒಬ್ಬನೇ ಒಬ್ಬ ರೈತನಿಗೆ ಹೊಸ ಪಂಪ್‍ಸೆಟ್ ಸಂಪರ್ಕ ಸಿಗಲಿಲ್ಲ. ರೈತರು ಹಣ ಕಟ್ಟಿದರೂ ಹೊಸ ಸಂಪರ್ಕ ಸಿಕ್ಕಿಲ್ಲ. 24 ಗಂಟೆ ವಿದ್ಯುತ್ ನಿರಂತರ ಬಿಡಿ; ಗ್ರಾಮೀಣ ಪ್ರದೇಶದಲ್ಲಿ 10-12 ಗಂಟೆ ವಿದ್ಯುತ್ ಕೊಡಲಾಗದ ಅಸಮರ್ಥ ಇಂಧನ ಸಚಿವರು ನಮ್ಮ ನಡುವೆ ಇದ್ದಾರೆ ಎಂದು ಟೀಕಿಸಿದರು.
ಶಿಕ್ಷಣದ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಗ್ರೇಸ್ ಮಾರ್ಕ್ ಕೊಟ್ಟಿದ್ದನ್ನು ಗಮನಿಸಿದರೆ ಶಿಕ್ಷಣ ಇಲಾಖೆ ಎಷ್ಟು ಅಸಮರ್ಥ ಎಂಬುದನ್ನು ನಾವು ನೋಡುತ್ತಿದ್ದೇವೆ. ಅಂಗನವಾಡಿಯವರಿಗೆ ಗೌರವಧನ ಹೆಚ್ಚಿಸಿಲ್ಲ; ಅಂಗನವಾಡಿಗಳ ಮೊಟ್ಟೆ ವಿತರಣೆಯಲ್ಲಿ ವ್ಯತ್ಯಾಸವಾಗಿದೆ. ಅಲ್ಲೂ ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಅಸಮರ್ಥರಾಗಿದ್ದಾರೆ ಎಂದು ದೂರಿದರು.
ಬ್ರ್ಯಾಂಡ್ ಬೆಂಗಳೂರು ಇವತ್ತು ದಿಕ್ಕೆಟ್ಟ ಬೆಂಗಳೂರಾಗಿದೆ. ಬೆಂಗಳೂರಿಗೆ ಯೋಜನೆ ರೂಪಿಸುವುದರಲ್ಲಿ ನಗರಾಭಿವೃದ್ಧಿ ಸಚಿವರು ಅಸಮರ್ಥರಾಗಿದ್ದಾರೆ. ಇದೊಂದು ಅಸಮರ್ಥ ಸಂಪುಟ; ಅಭಿವೃದ್ಧಿ ಶೂನ್ಯ ಸರ್ಕಾರ ಎಂದು ಆರೋಪಿಸಿದರು.