ಬೆಂಗಳೂರು: ಇಚ್ಛೆಗೂ ಸ್ವೇಚ್ಛಾಚಾರಕ್ಕೂ ವ್ಯತ್ಯಾಸವಿದೆ. ಬಿಜೆಪಿ ಶಾಸಕರಾಗಿದ್ದುಕೊಂಡು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವುದನ್ನು ಸ್ವೇಚ್ಛಾಚಾರವೆನ್ನದೆ ಬೇರೇನೂ ಹೇಳಲು ಸಾಧ್ಯವಿಲ್ಲ. ವರಿಷ್ಠರು ಈ ವಿಚಾರದಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಶಾಸಕ ಸುರೇಶ್ ಕುಮಾರ್ ಹೇಳಿದರು. ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಅವರು ಮಾತನಾಡಿದರು.
ಸೋಮಶೇಖರ್ ಗೆದ್ದು ಮೈಸೂರು ಉಸ್ತುವಾರಿಯಾದಾಗ ನಮ್ಮ ಕಾರ್ಯಕರ್ತರು ಚೆನ್ನಾಗಿ ನೋಡಿಕೊಂಡರು ಅಂತ ನನ್ನ ಬಳಿ ಹೇಳಿಕೊಂಡಿದ್ದರು. ಅದನ್ನು ಉಲ್ಲೇಖಿಸಿ ಅವರಿಗೆ ವೈಯಕ್ತಿವಾಗಿ ಪತ್ರ ಬರೆದಿದ್ದೆ. ಮೋದಿ ಮೂರನೇ ಬಾರಿ ಪ್ರಧಾನಿ ಆಗಬೇಕು ಅಂತ ಎಲ್ಲರ ಇಚ್ಛೆಯಿದೆ. ವೈಯಕ್ತಿಕ ಕಾರಣಕ್ಕೆ ನಾನು ಹೆಜ್ಜೆ ಇಟ್ಟೆ ಅನ್ನೋದು ಸರಿಯಲ್ಲ. ಅವರ ಕೆಲಸಗಳನ್ನು ಪಕ್ಷ ಹಾಗೂ ಹಿರಿಯರು ಗಮನಿಸುತ್ತಿದ್ದಾರೆ ಎಂದರು.
ಅಡ್ಡದಾರಿ ಮೂಲಕ ಹಣ ಸಂಗ್ರಹ, ದೂರು: ಬಿಡಿಎ ಮೂಲಕ ಚುನಾವಣೆಗೆ ಅಡ್ಡದಾರಿಯಿಂದ ಹಣ ಸಂಗ್ರಹಿಸುವ ಶಂಕೆಯಿದ್ದು, ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಡಲಾಗಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ ಇರುವ ಸಮಯದಲ್ಲಿ ಬಿಡಿಎ, ಶಿವರಾಮ ಕಾರಂತ ಬಡಾವಣೆಯಲ್ಲಿನ ಗುತ್ತಿಗೆದಾರರ ಪಾವತಿಗಾಗಿ 1 ಸಾವಿರ ಕೋಟಿಯಿಂದ 2 ಸಾವಿರ ಕೋಟಿ ಬೇಕಿದ್ದು, ಅದಕ್ಕಾಗಿ ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲ ನಿವೇಶನಗಳನ್ನು ಬ್ಯಾಂಕಿಗೆ ಅಡಮಾನ ಇಟ್ಟು ಹಣ ಪಡೆಯಲು ಹೊರಟಿದ್ದಾರೆ. ನೀತಿ ಸಂಹಿತೆ ಇರುವಾಗ ಇಷ್ಟೊಂದು ಭಾರಿ ಮೊತ್ತ ಪಡೆಯುವುದು ಅನುಮಾನಾಸ್ಪದವಾಗಿದೆ. ಗುತ್ತಿಗೆದಾರರಿಗೆ ಈಗಲೇ ಹಣ ಕೊಡಬೇಕೇ? ಅದರ ಹಿಂದೆ ಏನಿದೆ ಎಂದು ಪ್ರಶ್ನಿಸಿದರು.
ರಾಜ್ಯದ ಆಡಳಿತರೂಢ ಕಾಂಗ್ರೆಸ್ ಪಕ್ಷವು ಮೂಲಸೌಕರ್ಯ ಕಾಮಗಾರಿಗಳನ್ನು ಮುಂದುವರೆಸಲು ಗುತ್ತಿಗೆದಾರರಿಗೆ ಪಾವತಿ ನೆಪ ಒಡ್ಡಿ, ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲು ಅಡ್ಡದಾರಿಗಳಿಂದ ಹಣದ ವ್ಯವಸ್ಥೆ ಮಾಡಿಕೊಳ್ಳುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಲೋಕಸಭಾ ಚುನಾವಣೆ ಮುಗಿಯುವವರೆಗೆ ಬಿಡಿಎದಿಂದ ಯಾವುದೇ ರೀತಿಯ ಪಾವತಿಗಳು ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದೇವೆ. ನೀತಿ ಸಂಹಿತೆ ಮುಗಿಯುವವರೆಗೆ ಇಂಥ ದುಸ್ಸಾಹಸಕ್ಕೆ ಅವಕಾಶ ಕೊಡಬಾರದೆಂದು ಕೋರಿದ್ದೇವೆ ಎಂದರು.
ಏ.26ರಂದು ನಡೆಯುವ ಚುನಾವಣೆಗೆ ಸಂಬಂಧಿಸಿದ ಮೊದಲನೇ ಹಂತದಲ್ಲಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಕಡೆಯಿಂದ ಪ್ರತಿ ಅಭ್ಯರ್ಥಿಯ ಒಟ್ಟು ಕ್ರಿಮಿನಲ್ ಕೇಸ್ ಎಂಬ ಮಾಹಿತಿ ಇದೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಅಭ್ಯರ್ಥಿಗಳ ವಿರುದ್ಧ 18, ಬಿಜೆಪಿ ವಿರುದ್ಧ 10 ಮತ್ತು ಜೆಡಿಎಸ್ ವಿರುದ್ಧ 5 ಕೇಸುಗಳಿವೆ ಎಂದು ವಿವರಿಸಿದರು.
ಇದೇ ವೇಳೆ ಅವರು ಕಾನೂನು ವಿಭಾಗದ ಕೈಪಿಡಿಯನ್ನೂ ಬಿಡುಗಡೆ ಮಾಡಿದರು. ಕೈಪಿಡಿಯಲ್ಲಿ ಬರುವ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಚುನಾವಣಾ ನಿಯಮಗಳ ಬಗ್ಗೆ ಮತ್ತು ಚುನಾವಣಾ ಸಂಬಂಧಿತ ಕಾನೂನುಗಳನ್ನು ತಿಳಿಸಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇದರಲ್ಲಿ ಅಭಿಪ್ರಾಯ ಬರೆದಿದ್ದಾರೆ. ವಿಶ್ವದ ಅತ್ಯಂತ ದೊಡ್ಡ ಪಕ್ಷವಾದ ಬಿಜೆಪಿ ಕಾನೂನಿಗೆ ಅನುಗುಣವಾಗಿ ಸ್ಪರ್ಧೆ ಮಾಡಲಿದೆ. ಅದಕ್ಕಾಗಿ ಕಾನೂನಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕೈಪಿಡಿ ಹೊರತರಲಾಗಿದೆ ಎಂದು ತಿಳಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ತುಮಕೂರು: ಮಾಧುಸ್ವಾಮಿ ಭೇಟಿಯಾಗಿ ಮಾತುಕತೆ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ - Muddahanumegowda