ಬೆಂಗಳೂರು: ನಮ್ಮ ಪಕ್ಷದ ಹಿರಿಯರಾದ ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಕಾಂಗ್ರೆಸ್ ಮುಖಂಡರು ಮತ್ತು ಶಾಸಕರು ಕೆಟ್ಟ ಶಬ್ದಗಳಿಂದ ಮಾತನಾಡುತ್ತಿರುವುದು ಖಂಡನೀಯ. ಇದರ ವಿರುದ್ಧ ಎಸ್ಸಿ ಮೋರ್ಚಾವು ರಾಜ್ಯಾದ್ಯಂತ ಹೋರಾಟ ಮಾಡಲಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜುನಾಥ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ಮುಖಂಡರ ಅಕ್ರಮಗಳ ವಿರುದ್ಧ ಮಾತನಾಡಿದ್ದಾರೆ. ಅಲ್ಲದೆ, ತನಿಖೆಗೆ ಕೋರಿದ್ದಾರೆ. ನಮಗೆ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರ ಕುರಿತು ಅಪಾರವಾದ ಗೌರವವಿದೆ. ಆದರೆ, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ಸಿಗರ ಅಧಿಕಾರ ದುರ್ಬಳಕೆ ಕುರಿತು ಮಾತನಾಡಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ವಿವರಿಸಿದರು.
ಬಳಿಕ ಯು.ಬಿ.ವೆಂಕಟೇಶ್ ಅವರು ನಾರಾಯಣಸ್ವಾಮಿಯವರ ಕುರಿತು ಇಲ್ಲಸಲ್ಲದ ಮಾತನಾಡಿದ್ದಾರೆ. ನಾರಾಯಣಸ್ವಾಮಿಯವರು ಕಳೆದ 45 ವರ್ಷಗಳಿಂದ ದಲಿತರಿಗಾಗಿ ಹೋರಾಟ ಮಾಡಿದವರು. ನಮ್ಮ ಪಕ್ಷವು ಅವರನ್ನು ಗುರುತಿಸಿ ಎಂಎಲ್‍ಸಿ ಮಾಡಿದೆ. ವಿಪಕ್ಷ ನಾಯಕನ ಸ್ಥಾನವನ್ನೂ ಕೊಟ್ಟಿದೆ. ಈ ಮೂಲಕ ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯವನ್ನು ಕೊಟ್ಟಿದೆ ಎಂದರು.
ಛಲವಾದಿ ನಾರಾಯಣಸ್ವಾಮಿ ಅವರು ಬಿಜೆಪಿಯ ದಲಿತ ನಾಯಕರು. ಯು.ಬಿ.ವೆಂಕಟೇಶ್ ಅವರು ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಮಾತನಾಡುವಾಗ ಯೋಚಿಸಿ ಮಾತನಾಡಬೇಕು ಎಂದು ಎಚ್ಚರಿಸಿದರು. ದಲಿತ ನಾಯಕರು ಅಧಿಕಾರ ದುರ್ಬಳಕೆ ಮಾಡಿದಾಗ ಅದರ ಕುರಿತು ಮಾತನಾಡುವುದು ತಪ್ಪಲ್ಲ ಎಂದು ತಿಳಿಸಿದರು.
ತಮ್ಮ ಮೇಲಿನ ಆರೋಪ ಸರಿಯಲ್ಲ ಎಂದು ಕಾಂಗ್ರೆಸ್ಸಿಗರು ಸಾಬೀತು ಪಡಿಸುವಂತೆ ಅವರು ಸವಾಲು ಹಾಕಿದರು. ಇಂತಹ ದೂರು ಬಂದಾಗ ಅದರ ವಿರುದ್ಧ ಧ್ವನಿ ಎತ್ತುವ ಉದ್ದೇಶದಿಂದಲೇ ಛಲವಾದಿ ನಾರಾಯಣಸ್ವಾಮಿ ಅವರಿಗೆ ಈ ಹುದ್ದೆ ಕೊಡಲಾಗಿದೆ. ಪ್ರಿಯಾಂಕ್ ಖರ್ಗೆಯವರು ಛಲವಾದಿಯವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದು ಸರಿಯಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಖರ್ಗೆಯವರ ಕುಟುಂಬ ಅಕ್ರಮವಾಗಿ ನಿವೇಶನ ಪಡೆಯದೆ ಇದ್ದಲ್ಲಿ ಅದನ್ನು ಸಾಬೀತುಪಡಿಸಲು ಪ್ರಿಯಾಂಕ್ ಖರ್ಗೆಯವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದು ಒತ್ತಾಯಿಸಿದರು.
ನಂತರ ಆರೋಪ ಸಾಬೀತಾಗದೆ ಇದ್ದಲ್ಲಿ ಮತ್ತೆ ಸಚಿವರಾಗಬಹುದು. ಯು.ಬಿ.ವೆಂಕಟೇಶ್ ಅವರು ನಮ್ಮ ಪಕ್ಷದ ನಾಯಕರಾದ ನಾರಾಯಣಸ್ವಾಮಿಯವರ ಕುರಿತು ಇಲ್ಲಸಲ್ಲದ ಆರೋಪ ಮಾಡಿ, ವೈಯಕ್ತಿಕ ತೇಜೋವಧೆ ಮಾಡುವುದು ತಪ್ಪು ಎಂದು ಖಂಡಿಸಿದರು.
ಇದನ್ನೂ ಓದಿ: ಎತ್ತಿನಹೊಳೆ ಯೋಜನೆ ಮುಡಾಗಿಂತ ದೊಡ್ಡ ಹಗರಣ, ನ್ಯಾಯಾಧೀಶರಿಂದ ತನಿಖೆಯಾಗಲಿ: ಸಿ ಟಿ ರವಿ - Yettinhole project