ಬೆಂಗಳೂರು: ಜೂನ್ 3 ರಂದು ನಡೆಯಲಿರುವ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೇಂದ್ರ ವರಿಷ್ಠರಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಕಳುಸಿಕೊಡಲಾಗಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಅಭ್ಯರ್ಥಿಗಳ ಪಟ್ಟಿಗೆ ಅಂಕಿತ ಹಾಕಿದ್ದಾರೆ.
![BJP candidates list](https://etvbharatimages.akamaized.net/etvbharat/prod-images/11-05-2024/kn-bng-07-council-election-bjp-candidates-announced-script-7208083_11052024200534_1105f_1715438134_468.jpg)
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ. ಈಶಾನ್ಯ ಪದವೀಧರ ಕ್ಷೇತ್ರದಿಂದ ಮಾಜಿ ವಿಧಾನಪರಿಷತ್ ಸದಸ್ಯ ಅಮರನಾಥ ಪಾಟೀಲ್, ನೈರುತ್ಯ ಪದವೀಧರ ಕ್ಷೇತ್ರದಿಂದ ಶಿವಮೊಗ್ಗದ ಖ್ಯಾತ ವೈದ್ಯ ಡಾ. ಧನಂಜಯ ಸರ್ಜಿ, ಆಗ್ನೇಯ ಪದವೀಧರ ಕ್ಷೇತ್ರದಿಂದ ಹಾಲಿ ಸದಸ್ಯ ವೈ.ಎ. ನಾರಾಯಣಸ್ವಾಮಿ, ಬೆಂಗಳೂರು ಪದವೀಧರ ಕ್ಷೇತ್ರದಿಂದ ಹಾಲಿ ಅಭ್ಯರ್ಥಿ ಎ. ದೇವೇಗೌಡ, ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಇ.ಸಿ. ನಿಂಗರಾಜು ಅವರನ್ನು ಕಣಕ್ಕಿಳಿಸಲಾಗಿದೆ.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ಇಬ್ಬರು ಪಕ್ಷೇತರ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ - Council Election Nomination
ವಿಧಾನ ಪರಿಷತ್ನ 6 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿಯು 5 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಉಳಿದಂತೆ ನೈರುತ್ಯ ಶಿಕ್ಷಕರ ಕ್ಷೇತ್ರವನ್ನು ಮೈತ್ರಿ ಪಕ್ಷ ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 16 ರಂದು ಕೊನೆಯ ದಿನವಾಗಿದೆ. ಹಾಗಾಗಿ, ಇಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಜೆಡಿಎಸ್ ಪಕ್ಷ ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸಿಲ್ಲ.
ವಿಧಾನ ಪರಿಷತ್ ಸದಸ್ಯರಾಗಿದ್ದ ಆಯನೂರು ಮಂಜುನಾಥ್ ಮತ್ತು ಮರಿತಿಬ್ಬೇಗೌಡ ಅವರು ರಾಜೀನಾಮೆ ನೀಡಿರುವುದರಿಂದ ತೆರವಾಗಿರುವ ಎರಡು ಸ್ಥಾನ ಹಾಗೂ ಡಾ.ಚಂದ್ರಶೇಖರ ಬಿ. ಪಾಟೀಲ, ಎ. ದೇವೇಗೌಡ, ಡಾ. ವೈ.ಎ. ನಾರಾಯಣಸ್ವಾಮಿ, ಎಸ್.ಎಲ್. ಭೋಜೇಗೌಡ ಅವರು ಜೂನ್ 21 ರಂದು ನಿವೃತ್ತಿ ಹೊಂದುವುದರಿಂದ ತೆರವಾಗುವ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಮೇ 17 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಮೇ 20ರಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ. ಜೂನ್ 3 ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಜೂನ್ 6 ರಂದು ಮತ ಎಣಿಕೆ ಇರಲಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮುಂದುವರೆಯುತ್ತೆ: ಬಿ ಎಸ್ ಯಡಿಯೂರಪ್ಪ - JDS BJP Alliance Continue