ಬೆಂಗಳೂರು: "ಕರ್ನಾಟಕ ರಾಜ್ಯದಲ್ಲಿ ಬೆಲೆ ಹೆಚ್ಚಳ ಮಾಡುವ ಪರ್ವ, ಬೆಲೆ ಹೆಚ್ಚಳದ ಅಭಿಯಾನವನ್ನು ಈ ಸರ್ಕಾರ ತೆಗೆದುಕೊಂಡಿದೆ. ಇದರ ವಿರುದ್ಧ ಜೂನ್ 29ನೇ ತಾರೀಕು ರಾಜ್ಯದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಸು ಕರೆದುಕೊಂಡು ಹೋಗಿ ಹಾಲು ಕರೆದು ಜಿಲ್ಲಾಧಿಕಾರಿಗಳಿಗೆ ನೀಡಿ ವಿನೂತನ ಪ್ರತಿಭಟನೆ ನಡೆಸಲಿದ್ದೇವೆ" ಎಂದು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಈ ಕುರಿತು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, "ಈ ಸರ್ಕಾರವು ಕಣ್ಣಿದ್ದೂ ಕುರುಡಾಗಿದೆ. ಕಿವಿ ಇದ್ದರೂ ಕಿವುಡಾಗಿದೆ. ತಲೆ ಇದ್ದರೂ ಬುದ್ಧಿ ಭ್ರಮಣೆ ಆಗಿದೆ. ಸರ್ಕಾರದ ನೀತಿ, ನಿರ್ಧಾರ ಹಾಗೂ ಚಟುವಟಿಕೆಗಳನ್ನು ನೋಡಿದರೆ ಈ ಸರ್ಕಾರಕ್ಕೆ ಮನುಷ್ಯತ್ವ ಇಲ್ಲ ಎಂಬುದರ ಸ್ಪಷ್ಟ ಸೂಚನೆಗಳು ಗೊತ್ತಾಗುತ್ತವೆ. ಕರ್ನಾಟಕದಲ್ಲಿ ಡೆಂಗ್ಯೂ ಮನೆ ಮನೆಗೆ ಹಬ್ಬುತ್ತಿದೆ. ಡೆಂಗ್ಯೂಗೆ ಸರಿಯಾದ ಚಿಕಿತ್ಸೆ ಲಭಿಸುತ್ತಿಲ್ಲ. ವೈದ್ಯರು, ಔಷಧಿಯ ಲಭ್ಯತೆ ಇಲ್ಲ. ಡೆಂಗ್ಯೂ ಅವತಾರವನ್ನು ನಿಯಂತ್ರಿಸಲು, ಅದರ ಬಗ್ಗೆ ಮಾತನಾಡಲು ವೈದ್ಯಕೀಯ ಸಚಿವರು- ಆರೋಗ್ಯ ಸಚಿವರು ಎಲ್ಲಿ ಹೋಗಿದ್ದಾರೆ ಎಂಬುದನ್ನು ಹುಡುಕಬೇಕಾಗಿದೆ" ಎಂದು ತಿಳಿಸಿದರು.
"ಪಿಯುಸಿ, ಎಸ್ಸೆಸ್ಸೆಲ್ಸಿ, ಇಂಜಿನಿಯರಿಂಗ್, ವೈದ್ಯಕೀಯ ಸೇರಿ ಎಲ್ಲಾ ವಿದ್ಯಾರ್ಥಿಗಳ ಶುಲ್ಕ ಹೆಚ್ಚು ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಪೆಟ್ರೋಲ್-3 ರೂ., ಡೀಸೆಲ್- 3.50 ರೂ. ಬೆಲೆ ಹೆಚ್ಚಿಸಿದ್ದಾರೆ. ಎಲ್ಲರ ಮನೆಯಲ್ಲೂ ಹಸು ಇರಲಾರದು. ಆದರೆ, ಎಲ್ಲರ ಮನೆಯಲ್ಲಿ ದ್ವಿಚಕ್ರ ವಾಹನ ಇದ್ದೇ ಇದೆ. ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಬಿಸಿ ಎಲ್ಲರನ್ನೂ ತಟ್ಟಿದೆ. ಹಾಲಿನ ಬೆಲೆ ಹೆಚ್ಚಳದ ನಿರ್ಧಾರವನ್ನು ಈ ಸರ್ಕಾರ ಮಾಡಿದ್ದು, ಇದು ಮನೆಮುರುಕ ನಿರ್ಣಯ" ಎಂದು ಟೀಕಿಸಿದರು.
ಹಾಲಿನ ದರ ಹೆಚ್ಚಳಕ್ಕೆ ಪ್ಯಾಕೆಟ್‍ಗೆ 50 ಎಂಎಲ್ ಹೆಚ್ಚು ಹಾಲು ಕೊಡಲಾಗುತ್ತಿದೆ ಎಂದು ಸಿಎಂ ಹೇಳುತ್ತಾರೆ. ಜನರಿಗೆ 50 ಎಂಎಲ್ ಹೆಚ್ಚು ಬೇಕೆಂದು ನಿಮ್ಮನ್ನು ಯಾರು ಕೇಳಿದ್ದಾರೆ ಸಿದ್ದರಾಮಯ್ಯನವರೇ? ಎಂದು ರವಿಕುಮಾರ್ ಪ್ರಶ್ನಿಸಿದರು. ಕೇಳದೇ ಇರುವುದನ್ನು ಕೊಡುತ್ತೀರಲ್ಲವೇ? ಜನರು ಕೇಳುವುದನ್ನು ಮೊದಲು ಕೊಡಿ, ಪೆಟ್ರೋಲ್- ಡೀಸೆಲ್ ಬೆಲೆ ಕಡಿಮೆ ಮಾಡುವಂತೆ ಜನರು ಕೇಳುತ್ತಿದ್ದಾರೆ. ಅದನ್ನು ಮೊದಲು ಮಾಡಿ ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳಿಗೆ ಹಾಲು ಕರೆದು ನೀಡುವ ಪ್ರತಿಭಟನೆ: "29ನೇ ತಾರೀಕು ರಾಜ್ಯ ರೈತ ಮೋರ್ಚಾ ಘಟಕಗಳ ವತಿಯಿಂದ ವಿಭಿನ್ನ ಮಾದರಿಯ ಪ್ರತಿಭಟನೆ ಮಾಡಲಿದ್ದೇವೆ" ಎಂದು ಎನ್. ರವಿಕುಮಾರ್ ತಿಳಿಸಿದರು.
"ಟ್ರಾನ್ಸ್ಪೋರ್ಟ್ ಇಲ್ಲದೆ ಜೀವನ ನಡೆಯುವುದಿಲ್ಲ. ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯಿಂದ ಜನಜೀವನದ ಮೇಲೆ ತೀವ್ರ ದುಷ್ಪರಿಣಾಮ ಆಗಿದೆ. ಮಾನವ ಜೀವನದ ಮೇಲೆ ಈ ಸರ್ಕಾರ ಚೆಲ್ಲಾಟ ಆಡುತ್ತಿದೆ. ಮುಖ್ಯಮಂತ್ರಿಗಳಿಗೆ ಮನುಷ್ಯತ್ವ ಇದ್ದರೆ ಈ ಸರ್ಕಾರವು ಪೆಟ್ರೋಲ್- ಡೀಸೆಲ್ ಬೆಲೆ, ಹಾಲಿನ ದರ ಸೇರಿ ಏರಿಸಿದ ಎಲ್ಲಾ ದರವನ್ನೂ ವಾಪಸ್ ಪಡೆಯಬೇಕು. ಈ ಸರ್ಕಾರ ದೀನ ದಲಿತರ ಪರ ಇಲ್ಲ. ಹಿಂದುಳಿದವರ ಪರ ಇಲ್ಲದ, ಸಾಮಾನ್ಯ ಜನರ ಪರ ಇಲ್ಲದ ಸರ್ಕಾರ ಇದೆಂದು" ದೂರಿದರು.
ಎಮ್ಮೆಗೆ ಜ್ವರ ಬಂದರೆ ಎತ್ತಿಗೆ ಬರೆ: "ಈ ಸರ್ಕಾರಕ್ಕೆ ಜ್ವರ ಬಂದರೆ ಕರ್ನಾಟಕದ ಜನತೆಗೆ ಬರೆ ಹಾಕುತ್ತಾರೆ. ಎಮ್ಮೆಗೆ ಜ್ವರ ಬಂದರೆ ಎತ್ತಿಗೆ ಬರೆ ಹಾಕಿದರು ಎಂಬ ಕನ್ನಡ ಗಾದೆಯಂತಿದೆ ಈ ಸರ್ಕಾರದ ಕ್ರಮ. ಇದು ಬರೆ ಹಾಕುವ, ಬೆಲೆ ಹೆಚ್ಚು ಮಾಡುವ ಸರ್ಕಾರ. ಇದು ಜನರ ಅಹಿತ ಬಯಸುವ ಸಾಮಾನ್ಯ ಜನರ ವಿರೋಧಿ ಸರ್ಕಾರ. ಹಾಲಿನ ದರ ಏರಿಕೆಯಿಂದ ಟೀ, ಕಾಫಿ ಬೆಲೆ ಹೆಚ್ಚಾಗಲಿದೆ. ಹೋಟೆಲ್‍ಗಳ ತಿಂಡಿಗಳ ದರ ಹೆಚ್ಚಳ ಆಗಲಿದೆ. ಇದರ ಪರಿಣಾಮ ಜನರ ಮೇಲೆ ಆಗಲಿದೆ" ಎಂದು ಆಕ್ಷೇಪ ವ್ಯಕ್ತಪಡಿಸಿದರು.