ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟ ಅವರು ಮೊದಲ ದಿನವೇ ನಾಮಪತ್ರ ಸಲ್ಲಿಸಿದ್ದು, ಅವರಿಗೆ ವಾರ್ಷಿಕವಾಗಿ 6.5 ಲಕ್ಷ ರೂ. ಆದಾಯವಿದೆ ಎಂದು ಅಫಿಡವಿಟ್ನಲ್ಲಿ ಘೋಷಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟ 2022-23ರಲ್ಲಿ ವಾರ್ಷಿಕ 6,51,590 ಲಕ್ಷ ರೂ. ಆದಾಯ ಹೊಂದಿರುವುದಾಗಿ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ಇವರು 27,31,365 ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ 43.50 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದು, 80 ಸಾವಿರ ರೂ. ನಗದು ಹೊಂದಿದ್ದಾರೆ. ಇವರು ಕೆನರಾ ಬ್ಯಾಂಕ್ನಲ್ಲಿ 9,62,010 ರೂ. ಸಾಲ ಹೊಂದಿದ್ದಾರೆ. ಮಂಗಳೂರಿನ ಯೂನಿಯನ್ ಬ್ಯಾಂಕ್ನಲ್ಲಿ 90,822 ರೂ. ಕೆನರಾ ಬ್ಯಾಂಕ್ನಲ್ಲಿ 42,618 ರೂ. ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ 499 ರೂ. ಹಾಗೂ ಕೆನರಾ ಬ್ಯಾಂಕ್ನಲ್ಲಿ 1 ಲಕ್ಷ ರೂ. ಡೆಪಾಸಿಟ್ ಇದೆ. ಒಲಿವರ್ ಸ್ಟೀಲ್ ಸೊಲ್ಯೂಷನ್ನಲ್ಲಿ 7,20,425 ರೂ. ಹೂಡಿಕೆ ಮಾಡಿದ್ದಾರೆ.
2019ರಲ್ಲಿ 8,15,001 ರೂ. ಮೌಲ್ಯದ ಟೊಯೋಟಾ ಇನ್ನೋವಾ ಹೊಂದಿದ್ದಾರೆ. 9 ಲಕ್ಷ ರೂ. ಮೌಲ್ಯದ 137 ಗ್ರಾಂ ಚಿನ್ನ ಇದೆ. ಉಳ್ಳಾಲ ತಾಲೂಕಿನ ತಲಪಾಡಿಯಲ್ಲಿ ಐದು ಕಡೆ ಒಟ್ಟು 152 ಸೆಂಟ್ಸ್ ಕೃಷಿ ಭೂಮಿ ಹೊಂದಿದ್ದು, ಇದರ ಪ್ರಸಕ್ತ ಮಾರುಕಟ್ಟೆ ಮೌಲ್ಯ 43.50 ಲಕ್ಷ ರೂ. ಆಗಿದೆ. ಕ್ಯಾ. ಬೃಜೇಶ್ ಚೌಟ ಮೇಲೆ 2017ರಲ್ಲಿ ಮೈಸೂರಿನ ನಂಜನಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ಹೈಕೋರ್ಟ್ನಲ್ಲಿ ವಿಚಾರಣೆಯ ಹಂತದಲ್ಲಿದೆ.
ಕ್ಯಾಪ್ಟನ್ ಬೃಜೇಶ್ ಚೌಟ ಹಿನ್ನೆಲೆ : ಪ್ರಸ್ತುತ ಮಂಗಳೂರಿನಲ್ಲಿ ವಾಸವಿರುವ ಕ್ಯಾ. ಬೃಜೇಶ್ ಚೌಟ ಅವರು 2002 ರಲ್ಲಿ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ನಂತರ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ತರಬೇತಿ ಪಡೆದು 2003ರಿಂದ 2010ರ ವರೆಗೆ ಗೂರ್ಖ ರೈಫಲ್ಸ್ ರೆಜಿಮೆಂಟ್‌ನಲ್ಲಿ ಆರ್ಮಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ನಿವೃತ್ತರಾದ ಬಳಿಕ 2014ರಲ್ಲಿ ಇಂದೋರ್‌ನ ಐಐಎಂನಲ್ಲಿ ಪದವಿ ಪಡೆದಿದ್ದಾರೆ. ಇವರು ಅವಿವಾಹಿತರಾಗಿದ್ದು, ವಾಟ್ಸ್‌ಆ್ಯಪ್, ಎಕ್ಸ್, ಇನ್ಸ್ಟಾಗ್ರಾಂ, ಫೇಸ್‌ಬುಕ್, ಯುಟ್ಯೂಬ್‌ಗಳಲ್ಲಿ ಖಾತೆ ಹೊಂದಿದ್ದಾರೆ.
ಬೃಜೇಶ್ ಚೌಟ ಅವರು ಸರ್ಕಾರಕ್ಕೆ ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಅವರಿಗೆ ಅವಲಂಬಿತರು ಯಾರೂ ಇಲ್ಲ. 2022–23ನೇ ಸಾಲಿನಲ್ಲಿ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ವಿವರದಲ್ಲಿ ಅವರು ತಮಗೆ ವಾರ್ಷಿಕ ₹6,51,590 ಆದಾಯವಿದೆ. ಆದಾಯದ ಮೂಲ ಉದ್ದಿಮೆ ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ನಾಯಕ ಕ್ಯಾಪ್ಟನ್ ಬೃಜೇಶ್ ಚೌಟ ಅವರು ಭಾರತೀಯ ಜನತಾ ಪಾರ್ಟಿ ಕರ್ನಾಟಕ ರಾಜ್ಯ ಘಟಕದ ಕಾರ್ಯದರ್ಶಿ ಸ್ಥಾನಕ್ಕೆ ಇತ್ತೀಚೆಗೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ : ದಕ್ಷಿಣ ಕನ್ನಡ ಬಿಜೆಪಿ ಟಿಕೆಟ್ ಪಡೆದ ಕ್ಯಾಪ್ಟನ್ ಬೃಜೇಶ್ ಚೌಟ ಯಾರು? ಅವರ ಹಿನ್ನೆಲೆಯೇನು?