ಬೆಂಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಆರ್ಭಟ ಹಾಗೂ ಗ್ಯಾರಂಟಿ ಯೋಜನೆಗಳ ನಡುವೆಯೂ ಬಿಜೆಪಿ ಮೈತ್ರಿಕೂಟಕ್ಕೆ ಜಯ ಸಂದಿರುವುದು ಸಂತೋಷವಾಗಿದೆ ಎಂದು ಬಿಜೆಪಿ ರಾಜ್ಯಾಧಕ್ಷ ಬಿ.ವೈ.ವಿಜಯೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಎನ್‌ಡಿಎಗೆ ಸಂಪೂರ್ಣ ಬಹುಮತ ಬಂದಿದೆ. 295 ಸ್ಥಾನ ಗಳಿಸುವ ಮೂಲಕ ಮೈತ್ರಿಕೂಟಕ್ಕೆ ಜಯ ಸಂದಿದೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ 19 ಸ್ಥಾನ ಗಳಿಸಿದೆ. 20 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದ ಕಾಂಗ್ರೆಸ್ಗೆ ಮುಖಭಂಗವಾಗಿದೆ. ಅಭೂತಪೂರ್ವ ಗೆಲುವಿಗೆ ಕಾರಣರಾದ ಮೈತ್ರಿಪಕ್ಷಗಳ ಕಾರ್ಯಕರ್ತರು, ಮುಖಂಡರು ಹಾಗೂ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಇದೆಲ್ಲದರ ನಡುವೆಯೂ ಪ್ರಜ್ಞಾವಂತ ಜನರು ಮತ ಚಲಾಯಿಸಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ 20ಕ್ಕೂ ಹೆಚ್ಚು ಸ್ಥಾನ ಗೆಲ್ತೇವೆ ಎಂದು ಹೇಳಿದ್ದರು. ಆದರೆ ಅವರ ಕನಸು ಭಗ್ನವಾಗಿದೆ ಎಂದು ಟೀಕಿಸಿದರು. ಇದೇ ವೇಳೆ, ಕಲ್ಯಾಣ ಕರ್ನಾಟಕದಲ್ಲಿ ಹಿನ್ನೆಡೆಯಾಗಿದೆ. ಅದರ ಬಗ್ಗೆ ವಿಶ್ಲೇಷಣೆ ಮಾಡುತ್ತೇವೆ ಎಂದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ರಾಜ್ಯದಲ್ಲಿ ಬಂದಿರುವ ಫಲಿತಾಂಶವನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ರಾಜ್ಯದಲ್ಲಿ 136 ಕಾಂಗ್ರೆಸ್ ಶಾಸಕರಿದ್ದಾರೆ ಎಂದು ದುರಹಂಕಾರದಿಂದ ಮಾತನಾಡುತ್ತಿದ್ದರು. ಗ್ಯಾರಂಟಿಗಳು ಕೈ ಹಿಡಿಯುತ್ತವೆ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದರು. ಜನರು ಬಹುಬೇಗ ಗ್ಯಾರಂಟಿ ಬೋಗಸ್ ಎಂದು ಅರಿತಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಬಂದ ಫಲಿತಾಂಶ ಅತಿಯಾದ ಸಂತೋಷ ತಂದಿಲ್ಲ. ಯುಪಿ, ಮಹಾರಾಷ್ಟ್ರದಲ್ಲಿ ನಮಗೆ ವೈಫಲ್ಯವಾಗಿವೆ. ಮುಂದಿನ ದಿನಗಳಲ್ಲಿ ಸರಿಮಾಡುವ ಕೆಲಸವನ್ನು ರಾಷ್ಟ್ರೀಯ ನಾಯಕರು ಮಾಡಲಿದ್ದಾರೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಹಾಗೂ ನಾಯಕತ್ವದಲ್ಲಿ ನಮಗೆ ಸೋಲಾಗಿದೆ. ರಾಯಚೂರು, ಕೊಪ್ಪಳ ಸೇರಿದಂತೆ ನಾಲ್ಕು ಕ್ಷೇತ್ರಗಳಲ್ಲಿ ನಮಗೆ ಹಿನ್ನಡೆಯಾಗಿದೆ ಎಂದು ಒಪ್ಪಿಕೊಂಡರು.
ಇದನ್ನೂ ಓದಿ : ಧಾರವಾಡ ಲೋಕಸಭಾ ಕ್ಷೇತ್ರ: ಸತತ ಐದನೇ ಗೆಲುವು ದಾಖಲಿಸಿದ ಪ್ರಲ್ಹಾದ್ ಜೋಶಿ - DHARWAD LOKSABHA CONSTITUENCY