ಕಲಬುರಗಿ: ಜಿಲ್ಲೆಯಲ್ಲಿ ಮತ್ತೋರ್ವ ಬಿಜೆಪಿ ಮುಖಂಡನ ಬರ್ಬರ ಹತ್ಯೆ ನಡೆದಿದೆ. ಸಂಸದ ಉಮೇಶ ಜಾಧವ ಅವರ ಬೆಂಬಲಿಗ, ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯ ಗಿರೀಶ್ ಚಕ್ರ (31) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನೊಂದರಲ್ಲಿ ನಡೆದಿದೆ.
ಇತ್ತೀಚೆಗೆ ಫೆಬ್ರವರಿ 14ರಂದು ಗಿರೀಶ್ ಚಕ್ರ ಅವರು ಬಿಎಸ್ಎನ್ಎಲ್ ಕಲಬುರಗಿ ವಿಭಾಗದ ಟೆಲಿಫೋನ್ ಅಡ್ವೈಸರಿ ಕಮಿಟಿ ಸದಸ್ಯರನ್ನಾಗಿ ನೇಮಕ ಆಗಿದ್ದರು. ಈ ಹಿನ್ನೆಲೆಯಲ್ಲಿ ಮದ್ಯಪಾನದ ಪಾರ್ಟಿ ಹೆಸರಿನಲ್ಲಿ ಗಿರೀಶ್ ಚಕ್ರ ಅವರನ್ನು ಸಾಗನೂರು ಗ್ರಾಮದ ಜಮೀನಿಗೆ ಕರೆಸಿಕೊಳ್ಳಲಾಗಿತ್ತು. ಆದರೆ, ಸ್ನೇಹಿತರೇ ಮಧ್ಯರಾತ್ರಿ ಕಣ್ಣಿಗೆ ಕಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಕೊಲೆಯಾದ ಗಿರೀಶ್ ಚಕ್ರ ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ದೇವಲ ಗಾಣಗಾಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮೊಹಮ್ಮದ್ ಶರೀಫ್ ರಾವುತರ್ ಹಾಗೂ ಸಿಪಿಐ ಚೆನ್ನಯ್ಯ ಹಿರೇಮಠ ಭೇಟಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸ್ಥಳಕ್ಕೆ ಶ್ವಾನ ದಳವೂ ಕೂಡ ತೆರಳಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ.
ನಿನ್ನೆಯಷ್ಟೆ ಬಿಜೆಪಿ ಮುಖಂಡ ಆಳಂದ ತಾಲೂಕಿನ ಸರಸಂಬ ಗ್ರಾಮದ ಮಹಾಂತಪ್ಪ ಆಲೂರೆ (45) ಅವರ ಕೊಲೆ ನಡೆದಿತ್ತು. ಜಮೀನಿಗೆ ಹೋಗಿ ಬೈಕ್ ಮೇಲೆ ವಾಪಸ್ ಬರುತ್ತಿದ್ದ ಮಹಾಂತಪ್ಪ ಅವರನ್ನು ಕಾರಿನಲ್ಲಿ ಬಂದು ಅಡ್ಡಗಟ್ಟಿ ತಡೆದು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕೊಲೆ ನಡೆದಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಇದನ್ನೂ ಓದಿ: ಕಲಬುರಗಿ: ಬೈಕ್ ಅಡ್ಡಗಟ್ಟಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ