ಬೆಂಗಳೂರು: ಬಿ ರಿಪೋರ್ಟ್ ಹಾಕುವ ಕೇಸ್ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಸರ್ಕಾರದ ನಡೆ ಅನುಮಾನ ಹುಟ್ಟು ಹಾಕಿದೆ. ಕಾಂಗ್ರೆಸ್ ಸರ್ಕಾರ ಇದನ್ನು ರಾಜಕೀಯ ದೃಷ್ಟಿಯಿಂದ ನೋಡುತ್ತಿದೆ. ರಾಜಕೀಯ ದುರುದ್ದೇಶದಿಂದ ಕ್ರಮ ತೆಗೆದುಕೊಳ್ಳಲು ಬಂದರೆ ಅದು ಅವರಿಗೇ ತಿರುಗುಬಾಣವಾಗುತ್ತದೆ. ರಾಜಕೀಯವಾಗಿ ಲಾಭದ ಬದಲು ನಷ್ಟವನ್ನು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕರಿಗೆ ಬಿಜೆಪಿ ನಾಯಕ ಸಿ.ಟಿ ರವಿ ಎಚ್ಚರಿಕೆ ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ದೂರಿಗೆ ಸಂಬಂಧಿಸಿದಂತೆ ಸರ್ಕಾರದ ನಡೆ ಅನುಮಾನದಿಂದ ಕೂಡಿದೆ. ಮಾರ್ಚ್ 14 ರಂದು ಪೋಕ್ಸೋ ದೂರು ದಾಖಲಾಯಿತು. ಆ ಮಹಿಳೆ ಆರೋಪ ಮಾಡಿದ್ದು ಫೆ.02 ರಂದು. ಈ ಪ್ರಕರಣ ಸಂಬಂಧ ಏಪ್ರಿಲ್ 12 ರಂದು ಯಡಿಯೂರಪ್ಪ ಸಿಐಡಿ ಮುಂದೆ ಹಾಜರಾಗಿ ವಿವರಣೆ ಕೊಟ್ಟಿದ್ದಾರೆ. ಆದರೆ ಈಗ ಅವರ ವಿರುದ್ಧ ಅರೆಸ್ಟ್ ವಾರಂಟ್ ಕೊಟ್ಟಿದ್ದಾರೆ. ಇವತ್ತು ಹೈಕೋರ್ಟ್ನಲ್ಲಿ ಯಡಿಯೂರಪ್ಪ ನಿರೀಕ್ಷಣಾ ಜಾಮೀನಿನ ವಿಚಾರಣೆ ಇದೆ. ಆದರೆ ಈ ಪ್ರಕರಣವನ್ನು ಕಾಂಗ್ರೆಸ್ ರಾಜಕೀಯ ದೃಷ್ಟಿಯಿಂದ ನೋಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಪರಕಾಯ ಪ್ರವೇಶ ಮಾಡಿದವರು ಯಾರು?: ಈ ಪ್ರಕರಣದಲ್ಲಿ ಪರಕಾಯ ಪ್ರವೇಶ ಮಾಡಿದವರು ಯಾರು?, ಇಷ್ಟು ದಿನ ಇಲ್ಲದ ವೇಗ ಮೂರು ತಿಂಗಳ ನಂತರ ಯಾಕೆ ಬಂತು?, 53 ಜನರ ವಿರುದ್ಧ ಆ ಮಹಿಳೆ ಇದೇ ಥರದ ದೂರು ಕೊಟ್ಟಿರೋ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದರು. ಆಕೆ ಮಾನಸಿಕ ಅಸ್ವಸ್ಥೆ ಅಂತಿದ್ದಾರೆ ಅಂತ ಆರೋಪ ಮಾಡಿದ್ದರು. ಗೃಹ ಸಚಿವರ ಅಂದಿನ ಹೇಳಿಕೆಗೂ ಇಂದಿನ ಹೇಳಿಕೆಗೂ ವ್ಯತ್ಯಾಸ ಇದೆ. ಬಿ ರಿಪೋರ್ಟ್ ಹಾಕುವಂತಹ ಕೇಸ್ನಲ್ಲಿ ಈಗ ಯಡಿಯೂರಪ್ಪ ಬಂಧನಕ್ಕೆ ಮುಂದಾಗಿದ್ದಾರೆ. ಇದರಲ್ಲಿ ಪರಕಾಯ ಪ್ರವೇಶ ಮಾಡಿದವರು ಯಾರು? ಎಂದು ಪ್ರಶ್ನಿಸಿದರು.
ಲೋಕಸಭೆ ಚುನಾವಣೆ ಸೋಲಿಗೆ ಈ ರೀತಿ ಮಾಡುತ್ತಿದ್ದಾರಾ?, ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಬಿಜೆಪಿ ಹೋರಾಟ, ಸಚಿವರ ರಾಜೀನಾಮೆಯಿಂದ ಕಾಂಗ್ರೆಸ್‌ನವರು ಹತಾಶೆಯಿಂದ ಹೀಗೆ ಮಾಡ್ತಿದ್ದಾರಾ?, 40% ಕಮೀಷನ್ ಕೇಸ್ನಲ್ಲಿ ರಾಹುಲ್ ಗಾಂಧಿ ಕೋರ್ಟ್ ಕಟಕಟೆಗೆ ಬಂದು ನಿಂತಿದ್ದರು. ಈ ಕಾರಣಕ್ಕೆ ಈ ರೀತಿ ಯಡಿಯೂರಪ್ಪ ಮೇಲೆ ರಾಜಕೀಯ ದುರುದ್ದೇಶದ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರಾ?, ಬಿಜೆಪಿ ಮತ್ತು ಯಡಿಯೂರಪ್ಪ ಅವರನ್ನು ಕುಗ್ಗಿಸಬಹುದು ಅಂತ ಈ ರೀತಿ ಮಾಡಿದ್ದಾರಾ?, ಇದೆಲ್ಲ ನೋಡಿದಾಗ ನಮಗೆ ಅನುಮಾನ ಬರುತ್ತದೆ.
ಪ್ರಭಾವಿ ಸಚಿವರೇ ಈ ಕೇಸ್ಗೆ ಮರುಜೀವ ನೀಡಿದರಾ?: ಒಬ್ಬ ಪ್ರಭಾವಿ ಸಚಿವರು ಈ ಕೇಸ್ಗೆ ಜೀವ ಕೊಡಲು ಕಾರಣರಾಗಿದ್ದಾರೆ ಅಂತ ನಮಗೆ ಮಾಹಿತಿ ಬಂದಿದೆ. ಇವತ್ತಿನ ನ್ಯಾಯಾಲಯದ ಆದೇಶ ಏನೇ ಬಂದರೂ ನಾವು ಸ್ವಾಗತಿಸುತ್ತೇವೆ. ಚುನಾವಣೆವರೆಗೂ ಸುಮ್ಮನಿದ್ದು, ಸೋಲಿನ ಬಳಿಕ ಕಾಂಗ್ರೆಸ್ ನಡೆ ಅನುಮಾನದಿಂದ ಕೂಡಿದೆ. ಯಡಿಯೂರಪ್ಪ ಜನರ ನಡುವೆಯೇ ಇದ್ದರು ಈ ಪ್ರಕರಣದಿಂದ ರಾಜಕೀಯ ಲಾಭ ಪಡೆಯಲು ಮುಂದಾದರೆ ಅದು ಕಾಂಗ್ರೆಸ್ಗೆ ಸಿಗಲ್ಲ. ಇದರಿಂದ ಕಾಂಗ್ರೆಸ್ಗೆ ರಾಜಕೀಯ ನಷ್ಟ ಆಗಲಿದೆ ಎಂದರು.
ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ಬಳಿ ವಿಚಾರಣೆಗೆ ಬಂದಿದ್ದಾಗ ಬಿ ರಿಪೋರ್ಟ್ ಬಗ್ಗೆ ಮಾಹಿತಿ ಕೊಟ್ಟಿದ್ದರು. ಕೇಸ್ ಸ್ಟ್ರಾಂಗ್ ಇಲ್ಲ, ಬಿ ರಿಪೋರ್ಟ್ ಹಾಕುವಂತಹದ್ದು ಅಂತ ಯಡಿಯೂರಪ್ಪಗೆ ಸಿಐಡಿ ಪೊಲೀಸರೇ ಹೇಳಿದ್ದರು. ಈಗ ನೋಡಿದರೆ ಏಕಾಏಕಿ ವಿಚಾರಣೆಗೆ ನೋಟಿಸ್ ನೀಡಿ ಜಾಮೀನು ರಹಿತ ವಾರಂಟ್ ಜಾರಿಗೊಳಿಸಲಾಗಿದೆ. ಇದು ಅನುಮಾನಕ್ಕೆ ಎಡೆ ಮಾಡಿದೆ. ಇದರಲ್ಲಿ ರಾಜಕೀಯ ದುರುದ್ದೇಶ ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರ ನಡೆಗೆ ಸಿ.ಟಿ ರವಿ ಆಕ್ಷೇಪ ವ್ಯಕ್ತಪಡಿಸಿದರು. ಪೊಲೀಸರ ನಡೆ ಸರಿಯಲ್ಲ. ರೇಣುಕಾಸ್ವಾಮಿ ಹತ್ಯೆ ಮನುಕುಲ ಕ್ಷಮಿಸುವಂತಹದ್ದಲ್ಲ. ನಾಗರಿಕ ಸಮಾಜ ಒಪ್ಪುವಂತಹದಲ್ಲ. ಪೊಲೀಸರ ನಡೆ ಅನುಮಾನಾಸ್ಪದ ಆಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದಲೂ ಪೊಲೀಸರು ನಡೆದುಕೊಳ್ಳಬೇಕು. ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಪೊಲೀಸರು ಮಾಡಬೇಕು. ಶಾಮಿಯಾನ ಹಾಕಿರೋದು, ಮಾಧ್ಯಮ ನಿರ್ಬಂಧ ನೋಡಿದರೆ ಠಾಣೆ ಒಳಗೆ ಏನೋ ಆಗುತ್ತಿದೆ ಅಂತ ಅನುಮಾನ ಬರುತ್ತದೆ. ಪಾರದರ್ಶಕತೆ ಇಲ್ಲ ಅನ್ನೋದು ಸ್ಪಷ್ಟ ಆಗುತ್ತದೆ. ಜನರ ಸಂಶಯಗಳನ್ನು ಸಿಎಂ, ಡಿಸಿಎಂ, ಗೃಹ ಸಚಿವರು ನಿವಾರಿಸಲಿ ಎಂದು ಒತ್ತಾಯಿಸಿದರು.
ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಿ: ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಮಾತನಾಡಿ, ನಾವು ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಮನೆಗೆ ಹೋಗಿದ್ದೆವು. ರೇಣುಕಾಸ್ವಾಮಿಗೆ ಹದಿನೈದು ಕಡೆ ಗಾಯಗಳಾಗಿದ್ದವು. ಸಾಯೋವರೆಗೂ ಹೊಡೆದಿದ್ದಾರೆ. ಮರ್ಮಾಂಗಕ್ಕೆ ಹೊಡೆದು ಕೊಂದಿದ್ದಾರೆ. ವೃತ್ತಿಪರ ರೌಡಿಗಳೂ ಹೀಗೆ ಹತ್ಯೆ ಮಾಡಲ್ಲ. ಸಾವಿನ ಹಿಂದೆ ಇರುವವರ ಜನ್ಮ ಜಾಲಾಡಬೇಕು. ಕಠಿಣ ಶಿಕ್ಷೆ ಕೊಡಬೇಕು. ರೇಣುಕಾಸ್ವಾಮಿ ಪತ್ನಿ ಸಹನಾ ಐದು ತಿಂಗಳ ಗರ್ಭಿಣಿ. ಬೇಕರಿ ವ್ಯಾಪಾರ ನಡೆಸಿ ಜೀವನ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ಸರ್ಕಾರ ಆರ್ಥಿಕ ನೆರವು ಕೊಡಬೇಕು. ಸಹನಾಗೆ ಸರ್ಕಾರಿ ನೌಕರಿ ಕೊಡಬೇಕು. ಅವರು ಸೆಕೆಂಡ್ ಪಿಯುಸಿ ಓದಿದ್ದಾರೆ. ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಈ ಸರ್ಕಾರ ರೌಡಿಗಳಿಗೆ ರಕ್ಷಣೆ ಒದಗಿಸಿದೆ. ಇದು ನಮ್ಮ ಸರ್ಕಾರ ಅನ್ನೋ ಭಾವನೆ ರೌಡಿಗಳಿಗೆ ಬಂದಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಕೊಲೆಗಳಾಗ್ತಿವೆ. ರೇಣುಕಾಸ್ವಾಮಿ ದೇಹ ಮೋರಿಗೆ ಎಸೆದಿದ್ದಾರೆ. ರಾಜ್ಯಪಾಲರು ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಬೇಕು. ಪ್ರಕರಣ ಆಗಿ ಇಷ್ಟು ದಿನ ಆಗಿದ್ದರೂ ರೇಣುಕಾಸ್ವಾಮಿ ಮನೆಗೆ ಸಿಎಂ, ಸಚಿವರು, ಸ್ಥಳೀಯ ಶಾಸಕರು ಹೋಗಿಲ್ಲ. ದರ್ಶನ್ ಆಗಿರಲಿ, ಬೇರೆಯವ್ರೇ ಇರಲಿ, ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ರಾತ್ರಿ ವೇಳೆ ಚಿತ್ರದುರ್ಗದಲ್ಲಿ ಸ್ಥಳ ಮಹಜರು - Spot Inspection In Chitradurga