ಮೈಸೂರು: ನಾಳೆ ಮಂಡನೆಯಾಗಲಿರುವ ರಾಜ್ಯ ಬಜೆಟ್ ಮೇಲೆ ಯಾವುದೇ ನಿರೀಕ್ಷೆ ಇಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ಶಾಸಕ ಡಾ.ಅಶ್ವಥ್ ನಾರಾಯಣ್ ತಿಳಿಸಿದರು. ನಗರದಲ್ಲಿ ಇಂದು ಕೊಡಗು-ಮೈಸೂರು ಲೋಕಸಭಾ ಚುನಾವಣಾ ಕಚೇರಿ ಉದ್ಘಾಟಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಡಳಿತ ಪಕ್ಷದ ಶಾಸಕರಿಗೆ ತೃಪ್ತಿ ಇಲ್ಲ. ಒಬ್ಬರ ಕಣ್ಣಿಗೆ ಬೆಣ್ಣೆ ಮತ್ತೊಬ್ಬರ ಕಣ್ಣಿಗೆ ಸುಣ್ಣ ಎಂಬ ರೀತಿ ಆಗಿದೆ. ಇಂಥವರು ಮಂಡಿಸುವ ಬಜೆಟ್ ಮೇಲೆ ಯಾವುದೇ ನಿರೀಕ್ಷೆಗಳಿಲ್ಲ. ಏನೇ ಘೋಷಣೆಯಾದರೂ ಅದು ಕೇವಲ ಪೇಪರ್ ಮೇಲೆ ಮಾತ್ರ ಇರುತ್ತದೆ. ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದೆ ಎಂದು ಟೀಕಾಸಮರ ನಡೆಸಿದರು.
ಜಾತಿ, ಧರ್ಮದ ನಡುವೆ ಎತ್ತಿ ಕಟ್ಟುವುದರಲ್ಲಿ ಕಾಂಗ್ರೆಸ್‌ನವರು ಮೊದಲಿಗರು. ಅವರು ಕಂಡಕಂಡಲ್ಲಿ ಚೀಲ ಹಿಡಿದುಕೊಂಡು ನಿಂತಿದ್ದಾರೆ. ಮನೆಯವರು, ಕುಟುಂಬಸ್ಥರು ಏಜೆಂಟ್ಗಳಾಗಿದ್ದಾರೆ. ಜೊತೆಗೆ ಬ್ರೋಕರ್ಗಳೂ ಸಹ ಆಗಿದ್ದಾರೆ. ಇದು ಬಂಡಗೆಟ್ಟ ಸರ್ಕಾರ. ಕಾಂಗ್ರೆಸ್ ನಿರ್ನಾಮ ಮಾಡಲು ಬೇರೆ ಯಾರೂ ಬೇಡ, ಅವರೇ ತಮ್ಮ ಪಕ್ಷವನ್ನು ನಿರ್ನಾಮ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಕಾಂಗ್ರೆಸ್ನಿಂದ ಕಾನೂನು ದುರ್ಬಳಕೆ: ಮಂಗಳೂರು ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದು ಸರಿಯಾದ ಕ್ರಮವಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಕಾನೂನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ನಾವು ಕಾನೂನು ಹೋರಾಟ ಮಾಡುತ್ತೇವೆ. ದೇಶ ವಿಭಜನೆ ಹೇಳಿಕೆ ಕೊಟ್ಟ ಡಿ.ಕೆ.ಸುರೇಶ್ ವಿರುದ್ಧ ಕ್ರಮ ಕೈಗೊಂಡಿಲ್ಲ. ಆದರೆ ನಮ್ಮವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ನಮ್ಮ ಸಂಸ್ಕೃತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರ ಎಂದರು.
ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕು ಎಂಬುದು ಎಲ್ಲರ ಆಶಯ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಎನ್ಡಿಎ ಕೂಟ ಗೆಲುವು ಸಾಧಿಸಲಿದೆ. ಮೈಸೂರು ಲೋಕಸಭಾ ಕ್ಷೇತ್ರವನ್ನೂ ನಾವು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ಮೈಸೂರಿನ ಶಾಸಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಸಂಸದ ಪ್ರತಾಪ್ ಸಿಂಹ ಕೂಡ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಾಪ್ ಸಿಂಹ ನಾಲ್ವಡಿ ಒಡೆಯರ್ ರೀತಿಯಲ್ಲಿ ರೈಲ್ವೆ, ಆರೋಗ್ಯ, ಶಿಕ್ಷಣ, ಕುಡಿಯುವ ನೀರಿನ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಮಾಡಿದ್ದಾರೆ. ಈ ಬಾರಿ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿಗಿಂತ ಅತಿ ಹೆಚ್ಚು ಮತ ಪಡೆದು ಗೆಲ್ಲಬೇಕು ಎಂದು ಹೇಳಿದ ಡಾ.ಅಶ್ವಥ್ ನಾರಾಯಣ್, ರಾಮ ಮಂದಿರದ ಶಿಲ್ಪಿ ಹಾಗೂ ರಾಮನನ್ನು ಕೆತ್ತನೆ ಮಾಡಲಾದ ಶಿಲೆ ಮೈಸೂರಿನದ್ದೇ ಆಗಿದ್ದು ಜಿಲ್ಲೆ ಈಗ ವಿಶ್ವದ ಗಮನ ಸೆಳೆದಿದೆ. ಅದೇ ರೀತಿಯಲ್ಲಿ ಈ ಬಾರಿ ದಾಖಲೆ ಮತಗಳಿಂದ ಪ್ರತಾಪ್ ಸಿಂಹ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.