ಬೆಂಗಳೂರು: 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ತಿರಸ್ಕರಿಸಿದ್ದ ರಾಜ್ಯದ ಮತದಾರರು ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜೈ ಎಂದಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಅಲೆಯಲ್ಲಿ ಕೊಚ್ಚಿ ಹೋಗಿದ್ದ ಬಿಜೆಪಿ ಮತ್ತು ಜೆಡಿಎಸ್ 2024ರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯಾಗಿ ಗ್ಯಾರಂಟಿ ಅಲೆ ಎದುರಿಸುವಲ್ಲಿ ಸಫಲವಾಗಿವೆ. ಆಡಳಿತಾರೂಢ ಪಕ್ಷವನ್ನು ಕಟ್ಟಿ ಹಾಕಿವೆ. ಮೈತ್ರಿಗೇ ಮೇಲುಗೈ ಆಗುವಂತೆ ನೋಡಿಕೊಳ್ಳುವ ಮೂಲಕ ಚುನಾವಣಾಪೂರ್ವ ಹೊಂದಾಣಿಕೆಗೆ ಜನಮನ್ನಣೆ ಪಡೆದುಕೊಂಡಿದ್ದು, ರಾಜ್ಯದ ಪಾಲಿಗೆ ಮೈತ್ರಿ ಸಕ್ಸಸ್ ಆಗುವಂತೆ ಮಾಡಿದ್ದಾರೆ.
ಈ ಚುನಾವಣೆಯಲ್ಲಿ ಬಿಜೆಪಿ ಹಾಗು ಜೆಡಿಎಸ್ ಮೈತ್ರಿ ಸಫಲವಾಗಿರುವುದು ಮಾತ್ರವಲ್ಲದೇ ಉಭಯ ಪಕ್ಷಗಳಿಗೂ ಲಾಭವಾಗಿದೆ. ಕಲ್ಯಾಣ ಕರ್ನಾಟಕವನ್ನು ಕಳೆದುಕೊಂಡಿರುವ ಬಿಜೆಪಿಗೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಜೀವರಕ್ಷಕದಂತೆ ಕೆಲಸ ಮಾಡಿದೆ. ಕೇಸರಿ ಪಡೆ ಹಳೆ ಮೈಸೂರು ಗೆದ್ದು ಬೀಗಿದರೆ, ಜೆಡಿಎಸ್ ತನ್ನ ಭದ್ರಕೋಟೆ ಹಾಸನ ಕಳೆದುಕೊಂಡರೂ ಮಂಡ್ಯ ಹಾಗು ಕೋಲಾರವನ್ನು ತೆಕ್ಕೆಗೆ ಹಾಕಿಕೊಂಡಿದೆ. ಕಳೆದ ಬಾರಿ ಕೇವಲ 1 ಸ್ಥಾನಕ್ಕೆ ತೃಪ್ತಿಪಟ್ಟಿದ್ದ ದಳಕ್ಕೆ ಮತ್ತೊಂದು ಪ್ಲಸ್ ಆಗಿದೆ.
ಜೆಡಿಎಸ್ ಜಾತಿ ಲೆಕ್ಕಾಚಾರ, ಬಿಜೆಪಿಯ ಹಿಂದುತ್ವಕ್ಕೆ ಮನ್ನಣೆ: ಈ ಹಿಂದೆ ಆಡಳಿತ ಪಕ್ಷದಲ್ಲಿದ್ದ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಗ್ಯಾರಂಟಿ ಅಲೆಯಿಂದಾಗಿ 66 ಸ್ಥಾನಕ್ಕೆ ಕುಸಿದು ಹೀನಾಯ ಹಿನ್ನಡೆ ಅನುಭವಿಸಿತ್ತು. ಇದೇ ಮಾದರಿಯ ಫಲಿತಾಂಶವನ್ನು ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿಯೂ ನಿರೀಕ್ಷೆ ಮಾಡಿತ್ತು. ಆದರೆ, ಇದನ್ನು ಹುಸಿಯಾಗುವಂತೆ ಮಾಡುವಲ್ಲಿ ಬಿಜೆಪಿ-ದಳ ಮೈತ್ರಿ ಸಹಕಾರಿಯಾಗಿದೆ.
ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಕ್ಲೀನ್‌ಸ್ವೀಪ್ ಮಾಡಿದರೂ, ಹಳೆ ಮೈಸೂರು ಭಾಗದಲ್ಲಿ ಹಾಗೂ ಕರಾವಳಿಯಲ್ಲಿ ಕಾಂಗ್ರೆಸ್ ಅನ್ನು ಕಟ್ಟಿ ಹಾಕಲಾಗಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಜಾತಿ ಲೆಕ್ಕಾಚಾರ ಪರಿಣಾಮ ಬೀರಿದರೆ, ಕರಾವಳಿಯಲ್ಲಿ ಬಿಜೆಪಿಯ ಹಿಂದುತ್ವ ಅಜೆಂಡಾಗೆ ಮತ್ತೊಮ್ಮೆ ಮನ್ನಣೆ ಸಿಕ್ಕಿದೆ. ದಳಪತಿಗಳ ಅಡಿಪಾಯವಾಗಿರುವ ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಮತಗಳ ಅಂತರದಲ್ಲೇ ಮೈತ್ರಿ ಅಭ್ಯರ್ಥಿಗಳಿಗೆ ಗೆಲುವಾಗಿದೆ.
ಅದರಲ್ಲೂ ಕನಕಪುರದ ಬಂಡೆ ಖ್ಯಾತಿಯ ಡಿ.ಕೆ.ಸಹೋದರರ ಭದ್ರಕೋಟೆ ಬೆಂಗಳೂರು ಗ್ರಾಮಾಂತರದಲ್ಲಿ 2.5 ಲಕ್ಷಕ್ಕೂ ಅಧಿಕ ಮತ ಪಡೆದು ಬಿಜೆಪಿಯ ಡಾ.ಸಿ.ಎನ್.ಮಂಜುನಾಥ್ ಗೆದ್ದಿದ್ದಾರೆ. ಮಂಡ್ಯದಲ್ಲೂ 2.5 ಲಕ್ಷ ಪ್ರಮಾಣದ ಅಂತರದಲ್ಲಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿಯ ಮತಗಳ ಜೊತೆ ಜೆಡಿಎಸ್ ಮತಗಳ ಕ್ರೋಢೀಕರಣವೇ ಗೆಲುವಿಗೆ ಪ್ರಮುಖ ಕಾರಣ. ಮಂಡ್ಯದಲ್ಲೂ ಜೆಡಿಎಸ್ ಜೊತೆ ಬಿಜೆಪಿ ಮತಗಳು ಕ್ರೋಢೀಕರಣವಾಗಿರುವುದರಿಂದಲೇ ಅನಾಯಾಸದ ಗೆಲುವು ಸಿಕ್ಕಿದೆ.
ಬಿಜೆಪಿ ಪಾಲಿಗೆ ಉತ್ತಮ ಫಲಿತಾಂಶ: ಕಳೆದ ಬಾರಿ 25 ಸ್ಥಾನ ಪಡೆದುಕೊಂಡಿದ್ದ ಬಿಜೆಪಿ ಈ ಬಾರಿ 17 ಸ್ಥಾನಕ್ಕೆ ಕುಸಿದೆ. ಆದರೂ, ದೇಶದ ಚುನಾವಣಾ ಫಲಿತಾಂಶ ಗಮನಿಸಿದರೆ, ರಾಜ್ಯ ಬಿಜೆಪಿ ನಾಯಕರ ಪಾಲಿಗೆ ಇದು ಉತ್ತಮ ಫಲಿತಾಂಶವೇ ಆಗಿದೆ. ಮೈತ್ರಿಯಾಗದೇ ಇದ್ದಿದ್ದಲ್ಲಿ ಈ ಸ್ಥಾನಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗುತ್ತಿತ್ತು ಎಂದೇ ವಿಶ್ಲೇಷಿಸಲಾಗಿದೆ.
ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಮೈಸೂರು ಗೆಲ್ಲಲು ಸಹ ಬಿಜೆಪಿಗೆ ಜೆಡಿಎಸ್ ಮತಗಳು ಸಹಕಾರಿಯಾದರೆ, ಮಂಡ್ಯದಲ್ಲಿ ದೊಡ್ಡ ಅಂತರದ ಗೆಲುವು ಹಾಗು ಕೋಲಾರ ಗೆಲ್ಲಲು ಜೆಡಿಎಸ್ಗೆ ಬಿಜೆಪಿ ಮತಗಳು ಸಹಕಾರಿಯಾಗಿವೆ. ತುಮಕೂರು ಸಂಸದ ಸೋಮಣ್ಣ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಚಿಕ್ಕಬಳ್ಳಾಪುರ ಸಂಸದ ಡಾ.ಸುಧಾಕರ್ ತಮ್ಮ ಗೆಲುವಿಗೆ ಮೈತ್ರಿ ಕಾರಣ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಹಾಸನದಲ್ಲಿ ಮಾತ್ರ ಮೈತ್ರಿ ಲೆಕ್ಕಾಚಾರ ತಲೆಕೆಳಗಾಗಿದೆ. ಆದರೂ, ಜೆಡಿಎಸ್ಗೆ ಈ ಫಲಿತಾಂಶ ತೃಪ್ತಿದಾಯಕವಾಗಿಯೇ ಇದೆ. ಬಿಜೆಪಿ ನಾಯಕರೂ ಈ ಚುನಾವಣೆ ಫಲಿತಾಂಶಕ್ಕೆ ಖುಷಿಯಾಗಿದ್ದಾರೆ.
ಬಿಜೆಪಿ-ಜೆಡಿಎಸ್ ಮತ ಗಳಿಕೆ ಕುಸಿತ: ಕಳೆದ ಬಾರಿ ಶೇ.51.7ರಷ್ಟು ಮತ ಗಳಿಸಿದ್ದ ಬಿಜೆಪಿಯ ಈ ಬಾರಿ ಮತಗಳಿಕೆ ಪ್ರಮಾಣ ಶೇ.46.06ಕ್ಕೆ ಕುಸಿದಿದೆ. ಜೆಡಿಎಸ್ ಮತ ಪ್ರಮಾಣ ಸಹ ಶೇ.9.7ರಿಂದ ಶೇ.5.60ಕ್ಕೆ ತಗ್ಗಿದೆ. ಆದರೆ, ಕಾಂಗ್ರೆಸ್ ಶೇ.32.1ರ ಮತ ಗಳಿಕೆಯನ್ನು ಶೇ.46.06ಕ್ಕೆ ಹೆಚ್ಚಿಸಿಕೊಂಡಿದೆ. ಜೊತೆಗೆ 1 ಸ್ಥಾನದಿಂದ 9 ಸ್ಥಾನಕ್ಕೆ ಜಿಗಿತ ಕಂಡಿದೆ. ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಎಷ್ಟೆಲ್ಲಾ ಪ್ರಯತ್ನಪಟ್ಟರೂ ಎರಡಂಕಿ ತಲುಪದಂತೆ ನೋಡಿಕೊಳ್ಳುವಲ್ಲಿ ಮೈತ್ರಿ ಸಫಲವಾಗಿದೆ.
ಇದನ್ನೂ ಓದಿ: ಅತಿ ಹೆಚ್ಚು ಮತ್ತು ಅತಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದ ರಾಜ್ಯದ 5 ಅಭ್ಯರ್ಥಿಗಳು