ಹಾವೇರಿ: ಈ ಬಾರಿ ಕಾಂಗ್ರೆಸ್ ಪಕ್ಷವು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಗೆಲ್ಲಲಿದೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಹಾವೇರಿಯಲ್ಲಿ ಮಾತನಾಡಿದ ಅವರು, ಈಗ ಬಿಜೆಪಿ ಒಡೆದ ಮನೆಯಾಗಿದೆ. ಕಾಂಗ್ರೆಸ್ ಸಾಮರಸ್ಯದ ಮನೆಯಾಗಿದ್ದು, ನಮ್ಮ ಗೆಲುವು ನಿಶ್ಚಿತ. ಈಗಾಗಲೇ ಈಶ್ವರಪ್ಪ ಏನ್ ಸಂದೇಶ ಕೊಡ್ತಾ ಇದ್ದಾರೆ ಅಂತ ರಾಜ್ಯಕ್ಕೆ ಗೊತ್ತಾಗಿದೆ. ಸಾಮರಸ್ಯ ಅವರಲ್ಲಿ ಇಲ್ಲ ಎಂದು ಟೀಕಿಸಿದರು.
ನಮ್ಮ ಸರ್ಕಾರದ ಒಂಭತ್ತು ತಿಂಗಳ ಸಾಧನೆ ನೋಡಿ ಜನ ಗೆಲುವು ಕೊಡ್ತಾರೆ. ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಬೊಮ್ಮಾಯಿ ಒಬ್ರೇ ಆಗಿದ್ದಾರೆ. ಗದಗಕ್ಕೂ ಹೋದರೂ ಬೊಮ್ಮಾಯಿ ಒಬ್ರೇ ಇರ್ತಾರೆ. ನಮ್ಮಲ್ಲಿ ಒಗ್ಗಟ್ಟಿದೆ, ಒಗ್ಗಟ್ಟಿಲ್ಲದೇ ಇದ್ದರೆ ಇಷ್ಟು ಜನ ಸೇರ್ತಾ ಇರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಹೊಂದಾಣಿಕೆ ರಾಜಕಾರಣ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅಂತಹ ರಾಜಕಾರಣ ಇದ್ದಿದ್ದರೆ ನಾವು ವಿಧಾನಸಭಾ ಚುನಾವಣೆಯಲ್ಲಿ ಹಾವೇರಿಯಲ್ಲಿ 5 ಸೀಟು ಗೆಲ್ತಾ ಇರಲಿಲ್ಲ. ಬೊಮ್ಮಾಯಿ ಅವರ ಜೊತೆ ಹೊಂದಾಣಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ನಲ್ಲಿ ಇರುವ ಎಲ್ಲರೂ ಹೊಂದಾಣಿಕೆಯಿಂದ ಇದ್ದೇವೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಯಾರೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ನಾವು ಈ ಸಲ 28ಕ್ಕೆ 20 ಸೀಟು ಗೆದ್ದು ತೋರಿಸುತ್ತೇವೆ. ಕಳೆದ ಲೋಕಸಭೆಯ ಮೂರು ಚುನಾವಣೆಯಲ್ಲಿ ಸೋಲು ಕಂಡಿದ್ದೆವು, ಈ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ಕಾಂಗ್ರೆಸ್ ಅಭ್ಯರ್ಥಿ ಆನಂದ ಗಡ್ಡದೇವರಮಠ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯವರು ನಮ್ಮದು ಶಿಸ್ತಿನ ಪಕ್ಷ ಅಂತಿದ್ದರು. ಅತ್ಯಂತ ಅಶಿಸ್ತಿನ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ. ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರ ಪುತ್ರ ಕಾಂತೇಶ ಕ್ಷೇತ್ರದಲ್ಲಿ ಈ ಮುನ್ನ ಓಡಾಡಿದ್ದರು. ಆದರೆ, ಇದೀಗ ಅವರು ಎಲ್ಲಿದ್ದಾರೆಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೈಸೂರಿನಿಂದ ಹಿಡಿದು ಬೀದರ್ ವರೆಗೆ ಬಿಜೆಪಿ ಅಶಿಸ್ತಿನ ಪಕ್ಷ ಎಂಬುದು ಸಾಬೀತಾಗಿದೆ. ಬಿಜೆಪಿಯವರು ಕೆಲಸ ನೋಡಿ ಮತ ಕೊಡಿ ಎನ್ನುತ್ತಿಲ್ಲ, ಮೋದಿ ನೋಡಿ ಓಟು ನೀಡಿ ಅನ್ನುತ್ತಾರೆ. ಇವತ್ತಿನ ಬಿಜೆಪಿ ಅಭ್ಯರ್ಥಿ ಬಗ್ಗೆ ನನಗೆ ನೋವು ಅನಿಸುತ್ತದೆ. ಅವರು ಸಚಿವರಾಗಿದ್ದರು, ಸಿಎಂ ಆಗಿದ್ದರು. ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಆಗಿಲ್ಲ. ಬರುವ 2025ರಲ್ಲಿ ಇಡೀ ಜಿಲ್ಲೆಗೆ ಕುಡಿಯುವ ನೀರು ಕೊಟ್ಟು ತೋರಿಸುತ್ತೇವೆ ಎಂದು ಶಿವಾನಂದ ಪಾಟೀಲ್ ಭರವಸೆ ನೀಡಿದರು.
ಇದನ್ನೂಓದಿ:ದಾವಣಗೆರೆಯಿಂದ ವಿನಯ್ ಕುಮಾರ್ಗೆ ಟಿಕೆಟ್ ಕೊಡದಿದ್ದರೆ ಸಭೆ ನಡೆಸಿ ಮುಂದಿನ ತೀರ್ಮಾನ : ಅಹಿಂದ ಮುಖಂಡರ ಎಚ್ಚರಿಕೆ