ಬೆಂಗಳೂರು: ಬಿಜೆಪಿಯವರು ತಂದಿರುವ ಕಾಯ್ದೆಗಳಿಗೆ ನಾವು ತಿದ್ದುಪಡಿ ತಂದಿದ್ದೇವೆ ಅಷ್ಟೇ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕಾನೂನಿನ ಅರಿವಿಲ್ಲ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.
2024ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ವಿಧಾನಸಭೆಯಲ್ಲಿ ನಿನ್ನೆ ಒಂದು ಬಿಲ್ ತಂದಿದ್ದೇವೆ. ಕೆಲವು ಧಾರ್ಮಿಕ ಪರಿಷತ್ಗೆ ತಿದ್ದುಪಡಿ ತಂದಿದ್ದೇವೆ. ವಿಶ್ವ ಕರ್ಮ ಸಮುದಾಯಕ್ಕೆ ಎ, ಬಿ, ಸಿ ಗ್ರೇಡ್ ದೇವಸ್ಥಾನಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಮೊದಲನೆಯದಾಗಿ ಇದು ಪ್ರಮುಖ ತಿದ್ದುಪಡಿಯಾಗಿದೆ. ಇದನ್ನ ಬಿಟ್ರೆ ಯಾವುದೇ ಬದಲಾವಣೆ ಮಾಡಿಲ್ಲ. ಅವೆಲ್ಲವೂ 2003ರ ಕಾಯ್ದೆಯಲ್ಲಿ ಏನು ಇದೆಯೋ ಹಾಗೆ ಇದೆ ಎಂದು ಸ್ಪಷ್ಟಪಡಿಸಿದರು.
ಚೌಡೇಶ್ವರಿ ಹಾಗೂ ಬಾಬಾ ಬುಡನ್ ಗಿರಿಯಲ್ಲಿ ಎರಡು ಧರ್ಮದವರಿಗೂ ಅವಕಾಶ ಇದೆ. ಈ ವ್ಯವಸ್ಥೆ ಹಿಂದಿನಿಂದಲೂ ಇದೆ. 2011ರಲ್ಲೇ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗಲೇ, ಹೆಚ್ಚಿನ ಆದಾಯ ಬಂದ ದೇವಸ್ಥಾನಗಳಲ್ಲಿ ಹಣ ತೆಗೆದುಕೊಳ್ಳಲಾಗುತ್ತಿತ್ತು. ಇದನ್ನ ಅವರೇ ಮಾಡಿರೋದು. 10 ಲಕ್ಷದ ಒಳಗಡೆ ಆದಾಯ ಇರುವ ದೇವಸ್ಥಾನಗಳು ಯಾವುದೇ ರೀತಿಯ ಹಣ ಕೊಡುವಂತಿಲ್ಲ. 10 ಲಕ್ಷದಿಂದ 1 ಕೋಟಿ ಆದಾಯ ಇರುವ ದೇವಸ್ಥಾನಗಳು 5% ಹಣ ಕೊಡಬೇಕು. 1 ಕೋಟಿ ಮೇಲೆ ಆದಾಯವಿರುವ ದೇವಸ್ಥಾನಗಳು 10% ಕೊಡಬೇಕು. ಈ ರೀತಿ ಅಪಾರ್ಥ ಯಾವುದಕ್ಕಾಗಿ ಮಾಡ್ತಿದ್ದಾರೊ ಗೊತ್ತಿಲ್ಲ ಎಂದರು.
ಹಿಂದೂ ದೇವಸ್ಥಾನದ ಹಣ ಅನ್ಯ ಧರ್ಮೀಯರಿಗೆ ಕೊಡಲಾಗ್ತಿದೆ ಎಂಬ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಹಿಂದೂ ದೇವಸ್ಥಾನಗಳ ಹಣ ಬೇರೆ ಯಾವುದಕ್ಕೂ ಬಳಕೆಯಾಗುವುದಿಲ್ಲ. ಈ ಹಣ ಮುಜರಾಯಿ ಇಲಾಖೆಗೂ ಬರುವುದಿಲ್ಲ. ಧಾರ್ಮಿಕ ಪರಿಷತ್ನ ಅಕೌಂಟ್ನಲ್ಲೇ ಇರುತ್ತೆ. ವಿಧಾನಸಭೆಯಲ್ಲಿ ಈ ತಿದ್ದುಪಡಿಯನ್ನ ಎಲ್ಲರೂ ಸೇರಿ ಪಾಸ್ ಮಾಡಲಾಗಿದೆ. ಬರೋ 30 ಕೋಟಿ ಹಣದಲ್ಲಿ ಸಿ ವರ್ಗದ ದೇವಸ್ಥಾನಕ್ಕೆ ಕೊಡುತ್ತೇವೆ. ಪರ್ಸೆಂಟೇಜ್ ವ್ಯವಹಾರವೆಲ್ಲ ಬಿಜೆಪಿಯವರದ್ದು. ವಿವಾದ ಮಾಡೋದೆ ಬಿಜೆಪಿಯವರ ಹುಟ್ಟುಗುಣ. ಕಾನೂನಿನ ಅರಿವಿಲ್ಲ, ವಿಜಯೇಂದ್ರ ಅವರು ಬಿಜೆಪಿ ರಾಜ್ಯಾದ್ಯಕ್ಷ ಸ್ಥಾನಕ್ಕೆ ಇಮ್ಮೆಚ್ಯುರುಡ್ ಅಂತಾ ಹೇಳಬೇಕಾಗುತ್ತೆ. ಅವರು ಒಂದು ಸಾರಿ ಧಾರ್ಮಿಕ ಪರಿಷತ್ನ ಪುಸ್ತಕವನ್ನ ಓದಲಿ. ಓದಿದ ನಂತರ ಮಾತಾಡಿದ್ರೆ ಅವರಿಗೆ ಒಂದು ಗೌರವ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಮಾಡಿರೋದನ್ನ ವಿಜಯೇಂದ್ರ ಅವರಿಗೆ ಕಳಿಸುತ್ತೇನೆ ಎಂದರು.
ಇದನ್ನೂ ಓದಿ: ಭಕ್ತರಿಗೆ ಗುಡ್ ನ್ಯೂಸ್ ಕೊಟ್ಟ ಧಾರ್ಮಿಕ ದತ್ತಿ ಇಲಾಖೆ: ಸಬ್ಸಿಡಿ ಸೌಲಭ್ಯದಲ್ಲಿ ಭಾರತ್ ಗೌರವ್ ದಕ್ಷಿಣ ಯಾತ್ರಾ ಭಾಗ್ಯ