ದಾವಣಗೆರೆ : ನಗರದ ಜಿಎಂಐಟಿ ಗೆಸ್ಟ್ ಹೌಸ್ನಲ್ಲಿ ರೆಬಲ್ ಶಾಸಕ ಬಸನಗೌಡ ಯತ್ನಾಳ್ ನೇತೃತ್ವದಲ್ಲಿ ಬಿಜೆಪಿ ಭಿನ್ನಮತಿಯರ ಸಭೆ ನಡೆಯಿತು. ಈ ಸಭೆಯಲ್ಲಿ ಮಾಜಿ ಸಂಸದರಾದ ಪ್ರತಾಪ್ ಸಿಂಹ, ಜಿ. ಎಂ ಸಿದ್ದೇಶ್ವರ್, ಬಿಜೆಪಿ ಶಾಸಕ ಬಿ. ಪಿ ಹರೀಶ್ ಭಾಗಿಯಾಗಿದ್ದರು.
ನಗರದಲ್ಲಿಂದು ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿರುವ ವಿಚಾರವಾಗಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಸೂಚನೆ ಕೊಟ್ಟಿದೆ. ಸದ್ಯ ಈ ವಿಚಾರದ ಬಗ್ಗೆ ಬಹಿರಂಗ ಚರ್ಚೆ ಬೇಡ ಎಂದು ರಾಷ್ಟ್ರ ನಾಯಕರು ತಿಳಿಸಿದ್ದಾರೆ ಎಂದರು.
ಹೈಕಮಾಂಡ್ ತೀರ್ಮಾನಿಸಲಿದೆ : ಸೂಕ್ತ ಸಮಯದಲ್ಲಿ ನಿರ್ಣಯಿಸುತ್ತೇವೆ, ಸುಮ್ಮನಿರಿ ಎಂದು ಹೇಳಿದ್ದಾರೆ. ಆದರೆ ರಾಜ್ಯಾಧ್ಯಕ್ಷರ ಬದಲಾವಣೆಗೆ ನಾವು ಪಟ್ಟು ಹಿಡಿದಿಲ್ಲ. ನಾವು 38 ಜನ ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದ್ದೇವೆ. ಮುಂದಿನ ಕ್ರಮ ತೆಗೆದುಕೊಳ್ಳೋದು ಹೈಕಮಾಂಡ್ಗೆ ಬಿಟ್ಟಿದ್ದು. ವಿಜಯೇಂದ್ರ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಹೇಳಿದರು.
ಯೋಗ್ಯ ನಿರ್ಣಯ ತೆಗೆದುಕೊಳ್ಳುತ್ತಾರೆ ಎನ್ನೋ ವಿಶ್ವಾಸ ಇದೆ. ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ತಿಳಿಸಿದೆ. ಹೀಗಾಗಿ, ಈ ಬಗ್ಗೆ ಮಾತನಾಡಲ್ಲ ಎನ್ನುತ್ತಲೇ ಬದಲಾವಣೆ ಬಗ್ಗೆ ಹೇಳಿಕೆ ಕೊಟ್ಟರು.
ಯತ್ನಾಳ್ರಿಂದ ಸಂಸ್ಕಾರ ಕಲಿಯಬೇಕಿಲ್ಲ ಎಂಬ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಚಿತ್ರದುರ್ಗದಲ್ಲಿ ಒಂದು ಸಂಸ್ಕಾರ ಆಗಿದೆ. ಇನ್ನೊಂದು ಅವರ ಮನೆಯಲ್ಲಾಗಿದೆ ಎಂದು ಹೊಸ ಬಾಂಬ್ ಸಿಡಿಸಿದರು.
ಬಿಜೆಪಿಯಲ್ಲಿ ಕುದುರೆ ವ್ಯಾಪಾರ ಒಪ್ಪೊಲ್ಲ. ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ. ನಾವು ನಮ್ಮ ಪಕ್ಷ ಕುದುರೆ ವ್ಯಾಪಾರಕ್ಕೆ ಒಪ್ಪೊಲ್ಲ, ನಮ್ಮಲ್ಲೇ ದುಡ್ಡಿರೋರಿಗೆ ಆ ಆಸೆ ಇರಬಹುದು ಎಂದು ಪರೋಕ್ಷವಾಗಿ ವಿಜಯೇಂದ್ರ ಅವರಿಗೆ ಯತ್ನಾಳ್ ಟಾಂಗ್ ಕೊಟ್ಟರು.
ಬಹಳಷ್ಟು ಭ್ರಷ್ಟಾಚಾರ ಮಾಡಿದ ಹಣ ಇರಬಹುದು. ಏಕಂದ್ರೆ ಕೌಂಟಿಂಗ್ ಮಷಿನ್ ಸಿಕ್ಕಿದ್ದು ನಿಮಗೆ ಗೊತ್ತಿದೆ. ಅದಕ್ಕೆ ನಮ್ಮ ಹೈಕಮಾಂಡ್ ಒಪ್ಪೋದಿಲ್ಲ. ಈ ರಾಜ್ಯದಲ್ಲಿ ಚುನಾವಣೆ ನಡೆದು ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ಯಾರಂಟಿ ಕೊಟ್ಟು ರಾಜ್ಯ ದಿವಾಳಿಯಾಗಿದೆ : ಗ್ಯಾರಂಟಿ ಕೊಟ್ಟು ರಾಜ್ಯ ದಿವಾಳಿಯಾಗಿದ್ದು, ಗ್ಯಾರಂಟಿ ಸಂಪೂರ್ಣ ವಿಫಲವಾಗಿದೆ. 1200 ಕೋಟಿ ರೂ. ಇರೋರು ಕಾಂಗ್ರೆಸ್ನಲ್ಲಿಯೂ ಇದ್ದಾರೆ, ಬಿಜೆಪಿಯಲ್ಲಿಯೂ ಇದ್ದಾರೆ. ಸಿದ್ದರಾಮಯ್ಯನವರಿಗೆ ನಾನು ಹೇಳಿದ್ದೆ. ರಾಜೀನಾಮೆ ಕೊಡಿ ಎಂದು ಸಲಹೆ ಕೊಟ್ಟಿದ್ದೆ. ಮೊದಲು ಸಿದ್ದರಾಮಯ್ಯನವರದ್ದು ಮುಡಾ ತೆಗೆದಿದ್ದು ಕಾಂಗ್ರೆಸ್ನವರು. ನಂತರ ಮಲ್ಲಿಕಾರ್ಜುನ ಖರ್ಗೆ 5 ಎಕರೆ ಜಮೀನು ವಿವಾದ ತೆಗೆದಿದ್ದು ಅವರೇ ಎಂದು ಯತ್ನಾಳ್ ಹೇಳಿದ್ರು.