ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರನಿಂದ ಲಂಚಕ್ಕೆ ಬೇಡಿಕೆ ಇಟ್ಟು, ಜೀವ ಬೆದರಿಕೆ ಹಾಕಿರುವ ಆರೋಪ ಪ್ರಕರಣ ಸಂಬಂಧ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ರಾಜ್ಯ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ನೀಡಿದೆ.
ನೋಟಿಸ್ನಲ್ಲಿ ಏನಿದೆ?: 'ದೃಶ್ಯ ಮಾಧ್ಯಮದಲ್ಲಿ ನಿನ್ನೆಯಿಂದ ಪ್ರಸಾರಗೊಳ್ಳುತ್ತಿರುವಂತೆ ನೀವು ಅವಹೇಳನಕಾರಿಯಾಗಿ ಮಾತನಾಡಿರುವಂತೆ ಪ್ರಸರಣಗೊಳ್ಳುತ್ತಿದೆ. ಈ ಕುರಿತಂತೆ ತಮ್ಮ ಮೇಲೆ ಎಫ್‌ಐಆರ್ ಕೂಡ ದಾಖಲಾಗಿದೆ. ಈ ತರಹದ ಘಟನೆ ಪಕ್ಷದ ಶಿಸ್ತಿಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಶಿಸ್ತು ಸಮಿತಿ ಹೇಳಿದೆ. ಆದುದರಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ 5 ದಿನಗಳ ಒಳಗಾಗಿ ಬಿಜೆಪಿ ಶಿಸ್ತು ಸಮಿತಿಯ ಮುಂದೆ ಸ್ಪಷ್ಟೀಕರಣ ನೀಡಬೇಕು' ಎಂದು ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ನೋಟಿಸ್ ನೀಡಿದ್ದಾರೆ.
ಪೊಲೀಸ್ ವಶದಲ್ಲಿ ಮುನಿರತ್ನ: ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಬಳಿ 30 ಲಕ್ಷಕ್ಕೆ ಬೇಡಿಕೆ ಇಟ್ಟು, ಜೀವ ಬೆದರಿಕೆ ಹಾಕಿರುವ ಆರೋಪದಡಿ ಶಾಸಕ ಮುನಿರತ್ನ ಅವರನ್ನು ಪೊಲೀಸರು ಕೋಲಾರದಲ್ಲಿ ವಶಕ್ಕೆ ಪಡೆದಿದ್ದಾರೆ. ಮುಳಬಾಗಿಲು ತಾಲೂಕಿನ ನಂಗಲಿ ಬಳಿ ಶಾಸಕ ಮುನಿರತ್ನ ಅವರನ್ನು ಶನಿವಾರ ಸಾಯಂಕಾಲ ವಶಕ್ಕೆ ಪಡೆಯಲಾಗಿದೆ.
ಗುತ್ತಿಗೆದಾರನ ದೂರಿನಲ್ಲಿ ಏನಿದೆ?: ಶಾಸಕ ಮುನಿರತ್ನ ನನಗೆ ಕೊಲೆ ಬೆದರಿಕೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗುತ್ತಿಗೆದಾರ ಚಲುವರಾಜು ಎಂಬವರು ದೂರು ನೀಡಿದ್ದರು. ಅಲ್ಲದೇ, ರಕ್ಷಣೆ ನೀಡುವಂತೆ ಅವರು ಮನವಿ ಮಾಡಿದ್ದರು. ಈ ಬಗ್ಗೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಚಲುವರಾಜು ನೀಡಿರುವ ದೂರಿನನ್ವಯ ಶಾಸಕ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾದರೆ, ಪಾಲಿಕೆ ಸದಸ್ಯ ವೇಲುನಾಯಕ್ ನೀಡಿರುವ ದೂರಿನಂತೆ ಶಾಸಕರ ವಿರುದ್ಧ ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪ: ಶಾಸಕ ಮುನಿರತ್ನ ಪೊಲೀಸರ ವಶಕ್ಕೆ - BJP MLA Muniratna