ಬೆಂಗಳೂರು: ಹಾಸನ, ಮಂಡ್ಯ ಹಾಗೂ ಕೋಲಾರ ಲೋಕಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಪಕ್ಷದ ರಾಜ್ಯ ಕಚೇರಿಯಲ್ಲಿ ಇಂದು ಕೋರ್ ಕಮಿಟಿ ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲಗಳು ಇಲ್ಲ. ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕುತ್ತೇವೆ ಎಂದರು.
ನಾವು ಕೇಳಿರೋದು 3 - 4 ಕ್ಷೇತ್ರ: ಸೀಟು ಹಂಚಿಕೆ ಬಗ್ಗೆ ಅಧಿಕೃತವಾಗಿ ಘೋಷಣೆ ಆಗುವ ವರೆಗೂ ಮಾತನಾಡುವುದಿಲ್ಲ. ಆದರೆ, ಅಭ್ಯರ್ಥಿಗಳ ಘೋಷಣೆ ಹಾಗೂ ಕ್ಷೇತ್ರಗಳ ಹಂಚಿಕೆ ವಿಳಂಬ ಆಗುತ್ತಿದೆ ಎಂದು ಪಕ್ಷದ ನಾಯಕರು ಆತಂಕ ವ್ಯಕ್ತಪಡಿಸಿದರು. ನಾವು ಬಿಜೆಪಿಯಿಂದ 6-7 ಸೀಟು ಕೇಳಿಲ್ಲ. ನಾವು ಕೇಳಿರೋದು 3-4 ಸೀಟು ಮಾತ್ರ. ನಮ್ಮ ಶಕ್ತಿ ಅವರಿಗೂ ಗೊತ್ತಿದೆ. 3 - 4 ಸೀಟು ಕೊಡ್ತಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದೇನೆ. ಕೇವಲ ಎರಡು ಕ್ಷೇತ್ರ ತೆಗೆದುಕೊಳ್ಳೋಕೆ ನಾನು ಇಷ್ಟು ಪ್ರಯತ್ನ ಮಾಡಬೇಕಿತ್ತಾ? ಇಷ್ಟೆಲ್ಲಾ ಹೊಂದಾಣಿಕೆ ಬೇಕಾ ನನಗೆ? ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಹಾಸನ, ಮಂಡ್ಯದಲ್ಲಿ ಸ್ವತಂತ್ರವಾಗಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ತ್ರಿಕೋನ ಸ್ಪರ್ಧೆ ಆದರೆ ಸುಲಭವಾಗಿ ನಾವು ಗೆಲ್ಲುತ್ತೇವೆ. ಆದರೆ 18 ಕ್ಷೇತ್ರಗಳಲ್ಲಿ ಬಿಜೆಪಿಗೆ ನಮ್ಮ ಪಕ್ಷದಿಂದ ಅನುಕೂಲ ಆಗಲಿದೆ. ಈ ವಿಷಯವನ್ನು ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ನಮ್ಮ ಶಕ್ತಿ ಧಾರೆ ಎರೆದರೆ ಬಿಜೆಪಿಗೆ ಒಳ್ಳೆಯ ಫಲಿತಾಂಶ ಬರುತ್ತದೆ. ಏಕೆಂದರೆ ಕರ್ನಾಟಕದ ರಾಜಕೀಯ ಬೇರೆ, ದೇಶದ ಇತರ ರಾಜ್ಯಗಳ ರಾಜಕೀಯವೇ ಬೇರೆ. ಇದನ್ನು ಬಿಜೆಪಿ ಹೈಕಮಾಂಡ್ ಗಮನಕ್ಕೆ ತನ್ನಿ ಎಂದು ಮುಖಂಡರು ನನ್ನ ಮೇಲೆ ಒತ್ತಡ ಹಾಕಿದ್ದಾರೆ ಎಂದು ಹೆಚ್ ಡಿಕೆ ತಿಳಿಸಿದರು.
18 ಕ್ಷೇತ್ರಗಳಲ್ಲಿ ಬಿಜೆಪಿಗೆ ಅನುಕೂಲ ಆಗುತ್ತದೆ: ನಮ್ಮ ಪಕ್ಷದ ಮುಖಂಡರು ಜೆಡಿಎಸ್ - ಬಿಜೆಪಿ ಮೈತ್ರಿಯಿಂದ ಜೆಡಿಎಸ್ಗೆ ದೊಡ್ಡ ಲಾಭವಿಲ್ಲ ಎಂದು ಹೇಳಿದ್ದಾರೆ. 18 ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಮತಗಳಲ್ಲಿ ಶೇ3 - 4ರಷ್ಟು ಬಿಜೆಪಿಗೆ ಸ್ವಿಂಗ್ ಆದರೆ 18 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ನಮ್ಮ ಪಕ್ಷದ ದುಡಿಮೆ ಬಿಜೆಪಿಗೆ ಅನುಕೂಲ ಆಗುತ್ತದೆ. ಇದನ್ನು ಬಿಜೆಪಿ ಹೈಕಮಾಂಡ್ ಗಮನಕ್ಕೆ ತನ್ನಿ ಎಂದು ಮುಖಂಡರು ಹೇಳಿದ್ದಾರೆ. ಬಿಜೆಪಿ ಸರಿಯಾಗಿ ನಮ್ಮನ್ನು ಬಳಕೆ ಮಾಡಿಕೊಳ್ಳಲಿ. ಇಲ್ಲದೇ ಹೋದರೆ ಮುಂದೆ ಪೆಟ್ಟು ಬಿದ್ದರೆ ಅದರ ಸಾಧಕ - ಬಾಧಕಗಳಿಗೆ ಬಿಜೆಪಿ ಜವಾಬ್ದಾರಿ ಆಗಲಿದೆ ಎಂದರು.
ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ: ಜೆಡಿಎಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಮಿತ್ರಪಕ್ಷ ಬಿಜೆಪಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ, ಕೋಲಾರ ಲೋಕಸಭೆ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಡಲು ವಿಳಂಬ ಮಾಡುತ್ತಿರುವ ಬಗ್ಗೆ ಅತೃಪ್ತಿ ಹೊರ ಹಾಕಿದರು. ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಶಕ್ತಿ ಇದೆ ಅಂತ ಎಲ್ಲರಿಗೂ ಗೊತ್ತು. ರಾಜಕೀಯ ವಿಶ್ಲೇಷಣೆ ಮಾಡುವ ಎಲ್ಲರಿಗೂ ಈ ವಿಷಯ ಗೊತ್ತಿದೆ. ಬಿಜೆಪಿ ಅವರು ಇದನ್ನೆಲ್ಲ ಗಮನಿಸುತ್ತಾರೆ. ಅದನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಿ ಅಂತ ಹೇಳೋಕೆ ನಾವು ಸಭೆ ಮಾಡಿದ್ದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಮ್ಮ ಪಕ್ಷದ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಗೊಂದಲಕ್ಕೆ ಎಡೆ ಮಾಡಿಕೊಡದೇ ಒಟ್ಟಾಗಿ ಕೆಲಸ ಮಾಡಿ. ಅದು ನನ್ನ ವಿನಂತಿ. ನಮ್ಮ ಗುರಿ ನಾವು ಮುಟ್ಟಬೇಕು. ನಮ್ಮ ಗುರಿ ಅಧಿಕಾರ ಅಲ್ಲ, ರಾಜ್ಯದ ಅಭಿವೃದ್ಧಿ ಮಾತ್ರ. 75 ವರ್ಷಗಳಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ. ಮೈತ್ರಿ ಕಾರಣ ನಮ್ಮ ರಾಜ್ಯದ ಅಭಿವೃದ್ಧಿಗೆ ಪರಿಹಾರ ತರಬೇಕು. ನಿತ್ಯ ಕೇಂದ್ರದ ಮೇಲೆ ಆರೋಪ ಮಾಡುವ ಕಾಂಗ್ರೆಸ್ 45 ವರ್ಷ ರಾಜ್ಯ, ದೇಶವನ್ನು ಆಳಿದೆ. ಕಾಂಗ್ರೆಸ್ ನ ಕೊಡುಗೆ ರಾಜ್ಯಕ್ಕೆ ಏನು? ನಿಮ್ಮಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಇದನ್ನು ಸರಿ ಮಾಡೋಕೆ ನಮ್ಮ ಮೈತ್ರಿ ಆಗಿದೆ. ಲೋಕಸಭೆಯಲ್ಲಿ ದನಿ ಗಟ್ಟಿಯಾಗಿರಬೇಕು. ಲೋಕಸಭೆಯಲ್ಲಿ ನಮ್ಮ ದನಿ ಇರಬೇಕು ಎಂದು ಹೇಳಿದರು.
ನಾಡಿನ ಜನರಿಗೆ ಮನವಿ ಮಾಡುತ್ತೇನೆ. ಎಲ್ಲ 28 ಕ್ಷೇತ್ರಗಳಲ್ಲಿ ಬಿಜೆಪಿ - ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಆಶೀರ್ವಾದ ಮಾಡಿ. ಒಂದು ಅವಕಾಶವನ್ನು ದೇವೇಗೌಡರ ಮಾರ್ಗದರ್ಶನದಲ್ಲಿ ನಾವು ಮೈತ್ರಿಗೆ ಸಹಕಾರ ಕೊಡ್ತಿದ್ದೇವೆ. ನಾಡಿಗೆ ಆಗಿರುವ ಅನ್ಯಾಯ ಸರಿ ಮಾಡೋಕೆ ನಾವು ಮೈತ್ರಿ ಆಗಿದ್ದೇವೆ. ರಾಜ್ಯದ ಅನ್ಯಾಯ ಸರಿ ಮಾಡೋದರಲ್ಲಿ ನಾವು ವಿಫಲವಾದರೆ ನೀವು ನಮ್ಮನ್ನು ನೇರವಾಗಿ ಪ್ರಶ್ನೆ ಮಾಡಿ ಎಂದು ಹೇಳಿದರು.
ಇವತ್ತಿನ ಸಭೆಯಲ್ಲಿ ಚುನಾವಣೆ ಉಸ್ತುವಾರಿಗಳು ಮತ್ತು ಜಿಲ್ಲಾ ಘಟಕದ ಅಧ್ಯಕ್ಷರು ಭಾಗವಹಿಸಿದ್ದರು. ಕೆಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಅ ಸಭೆಯಲ್ಲಿ ನಮ್ಮ ಪ್ರಮುಖರು ಅಭಿಪ್ರಾಯ ಹೇಳಿದ್ದಾರೆ. ನಮ್ಮ ಉದ್ದೇಶ ಕಾಂಗ್ರೆಸ್ನವರು ಜೆಡಿಎಸ್ ಪಕ್ಷವನ್ನು ಮುಗಿಸ್ತೀವಿ ಎನ್ನುತ್ತಿದ್ದಾರೆ. 28 ಕ್ಷೇತ್ರ ಗೆಲ್ಲುತ್ತೇವೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಇದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸಹಕಾರ ಇರುವ ರೀತಿಯಲ್ಲೇ ಬಿಜೆಪಿಯಿಂದಲೂ ಸಹಕಾರ ಇರಬೇಕು. ಅದನ್ನು ಸರಿ ಮಾಡುವ ನಿಟ್ಟಿನಲ್ಲಿ ಕೆಲವು ಸೂಚನೆ ಬಿಜೆಪಿ ಅವರಿಗೆ ನೀಡಬೇಕು ಅಂತ ಕೆಲವರು ಹೇಳಿದ್ದಾರೆ ಎಂದರು.
ಎರಡು ಪಕ್ಷದ ನಾಯಕರ ಸಭೆಗಳು, ಚುನಾವಣೆ ಪ್ರಚಾರದಲ್ಲಿ ಎರಡು ಪಕ್ಷಗಳು ಹೇಗೆ ಕೆಲಸ ಮಾಡಬೇಕು. ಬೂತ್ ಮಟ್ಟದಲ್ಲಿ ಹೇಗೆ ಕಾರ್ಯಕರ್ತರು ಕೆಲಸ ಮಾಡಬೇಕು ಅಂತ ಸಲಹೆ ಕೊಡಬೇಕು ಅಂತ ಹೇಳಿದ್ದಾರೆ. ಉತ್ತರ ಕರ್ನಾಟಕದ ಕೆಲವು ಕ್ಷೇತ್ರಗಳ ವಿಜಯಪುರ, ಕಲಬುರ್ಗಿಯಲ್ಲಿ ಬಿಜೆಪಿಗಿಂತ ಜೆಡಿಎಸ್ ಪ್ರಬಲವಾಗಿದೆ. ಇಂತಹ ಕ್ಷೇತ್ರಗಳಲ್ಲಿ ನಮ್ಮ ನಾಯಕರನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಇದರ ಬಗ್ಗೆ ಬಿಜೆಪಿ ಹೈಕಮಾಂಡ್ ಜತೆ ಚರ್ಚೆ ಆಗಬೇಕು ಅಂತ ಪ್ರಮುಖರು ಹೇಳಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ನಮಗೆ ಗೌರವಯುತವಾಗಿ ನಡೆಸಿಕೊಳ್ಳಬೇಕು, ಕಡೆಗಣಿಸಬಾರದು. ಅದರಿಂದ ಆಗುವ ಪರಿಣಾಮವನ್ನು ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಇದೆಲ್ಲವನ್ನೂ ಬಿಜೆಪಿ ಹೈಕಮಾಂಡ್ ಜತೆ ಚರ್ಚೆ ಮಾಡಿ ಸೌಹಾರ್ದಯುತವಾಗಿ ಒಟ್ಟಾಗಿ ಕೆಲಸ ಮಾಡೋ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ ಎಂದರು. ಕೋರ್ ಕಮಿಟಿ ಅಧ್ಯಕ್ಷರ ಜಿ.ಟಿ ದೇವೇಗೌಡ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಶಾಸಕ ಸಮೃದ್ಧಿ ಮಂಜುನಾಥ್, ಮಾಜಿ ಶಾಸಕ ತಿಮ್ಮರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂಓದಿ:ನಮ್ಮ ಶಕ್ತಿ ಇರುವ ಕಡೆ ಮಾತ್ರ ಟಿಕೆಟ್ ಕೇಳಿದ್ದೇವೆ: ಜಿ ಟಿ ದೇವೇಗೌಡ