ಬೆಂಗಳೂರು: ಕರ್ನಾಟಕ ಸರ್ಕಾರ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳುವ ಮೂಲಕ ಚುನಾವಣೆ ಎದುರಿಸಲು ಸಜ್ಜಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆರೋಪಿಸಿದರು. ನೃಪತುಂಗ ರಸ್ತೆಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಇಂದು ಭೇಟಿ ನೀಡಿ ದೂರು ಸಲ್ಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮಾರ್ಚ್ 28ರಂದು ರಾಯಬಾಗ ತಾಲೂಕಿನಲ್ಲಿ ಅಧಿಕೃತ ಪರವಾನಗಿ ಪಡೆದ ಪ್ರಚಾರ ವಾಹನ ತೆರಳುತ್ತಿದ್ದಾಗ ಚುನಾವಣಾ ಅಧಿಕಾರಿಗಳು ಅದನ್ನು ತಡೆದು ನಿಲ್ಲಿಸಿ ಚುನಾವಣಾ ಸಾಮಗ್ರಿಗೆ ಬೆಂಕಿ ಹಚ್ಚಿದ್ದಾರೆ. ಈ ಕುರಿತು ತಕ್ಷಣ ನಾವು ಮುಖ್ಯ ಚುನಾವಣಾಧಿಕಾರಿಗೆ ಏ.4ರಂದು ದೂರು ಕೊಟ್ಟಿದ್ದೆವು. ಆ ದೂರನ್ನು ಪರಿಶೀಲಿಸಿ ಸ್ಥಳ ಮಹಜರು ಮಾಡಿದ ಅಧಿಕಾರಿಗಳು ಸುಟ್ಟಿರುವ ಜಾಗ ಕಾಗವಾಡ ತಾಲುಕಿನ ಹೂಗಾರ ಗ್ರಾಮವಾಗಿರುತ್ತದೆ ಎಂದು ತಿಳಿಸಿದ್ದಾರೆ. ಆದರೆ, ಇದಕ್ಕೆ ನಮಗೆ ಸಂಬಂಧ ಇಲ್ಲವೆಂದು ಹೇಳಿಕೆ ಕೊಟ್ಟಿದ್ದಾರೆ ಎಂದು ಆಕ್ಷೇಪಿಸಿದರು.
ಪಂಚನಾಮೆ ಮಾಡುವಾಗ ದೂರುದಾರರನ್ನು, ಸಾಕ್ಷಿದಾರರನ್ನು ಕರೆದು ಮಾಡಬೇಕಿತ್ತು ಎಂದರಲ್ಲದೆ, ಚುನಾವಣೆಯ ಅಕ್ರಮದಲ್ಲಿ ಅಧಿಕಾರಿಗಳೇ ಪಾಲುದಾರರಾಗಿದ್ದಾರೆ. ಒಂದು ಪಕ್ಷದ ಪರವಾಗಿ ಚುನಾವಣೆ ಮಾಡಲು ಅಧಿಕಾರಿಗಳೇ ಮುಂದಾಗಿದ್ದಾರೆ ಎಂದು ಟೀಕಿಸಿದ ಅವರು, ಜಿಲ್ಲಾಧಿಕಾರಿಗಳು ಈ ವರದಿಯನ್ನು ಸಮರ್ಪಕವಾಗಿ ಪರಿಶೀಲನೆ ಮಾಡಬೇಕಿತ್ತು ಎಂದು ತಿಳಿಸಿದರು. ಅವರ ಲೋಪವೂ ಇದರಲ್ಲಿದೆ. ವಿಡಿಯೋ ಕ್ಲಿಪ್ಪಿಂಗ್‍ನಲ್ಲಿರುವ ಅಧಿಕಾರಿಗಳನ್ನು ಕೂಡಲೇ ಅಮಾನತುಪಡಿಸಬೇಕು ಎಂದು ಆಗ್ರಹಿಸಿದರು.
ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಈಶ್ವರಪ್ಪನವರು ನಮ್ಮ ಪಕ್ಷದ ನಾಯಕರ ಭಾವಚಿತ್ರ ಬಳಸಬಾರದು ಎಂದು ಮನವಿ ಮಾಡಿದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿವೇಕ್ ರೆಡ್ಡಿ, ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ವಸಂತ್ ಕುಮಾರ್ ಮತ್ತು ಬಿಜೆಪಿ ಚುನಾವಣಾ ಆಯೋಗದ ಪ್ರಮುಖ ದತ್ತಗುರು ಹೆಗ್ಡೆ ಉಪಸ್ಥಿತರಿದ್ದರು.
ಇದನ್ನೂಓದಿ: ದಿಂಗಾಲೇಶ್ವರ ಸ್ವಾಮೀಜಿ ಹೇಳಿರುವುದೆಲ್ಲವೂ ನನಗೆ ಆಶೀರ್ವಾದ: ಪ್ರಹ್ಲಾದ್ ಜೋಶಿ - Pralhad Joshi