ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರದ ವೇಳೆ ಕಲಾವಿದರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ರಾಜ್ಯ ಸಂಚಾಲಕ ಗಣೇಶ್ ರಾವ್ ಕೇಸರ್ಕರ್, ರಾಜ್ಯ ಸಹ-ಸಂಚಾಲಕ ವಿಕ್ರಂ ಸೂರಿ ಮತ್ತು ಪ್ರಮುಖ ರಂಗಭೂಮಿ ಕಲಾವಿದರು ಇಂದು ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ ಮುಖ್ಯಮಂತ್ರಿಗಳ ವಿರುದ್ಧ ದೂರು ಸಲ್ಲಿಸಿದರು.
ಮುಖ್ಯಮಂತ್ರಿಗಳು ತಮ್ಮ ಹೇಳಿಕೆ ಮೂಲಕ ಕಲಾವಿದರಿಗೆ ಅವಮಾನ ಮಾಡಿದ್ದಾರೆ. ದೇಶದ ಸಾಂವಿಧಾನಿಕ ಸ್ಥಾನದ ಜವಾಬ್ದಾರಿಯಲ್ಲಿರುವ, ದೇಶದ ಉನ್ನತ ಸ್ಥಾನದ ವ್ಯಕ್ತಿಗಳನ್ನು ಕುರಿತು ಅವಹೇಳನಕಾರಿ ಮಾತನಾಡಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು. ಈ ಸಂಬಂಧ ಮನವಿಯ ಜೊತೆಗೆ ‘ಮೋದಿ ಒಳ್ಳೆಯ ನಾಟಕಕಾರ’ ಎಂಬ ಪತ್ರಿಕಾ ತುಣುಕನ್ನೂ ಲಗತ್ತಿಸಲಾಗಿದೆ.
ಈ ವೇಳೆ ಹಿರಿಯ ಮುಖಂಡರಾದ ದತ್ತಗುರು ಹೆಗ್ಡೆ, ರಂಗಕರ್ಮಿಗಳಾದ ಪ್ರಸನ್ನ ಕುಮಾರ್, ಪುನೀತ್, ರಂಗಭೂಮಿ ಕಲಾವಿದರಾದ ರಜನಿಕಾಂತ್, ಗೀತಾ, ರಂಗಕರ್ಮಿ ಅಜಿತ್ ಬಸಾಪುರ್, ರಂಗಭೂಮಿ ನಟ ಅಭಿಷೇಕ್ ಕೊಡಿಯಲ್ ಸೇರಿದಂತೆ ಸುಮಾರು 25 ಜನ ರಂಗಭೂಮಿ ಕಲಾವಿದರು ನಿಯೋಗದಲ್ಲಿ ಇದ್ದರು.