ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿದ್ದು, ನಾಳೆ ಅಧಿಕೃತವಾಗಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಸಂಖ್ಯಾ ಬಲದ ಆಧಾರದಲ್ಲಿ ಬಿಜೆಪಿಗೆ ಮೂರು ಸ್ಥಾನ ಸಿಗಲಿದೆ. ಮೂರು ಸ್ಥಾನಕ್ಕೆ 30ಕ್ಕೂ ಹೆಚ್ಚಿನ ಆಕಾಂಕ್ಷಿಗಳಿದ್ದು ಅಭ್ಯರ್ಥಿಗಳ ಆಯ್ಕೆ ವಿಳಂಬಕ್ಕೆ ಕಾರಣವಾಗಿದೆ. ರಾಜ್ಯ ಘಟಕ 30 ಹೆಸರುಗಳನ್ನು ಇರಿಸಿಕೊಂಡು ಪ್ರತಿ ಸ್ಥಾನಕ್ಕೆ ಐದು ಹೆಸರುಗಳಂತೆ 15 ಹೆಸರುಗಳನ್ನು ಹೈಕಮಾಂಡ್ಗೆ ಕಳುಹಿಸಿಕೊಟ್ಟಿತ್ತು. ನಂತರ ತಲಾ 3 ಹೆಸರು ಅಂತಿಮಗೊಳಿಸಿ, ಕಳುಹಿಸಿ ಎನ್ನುವ ಮತ್ತೊಂದು ನಿರ್ದೇಶನದ ಬಳಿಕ ಮತ್ತೊಮ್ಮೆ ಪಟ್ಟಿ ಪರಿಶೀಲನೆ ಮಾಡಿ ಪ್ರತಿ ಕ್ಷೇತ್ರಕ್ಕೆ 3 ಹೆಸರುಗಳಂತೆ 9 ಹೆಸರುಗಳ ಪಟ್ಟಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ. ಅಂತಿಮಗೊಳಿಸಿ ಕಳುಹಿಸಿಕೊಟ್ಟಿದ್ದರು.
ಪಟ್ಟಿಯನ್ನು ಪರಿಶೀಲನೆ ನಡೆಸಿರುವ ಬಿಜೆಪಿ ಹೈಕಮಾಂಡ್ ಕಳೆದ ರಾತ್ರಿ ಮೂವರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. ಇಂದು ಹೆಸರುಗಳಿಗೆ ಚುನಾವಣಾ ಸಮಿತಿಯ ಅನುಮೋದನೆ ಪಡೆದುಕೊಳ್ಳುವ ಪ್ರಕ್ರಿಯೆ ನಡೆಸಲಿದ್ದು ನಾಳೆ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದೆ.
ಹಾಲಿ ಸದಸ್ಯ ಎನ್.ರವಿಕುಮಾರ್, ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಸಚಿವ ಮಾಧುಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಸಿ.ಮಂಜುಳಾ, ಗೀತಾ ವಿವೇಕಾನಂದ, ಮಾಳವಿಕಾ ಅವಿನಾಶ್ ಹೆಸರುಗಳು ಪ್ರಮುಖವಾಗಿ ಪಟ್ಟಿಯಲ್ಲಿದ್ದವು. ಇವುಗಳ ಹೊರತುಪಡಿಸಿಯೂ ಸಾಕಷ್ಟು ಹೆಸರಿದ್ದವು. ಇವುಗಳ ಕುರಿತು ಚರ್ಚಿಸಿ ಪಟ್ಟಿಯನ್ನು ಹೈಕಮಾಂಡ್ ಅಂತಿಮಗೊಳಿಸಿದೆ.
ಸಂಭಾವ್ಯ ಹೆಸರುಗಳು:
- ಸುಮಲತಾ ಅಂಬರೀಶ್
- ಪ್ರೊ.ಮಾ ನಾಗರಾಜ್
- ಎನ್.ರವಿಕುಮಾರ್
ಮಂಡ್ಯ ಸಂಸದೆಯಾಗಿದ್ದ ಸುಮಲತಾ ಅಂಬರೀಶ್ ಬಿಜೆಪಿ ಸೇರಿ ಕ್ಷೇತ್ರವನ್ನು ತ್ಯಾಗ ಮಾಡಿ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣಕ್ಕಾಗಿ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಗಿದೆ. ಉತ್ತಮ ವಾಗ್ಮಿ ಹಾಗು ಮಹಿಳಾ ಕೋಟಾ ಎರಡಕ್ಕೂ ಸಮರ್ಥ ನಾಯಕಿ ಆಗಿರುವ ಹಿನ್ನೆಲೆಯಲ್ಲಿ ಅವರ ಹೆಸರನ್ನು ಅಂತಿಮಗೊಳಿಸಿದೆ ಎನ್ನಲಾಗಿದೆ.
ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಪ್ರೊ. ಮಾ. ನಾಗರಾಜ್ ಅವರ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿದೆ ಎನ್ನಲಾಗಿದೆ. ಬಸವರಾಜ ಹೊರಟ್ಟಿ ಜೆಡಿಎಸ್ನಲ್ಲಿದ್ದಾಗ ನಾಗರಾಜ್ ಬಿಜೆಪಿ ಅಭ್ಯರ್ಥಿ ಅಗಿದ್ದರು. ನಂತರ ಹೊರಟ್ಟಿ ಬಿಜೆಪಿಗೆ ಬಂದ ಹಿನ್ನೆಲೆಯಲ್ಲಿ ನಾಗರಾಜ್ ಅವಕಾಶ ಕಳೆದುಕೊಂಡರು. ಅವರ ಪಕ್ಷ ನಿಷ್ಠೆ, ಹಿರಿತನ ಪರಿಗಣಿಸಿ ಅವರನ್ನು ಪರಿಷತ್ಗೆ ಕಳುಹಿಸಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.
ಸದ್ಯ ವಿಧಾನ ಪರಿಷತ್ ಪ್ರತಿಪಕ್ಷ ಸಚೇತಕರಾಗಿರುವ ರವಿಕುಮಾರ್ ಪುನರಾಯ್ಕೆಗೆ ಹೈಕಮಾಂಡ್ ಸಮ್ಮತಿಸಿದೆ. ಪಕ್ಷಕ್ಕೆ ಸಲ್ಲಿಸುತ್ತಿರುವ ಸೇವೆ, ಪರಿಷತ್ನಲ್ಲಿ ಬಿಜೆಪಿ ಪರವಾಗಿ ಗಟ್ಟಿಯಾಗಿ ನಿಂತು ಎಲ್ಲ ವಿಷಯ ಸಮರ್ಥಿಸಿಕೊಳ್ಳುವ ಛಾಪು ಅವರ ಮರು ಆಯ್ಕೆಗೆ ಕಾರಣವಾಗಿದೆ. ಯಡಿಯೂರಪ್ಪ ಪರ ಇರುವ ವ್ಯಕ್ತಿಯಾದರೂ ಪಕ್ಷದಲ್ಲಿ ರವಿಕುಮಾರ್ ಎಲ್ಲರೂ ಒಪ್ಪುವ ವ್ಯಕ್ತಿ ಹಾಗಾಗಿ ಅವರ ಹೆಸರಿಗೆ ಯಾವ ವಿರೋಧವೂ ಇಲ್ಲದೆ, ಮರು ಆಯ್ಕೆ ಅವಕಾಶ ಸಿಕ್ಕಿದೆ. ಕೊನೆ ಕ್ಷಣದ ಬದಲಾವಣೆ ಹೊರತಾಗಿ ಈ ಮೂರು ಹೆಸರುಗಳ ಅಂತಿಮ ಎಂದು ರಾಜ್ಯ ಬಿಜೆಪಿಯ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪುತ್ರನ ಬಂಧನ, ಪತ್ನಿಯ ಜಾಮೀನು ಅರ್ಜಿ ವಿಚಾರಣೆ: ದೇವರ ಮೊರೆ ಹೋದ ಹೆಚ್.ಡಿ.ರೇವಣ್ಣ - H D Revanna