ಬೆಂಗಳೂರು: ಮತದಾನ ನಡೆಯಲಿರುವ ಏಪ್ರಿಲ್ 26ರ ಶುಕ್ರವಾರವನ್ನು ರಜೆ ಇಲ್ಲವೇ ವಾರಾಂತ್ಯ ಆರಂಭ ಎಂದು ಪರಿಗಣಿಸದೆ, ವೀಕೆಂಡ್ ಎಂದು ಪ್ರವಾಸಕ್ಕೆ ಹೋಗದೆ ಬೆಂಗಳೂರು ದಕ್ಷಿಣದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಜಯನಗರ ಜಾಗ್ವಾರ್ಸ್ ತಂಡವು ಆಯೋಜಿಸಿದ್ದ ‘ರನ್ 4 ನಮೋ’ ಓಟ ಆರಂಭಕ್ಕೂ ಮುನ್ನ ಮಾತನಾಡಿದ ಅವರು, ಮತದಾನದ ಶೇಕಡವಾರು ಪ್ರಮಾಣ ಹೆಚ್ಚಾಗಲು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಬೇಕು. 2019ರಲ್ಲಿ ಬೆಂಗಳೂರು ದಕ್ಷಿಣದಲ್ಲಿ ಕೇವಲ ಶೇ.53 ರಷ್ಟು ಕಡಿಮೆ ಮತದಾನವಾಗಿತ್ತು. ಬೆಂಗಳೂರಿನಲ್ಲಿ ಏಪ್ರಿಲ್ 26 ಶುಕ್ರವಾರದಂದು ಮತದಾನ ನಡೆಯುತ್ತಿರುವುದರಿಂದ, ಬೆಂಗಳೂರಿನ ನಾಗರಿಕರು, ವಿಶೇಷವಾಗಿ ಕಡಿಮೆ ಮತದಾನವಾಗುತ್ತಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ಮತ್ತು ವಾರಾಂತ್ಯದ ರಜೆ ಹೊಂದಿರುವ ಐಟಿ-ಬಿಟಿ ಉದ್ಯೋಗಿಗಳು ಏಪ್ರಿಲ್ 26, ಶುಕ್ರವಾರವನ್ನು ರಜೆ ಇಲ್ಲವೇ ವಾರಾಂತ್ಯ ಆರಂಭ ಎಂದು ಪರಿಗಣಿಸಬಾರದು. ಏಪ್ರಿಲ್ 26, ಮುಂದಿನ 5 ವರ್ಷಗಳ ಅವಧಿಗೆ ದೇಶದ ನಾಯಕನನ್ನು ಆಯ್ಕೆ ಮಾಡುವ ದಿನವಾಗಿದ್ದು, ನರೇಂದ್ರ ಮೋದಿ ಅವರಿಗೆ ಐತಿಹಾಸಿಕ ಮೂರನೇ ಅವಧಿಗೆ ಆಶೀರ್ವದಿಸಲು ಬೆಂಗಳೂರು ದಕ್ಷಿಣದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು ಎಂದರು.
ಕಳೆದ ಐದು ವರ್ಷಗಳಲ್ಲಿ ಹಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಯಿತು. ಮೆಟ್ರೋ 2ಎ, 2ಬಿ (ವಿಮಾನ ನಿಲ್ದಾಣ ಮಾರ್ಗ) ಹಂತಕ್ಕೆ ಅನುಮೋದನೆ ಮತ್ತು ವಿಸ್ತರಣೆ, ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಹಳದಿ ಮಾರ್ಗ ಪೂರ್ಣಗೊಳ್ಳುವಿಕೆ ಸೇರಿದಂತೆ ಪ್ರಮುಖ ಮೂಲಸೌಕರ್ಯ ಯೋಜನೆಗಳು ಇದರಲ್ಲಿ ಸೇರಿವೆ. ಬಹುನಿರೀಕ್ಷಿತ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಮತ್ತು ಉಪನಗರ ವರ್ತುಲ ರಸ್ತೆ ನಿರ್ಮಾಣಕ್ಕೆ ಅನುಮೋದನೆ ಪಡೆಯಲು ಸಾಕಷ್ಟು ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.
ಒಂದೆರಡು ವರ್ಷಗಳ ಹಿಂದೆ ಡಿಜೆ ಹಳ್ಳಿ ಮತ್ತು ಕೆಜಿಹಳ್ಳಿ ಗಲಭೆಗಳು ನಡೆದ ನಂತರ, ನಗರದಲ್ಲಿ ಭದ್ರತೆಯನ್ನು ಹೆಚ್ಚಿಸಲು ಎನ್‌ಐಎ ಕಚೇರಿ ಸ್ಥಾಪಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದೆ. ತಮ್ಮ ಮನವಿಗೆ ಸ್ಪಂದಿಸಿ ಗೃಹಸಚಿವರು ನಗರಕ್ಕೆ ಎನ್‌ಐಎ ಕಚೇರಿ ಒದಗಿಸಿದ್ದಾರೆ. ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಬಾಕಿ ಉಳಿದಿದ್ದ ಬೆಂಗಳೂರಿನಲ್ಲಿ ಅಮೆರಿಕ ರಾಯಭಾರಿ ಕಚೇರಿ ಸ್ಥಾಪನೆಗಾಗಿ ಸುದೀರ್ಘ ಪ್ರಯತ್ನ ಮಾಡಿದ್ದೇನೆ. ತಮ್ಮ ಪ್ರಯತ್ನದಿಂದ ಎಸ್ಡಬ್ಲ್ಯೂ ಎಎಂಐಹೆಚ್(SWAMIH) ನಿಧಿಯ ಮೂಲಕ ಸ್ಥಗಿತಗೊಂಡಿದ್ದ ಮಂತ್ರಿ ಸೆರಿನಿಟಿ ಅಪಾರ್ಟ್‌ಮೆಂಟ್‌ಗೆ ಹೆಚ್ಚುವರಿಯಾಗಿ 900 ಕೋಟಿ ರೂ. ಪಡೆಯಲು ಸಾಧ್ಯವಾಯಿತು. ಇದರಿಂದ 1,200 ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಸ್ವಂತ ಮನೆಯನ್ನು ಹೊಂದುವ ಕನಸು ಈಡೇರಿದೆ ಎಂದು ತಿಳಿಸಿದರು.
‘ರನ್ 4 ನಮೋ’ ಓಟಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಖ್ಯಾತ ಬ್ಯಾಡ್‌ಮಿಂಟನ್ ಪಟು ರೋಹನ್ ಬೋಪಣ್ಣ ಚಾಲನೆ ನೀಡಿದರು. ಆರ್‌ವಿ ಟೀಚರ್ಸ್ ಕಾಲೇಜಿನಿಂದ ಪ್ರಾರಂಭವಾದ ಓಟ, ಮಯ್ಯಾಸ್ ಹೋಟೆಲ್ ಜಂಕ್ಷನ್, ಯಡಿಯೂರು ಕೆರೆ ಮೂಲಕ ಹಾದು ಲಾಲ್ ಬಾಗ್ ಪಶ್ಚಿಮ ದ್ವಾರದಲ್ಲಿ ಮುಕ್ತಾಯಗೊಂಡಿತು. ಕ್ರಿಕೆಟ್ ಆಟಗಾರ್ತಿ ಸಹನಾ ಪವಾರ್ ಸೇರಿದಂತೆ 96 ವರ್ಷದ ಹಿರಿಯರಿಂದ ಮೊದಲಾಗಿ ಕಿರಿಯ ವಯಸ್ಸಿನ ಮೋದಿ ಅಭಿಮಾನಿಗಳು ಈ ರನ್ ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಇದನ್ನು ಓದು: ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು, ದ.ಕನ್ನಡದಲ್ಲಿ ಕಡಿಮೆ ಅಭ್ಯರ್ಥಿಗಳು: ಹೀಗಿದೆ ಕದನ ಕುತೂಹಲ - LOK SABHA ELECTION