ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸುತ್ತಿದಂತೆ ಚುನಾವಣಾ ಕಣವು ಮತ್ತಷ್ಟು ರಂಗೇರಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ನೇರ ಪೈಪೋಟಿಯ ಮಧ್ಯೆ ಇದೀಗ, ಪ್ರಹ್ಲಾದ್ ಜೋಶಿ ವರ್ಸಸ್ ದಿಂಗಾಲೇಶ್ವರ ಸ್ವಾಮೀಜಿ ಎನ್ನುವಂತಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ದಿಂಗಾಲೇಶ್ವರ ಶ್ರೀಗಳು, ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೆ, ಧಾರವಾಡ ಲೋಕಸಭೆ ಚುನಾವಣೆಗೆ ಪಕ್ಷೇತರ ಸ್ಪರ್ಧಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದರು. ಇದರಿಂದಾಗಿ ಹಲವು ದಿನಗಳಿಂದ ಶ್ರೀಗಳ ಸ್ಪರ್ಧೆ ಕುರಿತಂತೆ ಮೂಡಿದ್ದ ಪ್ರಶ್ನೆಗಳಿಗೆ ಸ್ಪಷ್ಟನೆ ಸಿಕ್ಕಿತ್ತು.
2ನೇ ಸಲ ಮಠಾಧೀಶರೊಬ್ಬರು ಎದುರಾಳಿ: ಇನ್ನೊಂದೆಡೆ, ಸತತ ನಾಲ್ಕು ಬಾರಿ ಜಯ ಗಳಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸ್ವಾಮೀಜಿಯೊಬ್ಬರ ವಿರುದ್ಧದ ಸ್ಪರ್ಧೆ ಇದೇ ಮೊದಲೇನಲ್ಲ. ಎರಡನೇ ಬಾರಿಗೆ ಮಠಾಧೀಶರೊಬ್ಬರು ಚುನಾವಣಾ ಕಣದಲ್ಲಿ ಎದುರಾಗುತ್ತಿದ್ದಾರೆ. ಈ ಹಿಂದೆ 2004ರಲ್ಲಿ ಕನ್ನಡನಾಡು ಪಕ್ಷದಿಂದ ಮಾತೆ ಮಹಾದೇವಿ ಅವರು ಜೋಶಿ ವಿರುದ್ಧ ಸ್ಪರ್ಧಿಸಿದ್ದರು. ಇದೀಗ ಮೂರು ಚುನಾವಣೆಗಳ ಬಳಿಕ ದಿಂಗಾಲೇಶ್ವರ ಸ್ವಾಮೀಜಿಯವರು ಪ್ರತಿಸ್ಪರ್ಧಿಯಾಗುತ್ತಿದ್ದಾರೆ. ಶ್ರೀಗಳ ಪ್ರವೇಶದಿಂದ ಸದ್ಯ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಲಕ್ಷಣಗಳು ಕಂಡು ಬರುತ್ತಿದೆ. 2004ರಲ್ಲಿಯೂ ಪ್ರಹ್ಲಾದ್ ಜೋಶಿ ಅವರು ಮೊದಲ ಬಾರಿಗೆ ಕಣಕ್ಕಿಳಿದಾಗಲೂ ಇಂತಹುದೇ ಪರಿಸ್ಥಿತಿ ಇತ್ತು.
ಮಾತೆ ಮಹಾದೇವಿಗೆ ಸೋಲು: 2004ರಲ್ಲಿ ಪ್ರಹ್ಲಾದ್ ಜೋಶಿ 3,85,084 ಮತ ಪಡೆದಿದ್ದರು. ಕಾಂಗ್ರೆಸ್‌ನಿಂದ ಬಿ.ಎಸ್. ಪಾಟೀಲ ಸ್ಪರ್ಧಿಸಿ 3,02,006 ಮತ ಗಳಿಸಿದ್ದರು. ಜೊತೆಗೆ, ಕನ್ನಡನಾಡು ಪಕ್ಷದಿಂದ ಕಣಕ್ಕಿಳಿದ ಜಗದ್ಗುರು ಮಾತೆ ಮಹಾದೇವಿ ಅವರಿಗೆ ಕೇವಲ 27,610 ಮತ ಸಿಕ್ಕಿತ್ತು. ಇದೀಗ ದಿಂಗಾಲೇಶ್ವರ ಸ್ವಾಮೀಜಿ ಅವರು ಚುನಾವಣಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಲಿಂಗಾಯತರ ಮತ ಪಡೆಯುವರೇ ಸ್ವಾಮೀಜಿ?: ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನೇರ ಎದುರಾಳಿಯಾಗಿದ್ದರೂ, ಈಗ ದಿಂಗಾಲೇಶ್ವರ ಶ್ರೀಗಳ ಪ್ರವೇಶದಿಂದ ಯಾವ ಪಕ್ಷಕ್ಷೆ ಲಾಭ, ನಷ್ಟ ಎಂಬ ಲೆಕ್ಕಾಚಾರ ಶುರುವಾಗಿದೆ. ಕ್ಷೇತ್ರದಲ್ಲಿ ಶೇ.20ರಷ್ಟು ಲಿಂಗಾಯತ ಮತದಾರರಿದ್ದು, ಯಾರಿಗೆ ಮತ ನೀಡಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಚುನಾವಣೆಗೆ ಧುಮುಕುವ ನಿರ್ಧಾರ ಪ್ರಕಟಣೆ ವೇಳೆ ಮಾತನಾಡಿದ್ದ ಶ್ರೀಗಳು, ಲಿಂಗಾಯತರನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿದ್ದರು. ಅವರಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದಿದ್ದರು. ಪ್ರತಿ ಬಾರಿಯೂ ಸಾಮಾನ್ಯವಾಗಿ ಇಲ್ಲಿನ ಲಿಂಗಾಯತರು ಬಿಜೆಪಿ ಪರ ಒಲವು ತೊರಿಸಿರುವುದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಇದೀಗ, ದಿಂಗಾಲೇಶ್ವರ ಸ್ವಾಮೀಜಿಯವರು ಎಷ್ಟರ ಮಟ್ಟಿಗೆ ಲಿಂಗಾಯತ ಹಾಗೂ ಇತರರ ಮತಗಳ ಸೆಳೆಯುತ್ತಾರೆ ಎಂಬ ಕುತೂಹಲವಿದೆ.
ಇದನ್ನೂ ಓದಿ: ದಿಂಗಾಲೇಶ್ವರ ಸ್ವಾಮೀಜಿ ಬೆಂಬಲಿಸುವ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸುತ್ತೇನೆ: ಡಿ.ಕೆ.ಶಿವಕುಮಾರ್
ಸ್ವಾಮೀಜಿಗೆ ಕಾಂಗ್ರೆಸ್ ಬೆಂಬಲ?: ಈ ನಡುವೆ ದಿಂಗಾಲೇಶ್ವರ ಸ್ವಾಮೀಜಿಗೆ ಕಾಂಗ್ರೆಸ್ ಬೆಂಬಲ ನೀಡುವ ಬಗ್ಗೆ ಸ್ಥಳೀಯ ನಾಯಕರ ಜತೆ ಚರ್ಚೆ ನಡೆಸುತ್ತೇನೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ದಿಂಗಾಲೇಶ್ವರ ಸ್ವಾಮಿಜಿಗಳನ್ನು ಸಂಪರ್ಕ ಮಾಡಿದ್ದೀರಾ ಎಂದ ಪ್ರಶ್ನೆಗೆ ಉತ್ತರಿಸಿ, ''ಸ್ವಾಮೀಜಿಯವರು ಈಗ ಚುನಾವಣೆ ಸ್ಪರ್ಧಿಸುವ ತೀರ್ಮಾನ ಮಾಡಿದ್ದಾರೆ. ಈ ಬಗ್ಗೆ ಅನೇಕರು ನನಗೆ ಸಲಹೆ ನೀಡಿದ್ದಾರೆ. ಕೇಂದ್ರ ಚುನಾವಣಾ ಸಮಿತಿ ನಿರ್ಧಾರದಂತೆ ನಾವು ಈಗಾಗಲೇ ಆನಂದ್ ಅಸೂಟಿ ಅವರಿಗೆ ಬಿ ಫಾರಂ ನೀಡಿದ್ದೇವೆ. ನಮ್ಮ ಅಭ್ಯರ್ಥಿ ಯುವಕರಾಗಿದ್ದಾರೆ. ಈ ಕುರಿತ ಪ್ರಸ್ತಾವನೆ ಇದೆ. ಈ ಬಗ್ಗೆ ಸದ್ಯದಲ್ಲೇ ಸ್ಥಳೀಯ ನಾಯಕರ ಜತೆ ಚರ್ಚೆ ಮಾಡುತ್ತಿದ್ದೇನೆ'' ಎಂದಿದ್ದಾರೆ.
ಇದನ್ನೂ ಓದಿ: ದಿಂಗಾಲೇಶ್ವರ ಸ್ವಾಮೀಜಿ ರಾಜಕೀಯ ಪ್ರವೇಶದ ಬಗ್ಗೆ ಲಿಂಗಾಯತ ಶಾಸಕರ ಅಭಿಪ್ರಾಯವೇನು?
ಧಾರವಾಡದ ಲಿಂಗಾಯತ ನಾಯಕರು ಹೇಳಿದ್ದೇನು?: ಸ್ವಾಮೀಜಿ ಸ್ಪರ್ಧೆ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಧಾರವಾಡ ಜಿಲ್ಲೆಯ ಪ್ರಮುಖ ಲಿಂಗಾಯತ ನಾಯಕರು ಪ್ರಹ್ಲಾದ್ ಜೋಶಿ ಪರ ಮಾತನಾಡಿದ್ದರು. ಕುಂದಗೋಳ ಶಾಸಕ ಎಂ.ಆರ್.ಪಾಟೀಲ್, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ಜೋಶಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಪ್ರಹ್ಲಾದ್ ಜೋಶಿ ಅವರು ಲಿಂಗಾಯತರನ್ನು ಬೆಳೆಸಿದ್ದಾರೆ. ಸಾಕಷ್ಟು ಜನರನ್ನು ಶಾಸಕರನ್ನಾಗಿ ಮಾಡಿದ್ದಾರೆ ಎಂದು ಎಂ.ಆರ್.ಪಾಟೀಲ್ ಹೇಳಿದ್ದರು. ಅಲ್ಲದೆ, ಶ್ರೀಗಳ ರಾಜಕೀಯ ಪ್ರವೇಶ ಪಕ್ಷದ ಮೇಲೆ ಹಾಗೂ ಪ್ರಹ್ಲಾದ್ ಜೋಶಿಯವರ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ ವಿಶ್ವಾಸ ವ್ಯಕ್ತಪಡಿಸಿದ್ದರು.
ಡಿಕೆಶಿ ಹೇಳಿಕೆಗೆ ಲಾಡ್ ಪ್ರತಿಕ್ರಿಯೆ: ಶ್ರೀಗಳ ಬಗ್ಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಕುರಿತಂತೆ ಧಾರವಾಡದಲ್ಲಿ ಬುಧವಾರ (ಇಂದು) ಮಾತನಾಡಿರುವ ಸಚಿವ ಸಂತೋಷ್ ಲಾಡ್, ಅದಕ್ಕೆ ಡಿಕೆಶಿ ಅವರೇ ಉತ್ತರಿಸಬೇಕು. ಸ್ವಾಮೀಜಿಯವರು ಪ್ರಭಾವಶಾಲಿ ಇದ್ದಾರೆನ್ನಿಸುತ್ತದೆ. ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿಯನ್ನು ಹೈಕಮಾಂಡ್ ಬದಲಿಸಿದರೆ, ಅದಕ್ಕೆ ನಾವು ಬದ್ಧ. ಆದರೆ, ಸ್ವಾಮೀಜಿ ಕಣದಲ್ಲಿ ಇರದಿದ್ದರೂ ನಾವು ನಮ್ಮ ಅಭ್ಯರ್ಥಿ ಪರ ಗೆಲುವಿಗೆ ಹೋರಾಡುತ್ತೇವೆ ಎಂದಿದ್ದಾರೆ.