ಬೆಂಗಳೂರು: ಸೋಮವಾರದಿಂದ ಆರಂಭಗೊಳ್ಳಲಿರುವ ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ಮಿತ್ರಪಕ್ಷಗಳಾಗಿರುವ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಹೋರಾಟ ನಡೆಸಲಿದ್ದು, ನಾಳೆ ಈ ಸಂಬಂಧ ಉಭಯ ಪಕ್ಷಗಳ ನಾಯಕರು ಒಟ್ಟಾಗಿ ಕುಳಿತು ಚರ್ಚಿಸಿ ಹೋರಾಟದ ಸ್ವರೂಪ ಅಂತಿಮಗೊಳಿಸಲಿವೆ.
ಈ ಕುರಿತು ನಗರದ ಖಾಸಗಿ ಹೋಟೆಲ್ನಲ್ಲಿ ಇಂದು ನಡೆದ ಬಿಜೆಪಿ ನಾಯಕರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಅಧಿವೇಶನದಲ್ಲಿ ಜೆಡಿಎಸ್ ಜೊತೆ ಸಮನ್ವಯತೆ ಕುರಿತು ಜೆಡಿಎಸ್ ನಾಯಕರೂ ಆಗಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಚರ್ಚೆ ಮಾಡಿದ್ದೇವೆ. ನಾಳೆ ಜೆಡಿಎಸ್ ಮತ್ತು ನಾವು ಒಟ್ಟಿಗೆ ಸಭೆ ಮಾಡುತ್ತೇವೆ. ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡರ ಜೊತೆ ಸಭೆ ಮಾಡುವುದಾಗಿ ಹೇಳಿದ್ದೆವು. ಆದರೆ, ತಾವೇ ಬರುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಉಭಯ ಪಕ್ಷಗಳ ನಾಯಕರು ಹೋರಾಟದ ಸ್ವರೂಪ ಮತ್ತು ಸಮನ್ವಯತೆ ಕುರಿತು ನಿರ್ಧರಿಸಲಿದ್ದೇವೆ ಎಂದು ತಿಳಿಸಿದರು.
ಇನ್ನುಳಿದಂತೆ ಇಂದಿನ ಸಭೆಯಲ್ಲಿ ವಿಧಾನಸಭೆ ಅಧಿವೇಶನ ಯಾವ ಅಜೆಂಡಾ ಮೇಲೆ ಮಾತನಾಡಬೇಕು ಅಂತ ಚರ್ಚೆಮಾಡಿದ್ದೇವೆ. ವಾಲ್ಮೀಕಿ ನಿಗಮ, ಮುಡಾ ಹಗರಣ ಪ್ರಕರಣಗಳ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ಕೋರಿ ನಿಲುವಳಿ ಸೂಚನೆ ಮಂಡಿಸಲಿದ್ದೇವೆ. ಡೆಂಗ್ಯೂ, ಜಿಕಾ ವೈರಸ್ ಹರಡಿದ್ದು, ಸರ್ಕಾರ ಕ್ರಮ ಕೈಗೊಂಡಿಲ್ಲ. ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಿಲ್ಲ. ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದೆ. ರೈತರ ಬಗ್ಗೆ ಕಾಳಜಿ ಇಲ್ಲ. ಬಿತ್ತನೆ ಬೀಜ ನೀಡಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭದ್ರತೆ ಇಲ್ಲದಾಗಿದೆ. ಬೆಲೆ ಏರಿಕೆ ಕೂಡ ದೊಡ್ಡ ಆಘಾತವಾಗಿದೆ. ಈ ಸರ್ಕಾರ ಪಾಪರ್ ಆಗಿದೆ. ಸರ್ಕಾರ ಮಾಡಿದ ಪಾಪ ಹೆಚ್ಚಾಗಿದೆ. ಶಿಶುಪಾಲನ ರೀತಿ ಇವರಿಗೆ ನೂರು ಚಾನ್ಸ್ ನೀಡಲಾಗಿದೆ. ಜನರಿಗೆ ಹೇಳಿದ್ದೇನು, ಮಾಡಿದ್ದೇನು. ಬೆಲೆ ಏರಿಕೆ ಮಾಡಿ, ಫ್ರೀ ಅಂತಾರೆ. ಬಿಪಿಎಲ್ ಕಾರ್ಡ್ಗೂ ಈಗ ಕೈಹಾಕಿದ್ದಾರೆ. ಇದರಿಂದಲೇ ಈ ಸರ್ಕಾರ ದಿವಾಳಿ ಆಗಿರೋದು ಸ್ಪಷ್ಟವಾಗಿದೆ. ಈ ಕುರಿತೇ ಮೂರು ಗಂಟೆಗಳ ಕಾಲ ಚರ್ಚೆ ಮಾಡಿದ್ದೇವೆ. ವಿಧಾನಸಭೆ ಒಳಗೆ, ಹೊರಗೆ ಹೋರಾಟ ಮಾಡಲಿದ್ದೇವೆ. ಒಂದು ವಾರ ಅಧಿವೇಶನ ಹೆಚ್ಚುವರಿ ಮಾಡಲು ಮನವಿ ಮಾಡಲಿದ್ದೇವೆ. ಇದಕ್ಕೆ ಕಾನೂನಾತ್ಮಕ ಅವಕಾಶವಿದೆ ತಾರ್ಕಿಕ ಅಂತ್ಯದವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದರು.
ಇಡಿ ದಾಳಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ವಾಲ್ಮೀಕಿ ನಿಗಮದ ಹಣ ನುಂಗಿ ನೀರು ಕುಡಿದಿದ್ದಾರೆ. ಈ ಸಂಬಂಧ ಈಗಾಗಲೇ ಆಡಿಯೋ ಬಿಡುಗಡೆ ಆಗಿದೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಹೋಗಿದೆ. ಮುಡಾ ಹಗರಣದಲ್ಲಿ ಯಾವ ಮಂತ್ರಿ ಕೂಡ ಭಾಗಿಯಾಗಿಲ್ಲ ಅಂದರು.
ಸುಮೋಟೋ ಕೇಸ್ ಹಾಕಿಕೊಂಡಿದ್ದಾರೆ. ಎಸ್ಐಟಿಗೆ ಯಾಕೆ ಕೊಟ್ರು? ಒಂದೇ ಕೇಸ್ ಎರಡು ಸಂಸ್ಥೆ ತನಿಖೆ ಮಾಡಲು ಆಗಲ್ಲ. ಕ್ಲೀನ್ ಚಿಟ್ ಪಡೆಯಲು ಎಸ್ಐಟಿ ಮಾಡಿಕೊಂಡಿದ್ದಾರೆ. ಶಾಂಘ್ರೀಲಾ ಹೋಟೆಲ್ ಇವರ ಅಡ್ಡಾ ಅಂತೆ. ಅಲ್ಲಿ ಸಂಜೆ ಆದರೆ ಯಾರೆಲ್ಲಾ ಸೇರ್ತಾರೆ ಅಂತ ಗೊತ್ತಾಗುತ್ತದೆ. ಅವರೆಲ್ಲಾ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ರಾಮನಗರ ಹೆಸರು ಇಟ್ಟವರು ಕಾಂಗ್ರೆಸ್ನವರು ಅಲ್ಲ. ಅವರಿಗೆ ಹೆಸರು ಬದಲಾವಣೆ ಮಾಡೋಕೆ ಹಕ್ಕಿಲ್ಲ. ರಾಮನಗರ ಹೆಸರು ಬದಲಾವಣೆ ಮಾಡೋದು ಯಾಕೆ? ಅಭಿವೃದ್ಧಿ ಮಾಡಿ, ಬೆಂಗಳೂರಿಗೆ ಸೇರಿಸಿದರೆ ರಿಯಲ್ ಎಸ್ಟೇಟ್ ಮಾಫಿಯಾ ಆಗುತ್ತದೆ. ಬರಿ ರಾಮನಗರ ಯಾಕೆ? ಮಂಡ್ಯ ಸೇರಿಸಿ, ಹಾಸನ ಸೇರಿಸಿ. ರಾಜ್ಯದ ಎಲ್ಲ ಜಿಲ್ಲೆಗಳಿಗೂ ಬೆಂಗಳೂರು ಅಂತ ಹೆಸರಿಟ್ಟುಬಿಡಿ ಎಂದು ಅಶೋಕ್ ವ್ಯಂಗ್ಯವಾಡಿದರು.
ಕನಕಪುರ ಬೆಂಗಳೂರು ಸೇರಿಸೋಕೆ ನೀವು ಈ ಕೆಲಸ ಮಾಡ್ತಾ ಇದ್ದೀರಿ. ನಿಮಗೆ ರಾಮನ ಮೇಲೆ ಕೋಪ ಇದ್ದರೆ ಹೇಳಿ. ಶೋಲೆ ಸಿನಿಮಾ ತೆಗೆಯುವಾಗಲೂ ರಾಮನಗರದ ಹೆಸರು ಬದಲಾಯಿಸಿಲ್ಲ. ರಾಮಘಡ ಎಂದು ಮಾಡಿದ್ದರು ಅಷ್ಟೇ. ಈಗ ನೀವು ಬದಲಾವಣೆ ಮಾಡುತ್ತೀರಾ? ಆಯಾ ಜಿಲ್ಲೆಗೆ ಅದರದ್ದೇ ಆದ ಹಿನ್ನೆಲೆ ಇದೆ. ಹೆಸರು ಬದಲಾವಣೆಗೆ ಹೋಗಿ ತುಘಲಕ್ ದರ್ಬಾರ್ ರೀತಿ ವರ್ತಿಸಿ, ಹುಚ್ಚರ ರೀತಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ಇನ್ನು ಇಂದಿನ ಸಭೆ ಕುರಿತು ಮಾಹಿತಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಅಧಿವೇಶನದಲ್ಲಿ ಯಾವ್ಯಾವ ವಿಚಾರ ಪ್ರಸ್ತಾಪ ಮಾಡಬೇಕು ಅಂತಾ ಚರ್ಚಿಸಿದ್ದೇವೆ ಭ್ರಷ್ಟಾಚಾರ ಪ್ರಕರಣಗಳು ದೇಶಾದ್ಯಂತ ಸುದ್ದಿಯಾಗಿವೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ, ಸದನದ ಒಳಗೆ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ವಿಷಯಗಳ ಕುರಿತು ಚರ್ಚೆ ಮಾಡಿದ್ದೇವೆ ಎರಡೂ ಮನೆಗಳಲ್ಲಿ ಹೋರಾಟದ ಬಗ್ಗೆ ಚರ್ಚೆ ಮಾಡದ್ದೇವೆ. ನಾಳೆ ಅಥವಾ ನಾಡಿದ್ದು ಎರಡೂ ಪಕ್ಷಗಳ ಮುಖಂಡರು ಕುಳಿತು ಚರ್ಚೆ ಮಾಡುತ್ತೇವೆ. ಸದನದ ಒಳಗೆ ಮತ್ತು ಹೊರಗೆ ಎರಡೂ ಕಡೆ ಪ್ರತಿ ಪಕ್ಷದ ಹೋರಾಟ ಇರುತ್ತದೆ ಎಂದರು.
ಇದನ್ನೂ ಓದಿ: ಬಜೆಟ್ ಯೋಜನೆಗಳಿಗೆ ಹಣದ ಕೊರತೆ ಇಲ್ಲ, ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ: ಸಿಎಂ ಸಿದ್ದರಾಮಯ್ಯ ಪುನರುಚ್ಚಾರ - CM Siddaramaiah