ಶಿವಮೊಗ್ಗ: ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ನಿವಾಸದ ಮೇಲೆ ಮುತ್ತಿಗೆ ಹಾಕಿ ಗೂಂಡಾ ವರ್ತನೆ ಮಾಡಿದ್ದನ್ನು ಖಂಡಿಸಿ, ಇಂದು (ಭಾನುವಾರ) ಸೊರಬ ಪಟ್ಟಣದ ಪುರಸಭೆ ಮುಂಭಾಗದ ಸರ್ಕಲ್ನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಕುಮಾರ್ ಬಂಗಾರಪ್ಪ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.
ಸಚಿವ ಮಧು ಬಂಗಾರಪ್ಪನವರು ಗೂಂಡಾಗಿರಿ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಸೋತ ಅವರು ಹತಾಶರಾಗಿ ಈ ರೀತಿ ದಾಳಿ ನಡೆಸಿದ್ದಾರೆ. ಈ ದಾಳಿಯನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ. ಇಂತಹ ದಾಳಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಮಾತನಾಡಿ, ''ಈ ರೀತಿಯ ಹೇಯ ಕೃತ್ಯಕ್ಕೆ ಮುಂದಾಗಿರುವುದು ಸೊರಬ ಕ್ಷೇತ್ರದ ಎಲ್ಲಾ ಮತದಾರರಿಗೆ ಮಾಡಿದಂತಹ ಅವಮಾನ. ಹೀಗಾಗಿ ಈ ಕ್ಷೇತ್ರದ ಮತದಾರರ ಕ್ಷಮೆಯನ್ನು ಯಾಚಿಸಬೇಕು, ಮಧು ಬಂಗಾರಪ್ಪನವರು ಕ್ಷಮೆಯನ್ನು ಕೇಳಬೇಕು. ಶಿವರಾಜ್ಕುಮಾರ್ ಹಾಗೂ ಗೀತಾ ಶಿವರಾಜ್ಕುಮಾರ್ ಈ ಕ್ಷೇತ್ರದ ಮತದಾರರಿಗೆ ಅವಮಾನ ಮಾಡಿದ್ದೀರಿ. ಅದಕ್ಕಾಗಿ ನೀವು ಬೇಷರತ್ ಕ್ಷಮೆಯಾಚಿಸಬೇಕೆಂದು ನಾನು ಆಗ್ರಹಿಸುತ್ತೇನೆ'' ಎಂದಿದ್ದಾರೆ.
''ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಸಂದರ್ಭದಲ್ಲಿ ವಿರೋಧಿಗಳನ್ನ ಟೀಕೆ ಟಿಪ್ಪಣಿ ಮಾಡುವುದು ಅತ್ಯಂತ ಸಹಜ. ಚುನಾವಣೆ ಸಂದರ್ಭದಲ್ಲಿ ನೀವು ಟೀಕೆ ಮಾಡಿದ್ರಿ. ಅದಕ್ಕೆ ಪ್ರತಿಯಾಗಿ ನಾವೂ ಕೂಡಾ ಟೀಕೆ ಮಾಡಿದ್ವಿ. ನೀವು ಯೋಗ್ಯತೆ ಬಗ್ಗೆ ಮಾತನಾಡಿದ್ರಿ, ಮಾನ- ಮರ್ಯಾದೆ ಬಗ್ಗೆ ಮಾತನಾಡಿದ್ರಿ. ಆದರೆ ನಾವೆಲ್ಲೂ ಸಭ್ಯತೆಯ ಎಲ್ಲೆಯನ್ನು ಮೀರಿರಲಿಲ್ಲ. ಚುನಾವಣೆಯಲ್ಲಿ ಮತದಾರ ಪ್ರಭುಗಳು ತೀರ್ಪನ್ನು ಕೊಟ್ಟಿದ್ದಾರೆ. ಸೋಲು ಗೆಲುವು ಸಹಜ. ಯಾರು ವಿಶ್ವಾಸವನ್ನು ಗಳಿಸುತ್ತಾರೋ ಅವರು ಗೆಲ್ಲುತ್ತಾರೆ. ಯಾರು ವಿಶ್ವಾಸವನ್ನು ಕಳೆದುಕೊಳ್ಳುತ್ತಾರೋ ಅವರು ಸೋಲುತ್ತಾರೆ. ಆದರೆ ಚುನಾವಣಾ ಫಲಿತಾಂಶ ಬಂದ ನಂತರ ಈ ರೀತಿಯ ಹೇಡಿತನದ ಪ್ರತೀಕಾರ ತೆಗೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ?'' ಎಂದು ಪ್ರಶ್ನಿಸಿಸಿದರು.
ಬಿಜೆಪಿ ಮುಖಂಡ, ವಕೀಲ ಸೋಮಶೇಖರ್ ತಾಳಗುಪ್ಪ ಮಾತನಾಡಿ, ''ಕುಮಾರ್ ಬಂಗಾರಪ್ಪ ಅವರು ಮನೆಯ ಹಿರಿಯ ಸದಸ್ಯರಾಗಿ ಮಧು ಬಂಗಾರಪ್ಪನವರಿಗೆ ಬುದ್ಧಿ ಮಾತು ಹೇಳಿದ್ದಾರೆಯೇ ಹೊರತು, ಅವರ ಮೇಲೆ ಇಲ್ಲ ಸಲ್ಲದ ಅಪವಾದ ಮಾಡಿಲ್ಲ. ನೀವು ನಿಮ್ಮ ಗೂಂಡಾ ಅಭಿಮಾನಿಗಳನ್ನ ಬಿಟ್ಟು ಒಂದೊಮ್ಮೆ ಈ ರೀತಿ ದೌರ್ಜನ್ಯ ಎಸಗಿದ್ದೇ ಆಗಿದ್ದರೆ, ಈ ಬಗ್ಗೆ ಸರ್ಕಾರ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳದಿದ್ರೆ, ನಾವು ಬಿಜೆಪಿ ಕಾರ್ಯಕರ್ತರು ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲು ತಯಾರಿದ್ದೇವೆ. ದಯವಿಟ್ಟು ಒಂದೆರೆಡು ದಿವಸದಲ್ಲಿ ಕುಮಾರ ಬಂಗಾರಪ್ಪ ಅವರ ಮನೆಗೆ ನುಗ್ಗಿರುವಂತಹ ಕೃತ್ಯ ತಪ್ಪು ಎಂದು ಕ್ಷಮೆಯನ್ನು ನೀವು ಕೇಳಬೇಕು'' ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಗೀತಾ ಅವರು ಶಿವಮೊಗ್ಗ ಜನರ ಸೇವೆ ಮಾಡುವ ಗ್ಯಾರಂಟಿ ಕೊಡುತ್ತೇನೆ: ಶಿವರಾಜ್ ಕುಮಾರ್ - Shivaraj Kumar