ಬೆಂಗಳೂರು: ಬ್ರೈನ್ ಟ್ಯೂಮರ್, ಕ್ಯಾನ್ಸರ್ ಸೇರಿದಂತೆ ನರಕ್ಕೆ ಸಂಬಂಧಿಸಿದಂತೆ ರೋಗ ಲಕ್ಷಣ ತಿಳಿಯಲು ನಿಮ್ಹಾನ್ಸ್ ಆಸ್ಪತ್ರೆಯ ರೋಗಿಗಳಿಂದ ಸಂಗ್ರಹಿಸಲಾಗಿದ್ದ ಬಯಾಪ್ಸಿ ಸ್ಯಾಂಪಲ್ಗಳ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಬಯಾಪ್ಸಿ ಸ್ಯಾಂಪಲ್ ಗಳನ್ನ ಕಳೆದ ಎರಡು ವರ್ಷಗಳಿಂದ ಕದ್ದು ಕೇರಳದ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಮಾರಾಟ ಮಾಡಿರುವ ಅಂಶ ಈಗ ಬೆಳಕಿಗೆ ಬಂದಿದೆ.
ಕಳೆದ ಡಿಸೆಂಬರ್ 23ರಂದು ಆಸ್ಪತ್ರೆಯ ಹೆಚ್ಒಡಿ ಡಾ.ಅನಿತಾ ಮಹದೇವನ್ ಅವರು ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಬಯಾಪ್ಸಿ ಸ್ಯಾಂಪಲ್ಗಳನ್ನು ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ನಿಮ್ಹಾನ್ಸ್ ಆಸ್ಪತ್ರೆಯ ರಿಜಿಸ್ಟರ್ ಶಂಕರ್ ನಾರಾಯಣ್ ರಾವ್ ಈ ಸಂಬಂಧ ನೀಡಿದ ದೂರಿನ ಮೇರೆಗೆ ಆಸ್ಪತ್ರೆಯಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್, ಶವಗಾರದಲ್ಲಿ ಸಹಾಯಕನಾಗಿದ್ದ ಅಣ್ಣಾದೊರೈ ಸೇರಿದಂತೆ ಮೂವರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಲವು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಇಬ್ಬರು ಕೆಲಸ ಮಾಡುತ್ತಿದ್ದರು.
ವಿಚಾರಣೆ ವೇಳೆ ತಲೆಮರೆಸಿಕೊಂಡಿರುವ ಆರೋಪಿ ರಘುರಾಮ್ ಮೂಲಕ ಕೇರಳದ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಬಯಾಪ್ಸಿ ಸ್ಯಾಂಪಲ್ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಕಳೆದ ಎರಡು ವರ್ಷದಿಂದಲೂ ಇವರು ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದು, ಸುಮಾರು 300 ರಿಂದ 400 ಬಯಾಪ್ಸಿ ಸ್ಯಾಂಪಲ್ ಗಳನ್ನ ಮಾರಾಟ ಮಾಡಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.
ಪ್ರಕರಣದ ಬಗ್ಗೆ ಪೊಲೀಸರು ಹೇಳಿದ್ದಿಷ್ಟು: ಕಳೆದ 16 ವರ್ಷಗಳಿಂದ ನ್ಯೂರೋಪತೋಲಜಿ ವಿಭಾಗದಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್, ಬ್ರೈನ್ ಟ್ಯೂಮರ್ ಸೇರಿದಂತೆ ನರರೋಗ ಅರಿಯಲು ಬಯಾಪ್ಸಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದವರ ಸ್ಯಾಂಪಲ್ಗಳನ್ನ ಕದಿಯುತ್ತಿದ್ದರಂತೆ . ನಂತರ ಶವಗಾರದಲ್ಲಿ ಕೆಲಸ ಮಾಡುತ್ತಿದ್ದ ಅಣ್ಣಾದೊರೈಗೆ ನೀಡುತ್ತಿದ್ದ. ಸ್ಯಾಂಪಲ್ ಗಳನ್ನು ಕೋಲ್ಡ್ ಸ್ಟೋರೆಜ್ ನಲ್ಲಿ ಸಂಗ್ರಹಿಸಿ ಇಡಲಾಗುತ್ತಿತ್ತು. ನಂತರ ಕೇರಳದ ಖಾಸಗಿ ಕಾಲೇಜುಗಳಿಗೆ ಪ್ರಕರಣದ ಮೂರನೇ ಆರೋಪಿ ರಘುರಾಮ್ ಮೂಲಕ ಮಾರಾಟ ಮಾಡಿಸುತ್ತಿದ್ದ. ಒಂದು ಸ್ಯಾಂಪಲ್ಗೆ ಎಷ್ಟಕ್ಕೆ ಮಾರಾಟ ಮಾಡುತ್ತಿದ್ದರು ಎಂಬುದರ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. ಮತ್ತೋರ್ವ ಆರೋಪಿ ಸಿಕ್ಕ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ನಗರ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಾಪುರ್ ತಿಳಿಸಿದ್ದಾರೆ.
ಬಯಾಪ್ಸಿ ಅಂದರೆ ಏನು?: ಬಯಾಪ್ಸಿ ಎಂದರೆ ದೇಹದ ನಿರ್ದಿಷ್ಟ ಭಾಗಗಳಿಂದ ಸ್ವಲ್ಪ ಪ್ರಮಾಣದ ಅಂಗಾಂಶ ಅಥವಾ ಕೋಶಗಳನ್ನ ತೆಗೆದುಕೊಳ್ಳುವುದಾಗಿದೆ. ಬ್ರೈನ್ ಟ್ಯೂಮರ್, ಕ್ಯಾನ್ಸರ್ ಸೇರಿದಂತೆ ನರ ರೋಗಗಳಿಗೆ ಸಂಬಂಧಿಸಿದಂತೆ ವೈದ್ಯರು ರೋಗನಿರ್ಣಯಕ್ಕೆ ಬರಲು ಬಯಾಪ್ಸಿ ಟೆಸ್ಟ್ ಸಹಕಾರಿಯಾಗಲಿದೆ.
ಇದನ್ನೂ ಓದಿ: ಪ್ರತ್ಯೇಕ ಪ್ರಕರಣ: ಬ್ಯಾಂಕ್ ಉದ್ಯೋಗಿಗೆ ₹27 ಲಕ್ಷ, ವ್ಯಕ್ತಿಯೊಬ್ಬರಿಗೆ ₹6 ಲಕ್ಷ ವಂಚನೆ