ಬಾಗಲಕೋಟೆ: ಇಳಕಲ್ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಹೇರ್ ಡ್ರೈಯರ್ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇದು ಮಹಿಳೆಯನ್ನು ಕೊಲೆ ಮಾಡಲು ನಡೆಸಿದ ಪೂರ್ವಯೋಜಿತ ಸಂಚು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಇಂದಿನ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಬ್ಲಾಸ್ಟ್ ಮಾಡಿ ಕೊಲೆ ಮಾಡುವ ಸಂಚು ರೂಪಿಸಿದ್ದ ಸಿದ್ದಪ್ಪ ಶೀಲವಂತ ಎಂಬಾತನನ್ನು ಬಂಧಿಸಲಾಗಿದೆ. ಘಟನೆಗೆ ಗಾಯಾಳು ಮಹಿಳೆ ಹಾಗೂ ಆರೋಪಿಯ ನಡುವಿನ ಸಂಬಂಧವೇ ಕಾರಣ ಎಂದು ಅವರು ಹೇಳಿದರು.
ಇಳಕಲ್ನಲ್ಲಿ ಡ್ರೈಯರ್ ಬ್ಲಾಸ್ಟ್ ಆಗಿ ಬಸಮ್ಮ ಎಂಬಾಕೆ ಗಾಯಗೊಂಡಿರುವ ಘಟನೆ ನಡೆದಿತ್ತು. ತನಿಖೆ ನಡೆಸಿದ ಪೊಲೀಸರು, ಆರೋಪಿ ಸಿದ್ದಪ್ಪನನ್ನು ಬಂಧಿಸುವಲ್ಲಿ ಯಶ ಕಂಡಿದ್ದಾರೆ. ಹೇರ್ ಡ್ರೈಯರ್ ಮೂಲಕ ಸಿದ್ದಪ್ಪ ಸಂಚು ರೂಪಿಸಿ ಬಸಮ್ಮಳ ಸ್ನೇಹಿತೆ ಶಶಿಕಲಾ ಎಂಬಾಕೆಯ ಕೊಲೆಗೆ ಸಂಚು ರೂಪಿಸಿರುವುದು ತನಿಖೆಯಿಂದ ಬಹಿರಂಗವಾಗಿದೆ ಎಂದು ಎಸ್ಪಿ ರೆಡ್ಡಿ ತಿಳಿಸಿದರು.
ಬ್ಲಾಸ್ಟ್ನಿಂದ ಗಾಯಗೊಂಡ ಬಸಮ್ಮ ಮತ್ತು ಆರೋಪಿ ಸಿದ್ದಪ್ಪನ ನಡುವೆ ಸಲುಗೆ ಇತ್ತು. ಈ ಸಲುಗೆ ಕಂಡು ಇತ್ತೀಚೆಗೆ ಶಶಿಕಲಾ ಸ್ನೇಹಿತೆ ಬಸಮ್ಮಗೆ ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ, ಈ ಬುದ್ದಿ ಮಾತು ಕೇಳಿದ ಬಸಮ್ಮ ಸಿದ್ದಪ್ಪನಿಂದ ಅಂತರ ಕಾಯ್ದುಕೊಂಡಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡಿದ್ದ ಆರೋಪಿ, ಹೇರ್ ಡ್ರೈಯರ್ ಕೋರಿಯರ್ ಮಾಡುವ ಮೂಲಕ ಶಶಿಕಲಾ ಅವರನ್ನು ಮುಗಿಸಲು ಸಂಚು ರೂಪಿಸಿದ್ದ. ಆದರೆ, ಇದು ಬಸಮ್ಮಗೆ ತಿರುಗು ಬಾಣವಾಗಿದ್ದು, ಇದೊಂದು ಉದ್ದೇಶಪೂರ್ವಕ ಕೃತ್ಯ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಅಮರನಾಥ ರೆಡ್ಡಿ ಹೇಳಿದರು.
ಕೋರಿಯರ್ ಮೂಲಕ ಕೊಲೆ!: ಆರೋಪಿ ತಾನೇ ಹೇರ್ ಡ್ರೈಯರ್ ಖರೀದಿಸಿ, ಹೇರ್ ಡ್ರೈಯರ್ ಒಳಗೆ ಸ್ಫೋಟಗೊಳ್ಳುವಂತೆ ಡೆಟೊನೇಟರ್ ಬಳಸಿ ಶಶಿಕಲಾ ವಿಳಾಸಕ್ಕೆ ಕಳುಹಿಸಿದ್ದಾನೆ. ಅದೃಷ್ಟವಶಾತ್ ಅಂದು ಊರಲ್ಲಿರದ ಶಶಿಕಲಾ ತನ್ನ ಸ್ನೇಹಿತೆ ಬಸಮ್ಮಳಿಗೆ ಹೇರ್ ಡ್ರೈಯರ್ ಪಡೆಯುವಂತೆ ತಿಳಿಸಿದ್ದಾಳೆ. ಸ್ನೇಹಿತೆ ಶಶಿಕಲಾ ಮಾಹಿತಿಯಂತೆ ಕೋರಿಯರ್ ಸೆಂಟರ್ಗೆ ತೆರಳಿ ಬಸಮ್ಮ ಹೇರ್ ಡ್ರೈಯರ್ ಪಡೆದಿದ್ದಾಳೆ. ಮನೆಗೆ ಬಂದ ಬಸಮ್ಮಳಿಗೆ ಅದನ್ನು ಕಂಡು ಕುತೂಹಲ ತಡೆಯಲಾಗದೇ ಹೇರ್ ಡ್ರೈಯರ್ ಆನ್ ಮಾಡಿದ್ದಾಳೆ. ಹೇರ್ ಡ್ರೈಯರ್ ಆನ್ ಮಾಡುತ್ತಿದ್ದಂತೆ ಅದು ಬ್ಲಾಸ್ಟ್ ಆಗಿದೆ. ನ. 15 ರಂದು ನಡೆದಿದ್ದ ಬ್ಲಾಸ್ಟ್ ಘಟನೆಗೆ, ಒಂದೇ ವಾರದಲ್ಲಿ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೂಪರ್ ವೈಸರ್: ''ಆರೋಪಿ ಸಿದ್ದಪ್ಪ ಕೊಪ್ಪಳದಲ್ಲಿ ಡಾಲ್ಫಿನ್ ಇಂಟರ್ನ್ಯಾಷನಲ್ ಗ್ರಾನೈಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಎಂಎ, ಬಿಇಡಿ ಮುಗಿಸಿದ್ದ ಆರೋಪಿ, ಕಳೆದ 16 ವರ್ಷಗಳಿಂದ ಗ್ರಾನೈಟ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ. ಹೇರ್ ಡ್ರೈಯರ್ ಒಳಗೆ ಕಲ್ಲುಗಳನ್ನು ಬ್ಲಾಸ್ಟ್ ಮಾಡಲು ಬಳಕೆ ಮಾಡುವ ಡೆಟೋನೇಟರ್ ಹಾಕಿ ಸಂಚು ರೂಪಿಸಿದ್ದು ತನಿಖೆಯಿಂದ ತಿಳಿದು ಬಂದಿದೆ'' ಎಂದು ಎಸ್ಪಿ ಅಮರನಾಥ ರೆಡ್ಡಿ ಮಾಹಿತಿ ನೀಡಿದರು.
''ಆರೋಪಿ ಸಿದ್ದಪ್ಪ ಮತ್ತು ಬಸಮ್ಮ ಪುರ್ತಗೇರಿ ಗ್ರಾಮದವರು. ಒಂದೇ ಊರಲ್ಲಿದ್ದಾಗ ಇಬ್ಬರ ನಡುವೆ ಸಲುಗೆ ಇತ್ತು. ಆದರೆ, ಬಸಮ್ಮ ಮನೆಯವರು ಬಾಗಲಕೋಟೆಯ ರಕ್ಕಸಗಿ ಗ್ರಾಮದ ಯೋಧ ಪಾಪಣ್ಣ ಎಂಬುವರಿಗೆ ಕೊಟ್ಟು ಮದುವೆ ಮಾಡಿದ್ದರು. ಆದರೆ, ಬಸಮ್ಮಳ ಗಂಡ ಪಾಪಣ್ಣ 2017ರಲ್ಲಿ ಅಕಾಲಿಕವಾಗಿ ಮೃತಪಟ್ಟಿದ್ದಾರೆ. ಕಳೆದ 5 ವರ್ಷಗಳ ಹಿಂದೆ ಬಸಮ್ಮ- ಸಿದ್ದಪ್ಪ ಪುನಃ ಭೇಟಿಯಾಗಿದ್ದರು. ಇಳಕಲ್ನ ಬಸವನಗರದಲ್ಲಿ ವಾಸವಿದ್ದ ಬಸಮ್ಮ ಮನೆಗೆ ಆರೋಪಿ ಸಿದ್ದಪ್ಪ ಆಗಾಗ ಬಂದು ಹೋಗುತ್ತಿದ್ದ. ಬಾಗಲಕೋಟೆಯ ಮಿಲಿಟರಿ ಕ್ಯಾಂಟೀನ್‌ಗೆ ಬಂದಾಗ ಬಸಮ್ಮ, ಶಶಿಕಲಾಗೆ ಸಿದ್ದಪ್ಪನ ಪರಿಚಯ ಮಾಡಿಸಿದ್ದರು'' ಎಂದು ಘಟನೆ ಕುರಿತು ಎಸ್ಪಿ ಹಲವು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಆರ್ಡರ್ ಮಾಡದಿದ್ದರೂ ಮನೆಗೆ ಬಂದ ಹೇರ್ಡ್ರೈಯರ್: ಆನ್ ಮಾಡುತ್ತಿದ್ದಂತೆ ಸ್ಫೋಟ, ಮಹಿಳೆಯ ಎರಡೂ ಮುಂಗೈ ಕಟ್