ಬೆಂಗಳೂರು: ಶಿಗ್ಗಾಂವಿ ಬಂಡಾಯ ಶಮನವಾಗಿದ್ದು, ಬಂಡಾಯ ಸಾರಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರು ನಾಮಪತ್ರ ಹಿಂಪಡೆಯಲು ಒಪ್ಪಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಖಾದ್ರಿ ಮನವೊಲಿಕೆ ಮಾಡಿ ಬಳಿಕ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಖಾದ್ರಿ ಅವರನ್ನು ನಾನೇ ಕಾಂಗ್ರೆಸ್ಗೆ ಸೇರಿಸಿದ್ದೆ. ಕಳೆದ ಚುನಾವಣೆಯಲ್ಲೇ ಟಿಕೆಟ್ ನೀಡಬೇಕಾಗಿತ್ತು. ಆದರೆ, ಅದು ಕಾರಣಾಂತರದಿಂದ ಮಿಸ್ ಆಗಿತ್ತು. ಅವರು ನಮ್ಮ ಜೊತೆಯಲ್ಲಿ ಇರುತ್ತಾರೆ. ಜಾತ್ಯತೀತ ಸಿದ್ಧಾಂತಕ್ಕೆ ಅವರು ಬದ್ಧರಾಗಿರುತ್ತಾರೆ. ಅವರ ಬಳಿ ಮಾತನಾಡಿದ್ದೇನೆ. ಅ.30ರಂದು ಅವರು ನಾಮಪತ್ರ ಹಿಂಪಡೆಯಲು ತೀರ್ಮಾನಿಸಿದ್ದಾರೆ ಎಂದರು.
ಅವರನ್ನು ಕಾಂಗ್ರೆಸ್ ಗೌರವಿಸುತ್ತೆ. ಮುಂದಿನ ದಿನ ಅವರಿಗೆ ಒಂದು ಜವಾವ್ದಾರಿ ನೀಡಲು ತೀರ್ಮಾನಿಸಿದ್ದೇವೆ. ಯಾವುದೇ ಬಂಡಾಯ ಇಲ್ಲ. ಅವರು ಕಾರ್ಯಕರ್ತರ ಜೊತೆ ಮಾತನಾಡಿ ತೀರ್ಮಾನಿಸುತ್ತಾರೆ. ನೀತಿ ಸಂಹಿತೆ ಇರುವುದರಿಂದ ಕೆಲವನ್ನು ಹೇಳಲು ಆಗುವುದಿಲ್ಲ ಎಂದು ತಿಳಿಸಿದರು.
ನನಗೆ ಪಕ್ಷ ಮುಖ್ಯ: ಇದೇ ವೇಳೆ ಮಾತನಾಡಿದ ಅಜ್ಜಂಪೀರ್ ಖಾದ್ರಿ, ನಾನು ಕಾಂಗ್ರೆಸ್ನ ಶಿಸ್ತಿನ ಸಿಪಾಯಿ. ಐದು ಚುನಾವಣೆ ಎದುರಿಸಿದ್ದೇನೆ. ಮೂರು ಬಾರಿ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಿದ್ದೇನೆ. ನನಗೆ ಪಕ್ಷ ಮುಖ್ಯ. ನಮ್ಮ ಪಕ್ಷ ರಾಜ್ಯದ ಸೇವೆ ಮಾಡಬೇಕು ಎಂಬುದು ನನ್ನ ಉದ್ದೇಶ. ಸಿಎಂ ಜೊತೆ ಚರ್ಚೆ ಮಾಡಿದ್ದೆ. ಆ ವೇಳೆ ಪಕ್ಷ ಗೆಲ್ಲಬೇಕು. ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದರು. ಕಾರ್ಯಕರ್ತರ ಜೊತೆ ಮಾತನಾಡಿ ನಾಮಪತ್ರ ವಾಪಸ್ ಪಡೆಯುತ್ತೇನೆ ಎಂದು ಹೇಳಿದರು.
ನಾನು ಗುರು ಪರಂಪರೆಯಿಂದ ಬಂದವನು. ನಾನು ನನ್ನ ತೀರ್ಮಾನಕ್ಕೆ ಬದ್ಧ ಇರುತ್ತೇನೆ. ಬಿಜೆಪಿ ಸೋಲಬೇಕು, ಕಾಂಗ್ರೆಸ್ ಗೆಲ್ಲಬೇಕು ಎಂಬುದು ನನ್ನ ಹೋರಾಟವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಯಾಸೀರ್ ಖಾನ್ ರೌಡಿಶೀಟರ್ ಎಂದಿರುವುದು ಕಾಂಗ್ರೆಸ್ನವರೇ: ಬಸವರಾಜ ಬೊಮ್ಮಾಯಿ