ರಾಮನಗರ: ಇಲ್ಲಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೌಡಗೆರೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಭೀಮನ ಅಮಾವಾಸ್ಯೆಯ ಸಂಭ್ರಮ ನೆಲೆಸಿದೆ. ಅಮಾವಾಸ್ಯೆಯಂದು ದೇವಿಯ ಸನ್ನಿಧಿಯಲ್ಲಿ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಂಡಿದ್ದು, ನೂತನವಾಗಿ ನಿರ್ಮಿಸಿರುವ ಮ್ಯೂಸಿಯಂ ಹಾಗೂ ರಥೋತ್ಸವಕ್ಕೂ ಚಾಲನೆ ಸಿಗಲಿದೆ.
ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ಚಾಮುಂಡೇಶ್ವರಿ ದೇವಸ್ಥಾನವಿದೆ. ಮಂಡ್ಯ, ತುಮಕೂರು ಹಾಗೂ ರಾಮನಗರ ಜಿಲ್ಲೆಯ ಗಡಿಭಾಗದಲ್ಲಿದ್ದು, ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ಸಂಭವಿಸಿದ ಪವಾಡಗಳು ಕ್ಷೇತ್ರಕ್ಕೆ ಭಕ್ತರನ್ನು ಹೆಚ್ಚು ಆಕರ್ಷಿಸುತ್ತಿದೆ. ಭಕ್ತರಿಗೆ ಅನ್ನದಾಸೋಹವೂ ನಡೆಯುತ್ತಿದೆ.
ನೂತನ ಮ್ಯೂಸಿಯಂ ಒಳಗೆ ಚಾಮುಂಡೇಶ್ವರಿ ತಾಯಿಯ ಪ್ರತಿಮೆ, ರೈತರ ಪುತ್ಥಳಿಗಳು, ಬೃಹತ್ ಉಕ್ಕಿನ ಆಕೃತಿಗಳನ್ನು ನೋಡಬಹುದು.
ದಂಪತಿಗಳಿಂದ ಚಾಮುಂಡೇಶ್ವರಿಗೆ ಅಭಿಷೇಕ: ಭೀಮನ ಅಮಾವಾಸ್ಯೆ ದಿನ ಗಂಡನಿಗೆ ಪೂಜೆ ಮಾಡುವುದು ಹಿಂದಿನ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ. ಈ ಬಾರಿಯೂ ಕ್ಷೇತ್ರಕ್ಕೆ ಆಗಮಿಸುವ ದಂಪತಿಯ ಕೈಯಿಂದ ತಾಯಿಗೆ ಅಭಿಷೇಕ ಮಾಡಿಸಲಾಗುತ್ತದೆ. ಮಧ್ಯರಾತ್ರಿ 12 ಗಂಟೆಗೆ ಪ್ರಾರಂಭವಾಗುವ ಅಭಿಷೇಕ ಮರುದಿನ ಮಧ್ಯಾಹ್ನ 12 ಗಂಟೆಯವರೆಗೆ ನಿರಂತರವಾಗಿ ನಡೆಯುತ್ತದೆ.
ಭಕ್ತರು ತೆಂಗಿನಕಾಯಿ ಹಾಗೂ ಉಪ್ಪಿನ ಸೇವೆ ಮಾಡಿದರೆ ತಮ್ಮೆಲ್ಲಾ ಸಮಸ್ಯೆಗಳು ಈಡೇರುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ. ಶುಕ್ರವಾರ, ಮಂಗಳವಾರ, ಶನಿವಾರ ಹಾಗೂ ಭಾನುವಾರ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಇಷ್ಟಾರ್ಥಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಇದನ್ನೂ ಓದಿ: ಗೌಡಗೆರೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏಳು ದಿನಗಳ ಕಾಲ ತಂತ್ರಭಾಗ ಶತಚಂಡಿಕಾ ಮಹಾಯಾಗ..