ಬೆಂಗಳೂರು: ರಾಜ್ಯ ಬಿಜೆಪಿ ಪ್ರಧಾನ ಕಚೇರಿಯ ಸ್ಫೋಟಕ್ಕೆ ಸಂಚು ನಡೆದ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿಯೇ ಸಿಗದಿರುವುದು ಬೇಹುಗಾರಿಕೆ ವೈಫಲ್ಯವಾಗಿದೆ. ಗೃಹ ಇಲಾಖೆಯ ವೈಫಲ್ಯವಾಗಿದೆ. ಮುಖ್ಯಮಂತ್ರಿಗಳು ಮೊದಲು ಗೃಹ ಸಚಿವರನ್ನು ಬದಲಾವಣೆ ಮಾಡಬೇಕು. ದ್ರಾಕ್ಷಿ, ಗೋಡಂಬಿ ಗೃಹ ಸಚಿವರಾಗಿರುವ ಪರಮೇಶ್ವರ್ ರಾಜೀನಾಮೆ ನೀಡಬೇಕು ಎಂದು ನಿವೃತ್ತ ನಗರ ಪೊಲೀಸ್ ಆಯುಕ್ತ ಹಾಗೂ ಬಿಜೆಪಿ ವಕ್ತಾರ ಭಾಸ್ಕರ್ ರಾವ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ ಗಂಭೀರವಾದ ಸೂಚನೆ ಪ್ರಕಟ ಆಗಿದೆ. ರಾಷ್ಟ್ರೀಯ ತನಿಖಾ ದಳ ಟೆರರಿಸ್ಟ್ ಬಗ್ಗೆ ಇನ್ವೆಸ್ಟಿಗೇಷನ್ ಮಾಡಿ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ. ಅದರಲ್ಲಿ ಬಿಜೆಪಿ ಕಚೇರಿ ಬ್ಲಾಸ್ಟ್ ಮಾಡುವ ಉದ್ದೇಶ ಇತ್ತು. ಅದು ಸಾಧ್ಯವಾಗದೇ ರಾಮೇಶ್ವರ ಕೆಫೆಗೆ ಹೋಗಿ ಬ್ಲಾಸ್ಟ್ ಮಾಡಿದರು ಅಂತಿದೆ. ಒಂದು ರಾಷ್ಟ್ರೀಯ ಪಕ್ಷದ ಕಚೇರಿಗೆ ಭದ್ರತೆ ನೀಡದಿರುವುದು ಸರ್ಕಾರದ ವೈಫಲ್ಯ ಆಗಿದೆ ಎಂದು ಟೀಕಿಸಿದರು.
ಇದು ಸಿಎಂ ಹಾಗೂ ಗೃಹ ಸಚಿವರಿಗೆ ಬರುತ್ತದೆ. ಸಿಟಿಯಲ್ಲಿ ಆ್ಯಂಟಿ ಟೆರರಿಸ್ಟ್ ಇಂಟಲಿಜೆನ್ಸ್ ಇದೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ, ನಾನು ಕಮಿಷನರ್ ಆಗಿದ್ದಾಗ ಈ ಇಂಟಲಿಜೆನ್ಸ್ ಮಾಡಿದ್ದೆ. ಆ್ಯಂಟಿ ಟೆರರಿಸಂ ಅಲ್ಲೇ ತಡೆಗಟ್ಟಬೇಕು. ಆದರೆ. ಈ ಸರ್ಕಾರ ಬಂದು 14 ತಿಂಗಳಾದ್ರೂ ರಿವ್ಯೂ ಮಾಡಿಲ್ಲ. ಹಾಗಾಗಿ ಎನ್ಐಎ ಪದೇ ಪದೆ ಬಂದು ರೇಡ್ ಮಾಡಿ, ಅರೆಸ್ಟ್ ಕೂಡ ಮಾಡ್ತಿದೆ. ಆ್ಯಂಟಿ ಟೆರರಿಸ್ಟ್ ತನಿಖೆ ಮಾಡಲು ಈ ಸರ್ಕಾರ ಬಿಡ್ತಿಲ್ಲ. ಸಿಸಿಬಿ ಕಡೆಯಿಂದ ಮಾಡಿಸ್ತಿದ್ದಾರೆ. ಕರೆಪ್ಷನ್ ಹಾಗೂ ಮನಿ ಇರೋವರೆಗೂ ಹೋಮ್ ಡಿಪಾರ್ಟ್‌ಮೆಂಟ್ ಸರಿಯಾಗಲ್ಲ, ಇನ್ವೆಸ್ಟಿಗೇಷನ್ ಸರಿಯಾಗಿ ಆಗ್ತಿಲ್ಲ. ಇಂಟಲಿಜೆನ್ಸ್ ಫೇಲ್ಯೂರ್ ಆಗಿದೆ ಎಂದು ಆರೋಪಿಸಿದರು.
ಬೆಂಗಳೂರು ಸೇಫ್ ಸಿಟಿ ಮಾಡ್ತೀವಿ ಅಂತ ಹೇಳಿ ಏನೂ ಮಾಡಿಲ್ಲ. ಒಬ್ಬ ಪೊಲೀಸ್ ಕಾನ್ಸ್‌ಟೇಬಲ್ ಕೂಡ ಹೆಚ್ಚಳ ಮಾಡಿಲ್ಲ. ಇಷ್ಟೆಲ್ಲ ಸಮಸ್ಯೆ ಇದೆ. ಕೇಂದ್ರದಿಂದ ನಿರ್ಭಯ ಸ್ಕೀಮ್ ಅಡಿ ಹಣ ಕಳಿಸಿದರೂ ಅದರ ಬಳಕೆ ಮಾಡಿಕೊಂಡಿಲ್ಲ. ಗೃಹ ಸಚಿವರು ಪ್ರೋ ಆಕ್ಟೀವ್ ಆಬೇಕು. ಎನ್ಡಿಪಿ (NDP), ಯುಎಪಿಎ (UAPA), ಗೂಂಡಾ ಆಕ್ಟ್ ಅಡಿ ಇರೋರ ಬಗ್ಗೆ ಯಾವುದೇ ತನಿಖೆ ಮಾಡ್ತಿಲ್ಲ. ಲಾ ಆ್ಯಂಡ್ ಆರ್ಡರ್ ಸಂಪೂರ್ಣ ಕುಸಿದಿದ್ದು, ಇದು ಗೃಹ ಸಚಿವರ ವೈಫಲ್ಯ ಆಗಿದೆ ಎಂದು ದೂರಿದರು.
ರಾಷ್ಟ್ರೀಯ ಪಕ್ಷದ ಕಚೇರಿಗೆ ಭದ್ರತೆ ಕೊಟ್ಟಿಲ್ಲ. ಕುಕ್ಕರ್ ಬ್ಲಾಸ್ಟ್ ಆದ ಬಗ್ಗೆಯೂ ಸೀರಿಯಸ್ ತಗೊಂಡಿಲ್ಲ. ಐಎನ್ಎ ಕೆಲಸ ಕೂಡ ಮಾಡ್ತಿಲ್ಲ. ವರ್ಷಕ್ಕೆ 200 ಜನ ಸಬ್ ಇನ್ಸ್‌ಪೆಕ್ಟರ್ ರಿಟೈರ್ಡ್ ಆಗ್ತಿದ್ದಾರೆ. ಯಾರನ್ನೂ ನೇಮಕ ಮಾಡಿಕೊಳ್ತಿಲ್ಲ. ರಾಜ್ಯದ ಮೊದಲ ಪ್ರಾಮುಖ್ಯತೆ ಕಾನೂನು ಸುವ್ಯವಸ್ಥೆ ಕಾಪಾಡುವುದು. ಆದರೆ ಅದು ಆಗುತ್ತಿಲ್ಲ. ಪೊಲೀಸರ ಕೈಯನ್ನು ಕಟ್ಟಿ ಇಟ್ಟಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ಎನ್ಐಎ ವರದಿಯಲ್ಲಿ ಬಿಜೆಪಿ ಕಚೇರಿ ಜಗನ್ನಾಥ ಭವನ ಬ್ಲಾಸ್ಟ್ ಮಾಡಬೇಕು ಅನ್ನೋದು ಸ್ಪಷ್ಟವಾಗಿದೆ. ಇದು ಎರಡನೇ ಬಾರಿ ಟಾರ್ಗೆಟ್ ಮಾಡಿದ್ದಾರೆ. ಮೊದಲು ಬ್ಲಾಸ್ಟ್ ಆದಾಗ ಯಾರಿಗೂ ಸಮಸ್ಯೆ ಆಗಿರಲಿಲ್ಲ. ಆದರೆ ಈಗ ಇಲ್ಲಿ ಆಗದೆ, ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟಿದ್ದಾರೆ. ಗೃಹ ಇಲಾಖೆ ವೈಫಲ್ಯ ಎಂದು ಆರೋಪಿಸಿದರು.
ಇದನ್ನೂ ಓದಿ: ಬಿಜೆಪಿ ಕಚೇರಿ ಸ್ಫೋಟಿಸುವ ಸಂಚು ಚಾರ್ಜ್ಶೀಟ್ನಲ್ಲಿ ಉಲ್ಲೇಖ: ಗೃಹ ಸಚಿವ ಪರಮೇಶ್ವರ್ - Rameshwaram Cafe Blast