ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಡಿ, ಸಮಗ್ರ ಭಾರತದಲ್ಲಿ ಒಂದೇ ಬ್ರ್ಯಾಂಡಿನಡಿ ದಿನನಿತ್ಯ ಬೇಕಾಗುವ ಆಹಾರ ಸಾಮಗ್ರಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಈ ಯೋಜನೆಯಡಿ ಅಕ್ಕಿ ವಿತರಿಸುವ ಕಾರ್ಯಕ್ಕೆ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಇಂದು ಚಾಲನೆ ನೀಡಿದರು. ಡಾಲರ್ಸ್ ಕಾಲೊನಿಯಲ್ಲಿರುವ ತಮ್ಮ ನಿವಾಸದ ಸಮೀಪ ನಡೆದ ಸರಳ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಕೆಲವರಿಗೆ ಅಕ್ಕಿ ವಿತರಿಸಿದರು.
ಬಳಿಕ ಮಾತನಾಡಿದ ಯಡಿಯೂರಪ್ಪ, "ಈವರೆಗೆ ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಕಡ್ಲೆ ಬೇಳೆ 60 ರೂ. ಪ್ರತಿ ಕೆ.ಜಿ, ಗೋದಿ ಹಿಟ್ಟು 27.50 ರೂ. ಪ್ರತಿ ಕೆ.ಜಿ ಹಾಗೂ ಹೆಸರು ಬೇಳೆಯನ್ನು ಪ್ರತಿ ಕೆ.ಜಿಗೆ 93 ರೂ.ರಂತೆ ವಿತರಣೆ ಮಾಡಲಾಗುತ್ತಿತ್ತು. ಈ ಯೋಜನೆಯ ಮುಂದುವರೆದ ಭಾಗವಾಗಿ ಈ ದಿನ ಭಾರತ ಬ್ರ್ಯಾಂಡ್ ಯೋಜನೆಯಡಿ ಅಕ್ಕಿಯನ್ನು ಪ್ರತಿ ಕೆ.ಜಿಗೆ 29 ರೂ.ನಂತೆ ಸರಬರಾಜು ಮಾಡಲು ಹಸಿರು ನಿಶಾನೆ ತೋರಿಸಲಾಗುತ್ತಿದೆ. ಜನಸಾಮಾನ್ಯರ ಹಿತದೃಷ್ಟಿಯಿಂದ ಈ ಯೋಜನೆಯನ್ನು ರೂಪಿಸಿದ ಪ್ರಧಾನಿ ಮೋದಿ ಅವರನ್ನು ಹಾಗೂ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂತಹ ಒಂದು ಒಳ್ಳೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಲು ನನಗೆ ಹೆಮ್ಮೆ ಉಂಟಾಗುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿ ವರ್ಗಕ್ಕೆ ಧನ್ಯವಾದ ಸಲ್ಲಿಸುತ್ತೇನೆ" ಎಂದರು.
ಕಾಂಗ್ರೆಸ್ ಕಾಲೆಳೆದ ಬಿಎಸ್ವೈ: "ಚುನಾವಣಾ ಪೂರ್ವದಲ್ಲಿ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಒದಗಿಸುತ್ತೇನೆ ಎಂದು ಸುಳ್ಳು ಆಶ್ವಾಸನೆ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಂತರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡುತ್ತೀರುವ 5 ಕೆ.ಜಿ ಅಕ್ಕಿಯನ್ನು ಹೊರತುಪಡಿಸಿ ಒಂದು ಗ್ರಾಂ ನಷ್ಟು ಅಕ್ಕಿಯನ್ನೂ ಹೆಚ್ಚುವರಿಯಾಗಿ ಒದಗಿಸಲು ಸಾಧ್ಯವಾಗಲಿಲ್ಲ. ಅಂಥದ್ದರಲ್ಲಿ ನಮ್ಮ ಕೇಂದ್ರ ಸರ್ಕಾರ ಬರೀ ಬಾಯಿ ಮಾತಿನಲ್ಲಿ ಭರವಸೆ ನೀಡದೆ, ಕಾಲಹರಣ ಮಾಡದೆ ಇಂದು ಪ್ರತಿ ಕೆ.ಜಿಗೆ 29 ರೂ. ಮಾತ್ರ ಪಡೆದು ಎಲ್ಲರಿಗೂ ಅಕ್ಕಿ ವಿತರಿಸಲು ಕ್ರಮ ಕೈಗೊಂಡಿದೆ" ಎಂದರು.
ಇದನ್ನೂ ಓದಿ: ತೆಲಂಗಾಣ ಮಾದರಿಯಲ್ಲಿ ರಾಜ್ಯದ ರೈತರ ಸಾಲ ಮನ್ನಾ ಆಗಬೇಕು: ಕುರುಬೂರು ಶಾಂತಕುಮಾರ್