ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸಹಿ ಮತ್ತು ಲೆಟರ್ ಹೆಡ್ ನಕಲುಗೊಳಿಸಿ ವಂಚಿಸಿದ್ದ ಇಬ್ಬರು ಆರೋಪಿಗಳನ್ನ ವಿಧಾನಸೌಧ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಾಮನಗರ ಮೂಲದ ಸ್ವಾಮಿ (35) ಹಾಗೂ ಅಂಜನ್ ಕುಮಾರ್ (28) ಬಂಧಿತ ಆರೋಪಿಗಳು.
ಆರೋಪಿ ಸ್ವಾಮಿ ಈ ಹಿಂದೆ ವಿಧಾನಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದ. ಆದರೆ, ನಂತರ ಕೆಲಸ ತೊರೆದು ರಾಜಕಾರಣಿಗಳ ಒಡನಾಟ ಬೆಳೆಸಿಕೊಂಡಿದ್ದ. ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸಹಿ ನಕಲಿ ಮಾಡಿ ನಕಲಿ ಲೆಟರ್ ಹೆಡ್ ಸೃಷ್ಟಿಸಿದ್ದ ಆರೋಪಿ, ಅದನ್ನ ಬಳಸಿ ತನ್ನ ಪತ್ನಿ ವಿನುತಾಗೆ ಶಾಸಕರ ಆಪ್ತ ಸಹಾಯಕಿಯಾಗಿ ನೇಮಿಸಲು ಶಿಫಾರಸು ಮಾಡಿದ್ದ. ನಕಲಿ ಲೆಟರ್ ಹೆಡ್ ನಂಬಿದ್ದ ಸಚಿವಾಲಯದ ಸಿಬ್ಬಂದಿ 2023ರ ಮೇನಲ್ಲಿ ವಿನುತಾ ಅವರನ್ನು ಶಾಸಕರ ಆಪ್ತ ಸಹಾಯಕಿಯಾಗಿ ನೇಮಕಗೊಳಿಸಿದ್ದರು.
ಕೆಲ ದಿನಗಳ ಬಳಿಕ ಕೆಲಸಕ್ಕೆ ಬಾರದೇ ಉಳಿದಿದ್ದ ವಿನುತಾ ಪ್ರತಿ ತಿಂಗಳು 30 ಸಾವಿರ ಸಂಬಳ ಪಡೆದಿದ್ದಳು. ನಂತರ ತಾನು ಗರ್ಭಿಣಿಯಾಗಿರುವುದರಿಂದ ಕೆಲಸದಿಂದ ಬಿಡುಗಡೆಗೊಳಿಸುವಂತೆ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಈ ಬಗ್ಗೆ ಅನುಮಾನಗೊಂಡ ಸಚಿವಾಲಯದ ಸಿಬ್ಬಂದಿ ಪರಿಶೀಲಿಸಿದಾಗ ಅಸಲಿ ವಿಚಾರ ಬಯಲಾಗಿತ್ತು. ತಕ್ಷಣ ವಂಚನೆ ಕುರಿತು ಸಚಿವಾಲಯದ ಅಧಿಕಾರಿಗಳು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅದರನ್ವಯ ಆರೋಪಿ ಸ್ವಾಮಿ ಹಾಗೂ ಅಂಜನ್ ಕುಮಾರ್ ನನ್ನ ಪೊಲೀಸರು ಬಂಧಿಸಿದ್ದು, ವಿನುತಾಗೆ ನೋಟಿಸ್ ರವಾನಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಸ್ವಾಮಿ, ಶಾಸಕ ಎಸ್.ರಘು ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿಸಿ ಅಂಜನ್ ಕುಮಾರಗೆ ಕೆಲಸ ಕೊಡಿಸಿದ್ದ ಎಂಬುದು ಬಯಲಾಗಿದೆ. ಸದ್ಯ ಇಬ್ಬರನ್ನೂ ಸಹ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.