ಬೆಂಗಳೂರು ಗ್ರಾಮಾಂತರ/ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಜಿದ್ದಾಜಿದ್ದಿಯ ಕಣವಾಗಿತ್ತು. ಮೈತ್ರಿ ಅಭ್ಯರ್ಥಿಯಾದ ಡಾ.ಸಿ.ಎನ್. ಮಂಜುನಾಥ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕ್ಷೇತ್ರದಾದ್ಯಂತ ಸಮಬಲ ಹೋರಾಟ ನಡೆಸಿರುವ ಮೈತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಯಾರು ಗೆಲ್ಲುತ್ತಾರೆಂಬ ಭಾರಿ ಲೆಕ್ಕಾಚಾರ ಕ್ಷೇತ್ರದಾದ್ಯಂತ ಭಾರೀ ಬಿರುಸಿನಿಂದ ನಡೆಯುತ್ತಿದೆ.
ಬೆಟ್ಟಿಂಗ್ ಭರಾಟೆ: ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಸಮಬಲ ಹೋರಾಟ ಇರುವುದರಿಂದ ಬೆಟ್ಟಿಂಗ್ ಭರಾಟೆ ಕೂಡ ಜೋರಾಗಿದೆ. ತಮ್ಮ ಅಭ್ಯರ್ಥಿಗಳ ಪರ ಚನ್ನಪಟ್ಟಣ, ಕನಕಪುರ, ರಾಮನಗರ ಹಾಗೂ ಮಾಗಡಿ ಕ್ಷೇತ್ರದಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದೆ ಎಂದು ರಾಜಕೀಯ ಖಚಿತ ಮೂಲಗಳಿಂದ ತಿಳಿದು ಬಂದಿದೆ.
ಮೂಲತಃ ಕೃಷಿಕ ಹಾಗೂ ನಂತರ ವ್ಯಾಪಾರೋದ್ಯಮಿಯಾಗಿ ಬೆಳೆದ ಡಿ.ಕೆ. ಸುರೇಶ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ 2013 ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಉಪ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿ ಗೆದ್ದಿದ್ದರು. ಬಳಿಕ 2014 ಹಾಗೂ 2019 ರಲ್ಲಿ ಜಯ ಸಾಧಿಸಿದ್ದಾರೆ. ಈಗ ನಾಲ್ಕನೇ ಬಾರಿ ಕಠಿಣ ಪರೀಕ್ಷೆಗೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿರುವುದರಿಂದ ಗೆಲ್ಲಬಹುದು. ಅಲ್ಲದೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಿಂದ ಮಹಿಳಾ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಇವರಿಗೆ ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿರುವ ಖ್ಯಾತ ವೈದ್ಯರಾದ ಡಾ.ಮಂಜುನಾಥ್ ಅವರು ಪ್ರತಿಸ್ಪರ್ಧಿಯಾಗಿದ್ದಾರೆ. ಮಾಜಿ ದೇವೇಗೌಡರ ಅಳಿಯನಾಗಿರುವ ಇವರು ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಜೊತೆಗೆ ಇಲ್ಲಿ ಜೆಡಿಎಸ್ ಮತಗಳು ಬಿಜೆಪಿ ಜೊತೆ ಸೇರುವುದರಿಂದ ಕಾಂಗ್ರೆಸ್ ಗೆಲುವು ಕಷ್ಟ ಆಗಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಜೋಶಿ ವರ್ಸಸ್ ಅಸೂಟಿ: ಯಾರಿಗೆ ಸಿಗುತ್ತೆ 'ಧಾರವಾಡ ಪೇಢಾ'? - Dharwad Lok Sabha Constituency
ಸರಳ ವ್ಯಕ್ತಿ ಜೊತೆಗೆ ಪ್ರಭಾವಿಗಳ ಬೆಂಬಲವಿದ್ದರೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಮಂಜುನಾಥ್ ಅವರು ಹೊಸ ಮುಖ. ಅಷ್ಟೇ ಅಲ್ಲದೇ ವೈದ್ಯರಾಗಿದ್ದವರು ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಕುಟುಂಬದ ವರ್ಚಸ್ಸು ಇದ್ದರೂ ರಾಜಕೀಯದಲ್ಲಿ ಅನುಭವ ಕೊರತೆ ಇದೆ. ಆದರೆ ಡಿ.ಕೆ. ಸುರೇಶ್ ಮೂರು ಬಾರಿ ಸಂಸದರಾಗಿ ಜನ ಮೆಚ್ಚುಗೆ ಪಡೆದಿರುವುದಲ್ಲದೇ, 8 ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಕಾರ್ಯಕರ್ತರ ಪಡೆ ಕಟ್ಟಿಕೊಂಡು ಪ್ರಚಾರ ನಡೆಸಿರುವುದರಿಂದ ಬಿಜೆಪಿಗೂ ಜಯ ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ.
ಪ್ರಬಲ ಕುಟುಂಬಗಳ ಪ್ರತಿಷ್ಠೆ: ಒಕ್ಕಲಿಗ ಸಮುದಾಯದ ದೇವೇಗೌಡ ಮತ್ತು ಡಿ ಕೆ ಶಿವಕುಮಾರ್ ಅವರ ಕುಟುಂಬ ಪ್ರಬಲವಾಗಿದೆ. ಈ ಎರಡು ಕುಟುಂಬದ ಸದಸ್ಯರು ರಾಜಕೀಯ ಅಖಾಡದಲ್ಲಿ ಮತ್ತೆ ಎದುರಾಗಿದ್ದು, ಯಾರು ಮೇಲುಗೈ ಸಾಧಿಸುತ್ತಾರೆ ಎಂಬದನ್ನು ನೋಡಬೇಕಿದೆ. ಹೃದಯ ತಜ್ಞ ಮಂಜುನಾಥ್ ಪರವೋ ಅಥವಾ ಹಾಲಿ ಸಂಸದ ಡಿ ಕೆ ಸುರೇಶ್ ಪರವೋ ಎಂಬುದಕ್ಕೆ ಜೂನ್ 4ರ ಫಲಿತಾಂಶ ಉತ್ತರವಾಗಲಿದೆ.
ರಾಮನಗರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ: ಹಳೇ ಬೆಂಗಳೂರು ಮೈಸೂರು ಹೆದ್ದಾರಿಯ ಪಕ್ಕದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಂಗಳವಾರ (ಜೂ. 4) ಬೆಳಗ್ಗೆ 6ಕ್ಕೆ ಸ್ಟ್ರಾಂಗ್ ರೂಂ ಓಪನ್ ಮಾಡಿ ಬೆಳಗ್ಗೆ 8 ಗಂಟೆಯಿಂದ ಎಣಿಕೆ ಕಾರ್ಯ ಆರಂಭವಾಗಲಿದೆ. ಎಣಿಕೆ ಕೇಂದ್ರದಲ್ಲಿ ಮೊಬೈಲ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್ ನಿಷೇಧಿಸಲಾಗಿದ್ದು, ಪಾಸ್ ಪಡೆದ ಏಜೆಂಟ್ಗಳು ಹಾಗೂ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಬಾಗಲಕೋಟೆ: ಗದ್ದಿಗೌಡರ ದಾಖಲೆಯ ಓಟಕ್ಕೆ ಬ್ರೇಕ್ ಹಾಕ್ತಾರಾ ಸಂಯುಕ್ತಾ ಪಾಟೀಲ್? - Bagalkote Lok Sabha Constituency