ಬೆಂಗಳೂರು: ನಗರದ ಹೆಬ್ಬಗೋಡಿ ರೇವ್ ಪಾರ್ಟಿ ಮೇಲೆ ಪೊಲೀಸರ ದಾಳಿ ವೇಳೆ ಡ್ರಗ್ಸ್, ಗಾಂಜಾ ಪತ್ತೆಯಾಗಿದೆ. ನಾವು ಈಗಾಗಲೇ ಮಾದಕವಸ್ತು ಮುಕ್ತ ರಾಜ್ಯಕ್ಕಾಗಿ ಕ್ರಮ ಕೈಕೊಳ್ಳುತ್ತಿದ್ದೇವೆ. ರೇವ್ ಪಾರ್ಟಿ, ಡ್ರಗ್ಸ್ ಅನ್ನು ಸಂಪೂರ್ಣವಾಗಿ ಹತ್ತಿಕ್ಕುವ ಕೆಲಸ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ರೇವ್ ಪಾರ್ಟಿಯಲ್ಲಿ ಯಾವೆಲ್ಲ ವ್ಯಕ್ತಿಗಳು ಭಾಗಿಯಾಗಿದ್ದರು ಎಂದು ಪೊಲೀಸರು ಮಾಹಿತಿ ತೆಗೆದುಕೊಂಡಿದ್ದಾರೆ. ಪೊಲೀಸ್ ದಾಳಿ ವೇಳೆ ಡ್ರಗ್ಸ್, ಗಾಂಜಾ, ಸಿಂಥೆಟಿಕ್ ಡ್ರಗ್ಸ್ ಸಿಕ್ಕಿದೆ. ಇಲ್ಲಿಯವರು ಪಾರ್ಟಿ ಏರ್ಪಡಿಸಿದ್ದು, ಹೊರಗಡೆಯವರು ಭಾಗವಹಿಸಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಮಾಡಿ, ಕಾನೂನು ಕ್ರಮಕೈಗೊಳ್ಳುತ್ತಾರೆ. ಇಂತಹದ್ದನ್ನು ಸರ್ಕಾರ ಹತ್ತಿಕ್ಕುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಈಗಾಗಲೇ ನಾವು ಡ್ರಗ್ಸ್ ಕಡಿವಾಣಕ್ಕೆ ಶಪಥ ಮಾಡಿದ್ದೇವೆ. ರಾಜ್ಯ ಸರ್ಕಾರವು ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂದು ನಿರ್ಧಾರ ಮಾಡಿದೆ. ಈ ಬಗ್ಗೆ ಮುಖ್ಯಮಂತ್ರಿ, ನಾನು ಹೇಳಿಕೆಯನ್ನೂ ನೀಡಿದ್ದೇವೆ. ಈ ಕುರಿತು ಅಧಿಕಾರಿಗಳಿಗೂ ಸೂಚನೆ ಕೊಟ್ಟದ್ದೇವೆ. ಇದುವರೆಗೆ ಸಾವಿರಾರು ಕೋಟಿ ಡ್ರಗ್ಸ್ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದೇವೆ ಎಂದರು.
ರಾಜ್ಯಕ್ಕೆ ಗಾಂಜಾ ಎಲ್ಲಿಂದ ಬರುತ್ತೆ ಅಂತ ಕಂಡು ಹಿಡಿಯುತ್ತೇವೆ. ಹೊರ ರಾಜ್ಯದಿಂದಲೂ ಗಾಂಜಾ ಸಹ ಬರುತ್ತೆ. ಇದನ್ನು ಹಿಡಿಯಲು ಪ್ರತ್ಯೇಕ ಘಟಕ ಇವೆ. ಮನೆಗಳು ಮತ್ತು ಟೆರೇಸ್ ಮೇಲೆ ಕೂಡ ಗಾಂಜಾ ಬೆಳೆಯಲಾಗುತ್ತಿದೆ. ಇಂತಹದನ್ನು ಪತ್ತೆ ಹಚ್ಚುವುದು ಕಷ್ಟವಾದರೂ, ಅಧಿಕಾರಿಗಳು ಅಂತಹವನ್ನೂ ಪತ್ತೆ ಮಾಡುತ್ತಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ಡ್ರಗ್ಸ್, ಗಾಂಜಾ ಪ್ರಕರಣಗಳಲ್ಲಿ ಪೆಡ್ಲರ್ಸ್ ಯಾರಿದ್ದಾರೆ?, ಅವರನ್ನು ಹಿಡಿಯವುದು ಮುಖ್ಯ. ವಿದೇಶಿ ವಿದ್ಯಾಭ್ಯಾಸಕ್ಕೆ ಎಂದು ಬಂದು ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳ ಮೇಲೂ ನಿಗಾ ಇಟ್ಟು, ವಶಕ್ಕೆ ಪಡೆಯುತ್ತೇವೆ. ಜೊತೆಗೆ ಸಂಬಂಧಪಟ್ಟ ರಾಯಭಾರಿ ಕಚೇರಿಗಳಿಗೂ ವರದಿ ಮಾಡುತ್ತಿದ್ದೇವೆ. ಅಲ್ಲದೇ, ರೇವ್ ಪಾರ್ಟಿಗಳು ಮಾಡಿ, ಡ್ರಗ್ಸ್ ಬಳಕೆ ಮಾಡುವುದಕ್ಕೆ ಕಡಿವಾಣಕ್ಕೆ ಹಾಕುತ್ತೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ರೇವ್ ಪಾರ್ಟಿಯಲ್ಲಿ ಪೋಷಕ ನಟಿ ಭಾಗಿ, ಐವರ ಬಂಧನ; ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್