ಬೆಂಗಳೂರು : ಪರ ಭಾಷಿಕರಿಗೆ ಕನ್ನಡ ಭಾಷೆ ಕಲಿಸುವ ಪ್ರಯತ್ನದ ಭಾಗವಾಗಿ ಆಟೋ ಚಾಲಕರಿಗೆ ಕನ್ನಡ/ಇಂಗ್ಲಿಷ್ನಲ್ಲಿರುವ ಕೆಲ ಬೇಸಿಕ್ ವಾಕ್ಯಗಳನ್ನೊಳಗೊಂಡ ಕಾರ್ಡ್‌ಗಳನ್ನ ಬೆಂಗಳೂರು ಪೊಲೀಸರು ಹಂಚಿದ್ದಾರೆ.
ಲ್ಯಾಮಿನೇಟೆಡ್ ಕಾರ್ಡ್‌ಗಳಲ್ಲಿ ಚಾಲಕರು ಮತ್ತು ಪ್ರಯಾಣಿಕರ ನಡುವಿನ ಸಂವಹನವನ್ನು ಸುಲಭಗೊಳಿಸಲು ವಿನ್ಯಾಸಗೊಳಿಸಲಾದ ವಾಕ್ಯಗಳು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮುದ್ರಿಸಲಾಗಿದೆ. 'ಲರ್ನ್ ಕನ್ನಡ ವಿತ್ ಆಟೋ ಕನ್ನಡಿಗ' ಎಂಬ ವಿಶಿಷ್ಟ ಕಾನ್ಸೆಪ್ಟ್ ಮೂಲಕ ಪರ ಭಾಷಿಗರಿಗೆ ಕೆಲವೊಂದು ಬೇಸಿಕ್ ಕನ್ನಡ ಪದಗಳನ್ನು ಕಲಿಸುವಂತಹ ಪ್ರಯತ್ನ ಇದಾಗಿದೆ. ಆಟೋದಲ್ಲಿ ಮಾತನಾಡುವಂತಹ ಕೆಲವೊಂದು ಬೇಸಿಕ್ ಪದಗಳನ್ನು ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ಪ್ರಿಂಟ್ ಮಾಡಿಸಿ ತಮ್ಮ ಆಟೋದಲ್ಲಿ ಅಂಟಿಸಿದ್ದಾರೆ.
ಕನ್ನಡ ರಾಜ್ಯೋತ್ಸವದಂದು, ಬೆಂಗಳೂರು ಸಂಚಾರ ಪೋಲಿಸ್ ವತಿಯಿಂದ ಪರಭಾಷಿಕರಿಗೆ ಕನ್ನಡ ಭಾಷೆಯನ್ನು ಕಲಿಸುವ ಒಂದು ಅಳಿಲು ಪ್ರಯತ್ನ.
— Joint CP, Traffic, Bengaluru (@Jointcptraffic) November 1, 2024
ಆಟೋ ಕನ್ನಡಿಗ ಸಹಯೋಗದಲ್ಲಿ ಅಭಿಯಾನ.
ಸಿರಿಗನ್ನಡಂ ಗೆಲ್ಗೆ ! ಸಿರಿಗನ್ನಡಂ ಬಾಳ್ಗೆ !!
This Kannada Rajyotsava, BTP is proud to introduce a small step towards promoting kannada… pic.twitter.com/B2eOubBYNL
ಪ್ರತಿ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ ಸಹ ಇದ್ದು, ಸ್ಕ್ಯಾನ್ ಮಾಡಿದರೆ ಕನ್ನಡ ಬಳಕೆಯ ಕುರಿತ ವಿಡಿಯೋ ಪ್ಲೇ ಆಗಲಿದೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪರಭಾಷಿಕರಿಗೆ ಕನ್ನಡ ಕಲಿಸುವ ಸಣ್ಣ ಪ್ರಯತ್ನವಾಗಿದ್ದು, ಈ ತಿಂಗಳಿನಿಂದ ಈ ಅಭಿಯಾನ ಮುಂದುವರೆಯಲಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಕನ್ನಡ ರಾಜ್ಯೋತ್ಸವದಂದು, ಬೆಂಗಳೂರು ಸಂಚಾರ ಪೊಲೀಸ್ ವತಿಯಿಂದ ಪರಭಾಷಿಕರಿಗೆ ಕನ್ನಡ ಭಾಷೆಯನ್ನು ಕಲಿಸುವ ಒಂದು ಅಳಿಲು ಪ್ರಯತ್ನ ಇದಾಗಿದೆ. ಆಟೋ ಕನ್ನಡಿಗ ಸಹಯೋಗದಲ್ಲಿ ಅಭಿಯಾನ ಶರುವಾಗಿದೆ. ಸಿರಿಗನ್ನಡಂ ಗೆಲ್ಗೆ ! ಸಿರಿಗನ್ನಡಂ ಬಾಳ್ಗೆ !! ಎಂದು ಬೆಂಗಳೂರು ನಗರ ಸಂಚಾರ ಜಂಟಿ ಪೊಲೀಸ್ ಆಯುಕ್ತರ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದ್ದು ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇತ್ತೀಚಿಗೆ ಅಜ್ಮಲ್ ಸುಲ್ತಾನ್ ಎಂಬ ಬೆಂಗಳೂರಿನ ಆಟೋ ಚಾಲಕ ಆರಂಭಿಸಿದ್ದ ಇದೇ ರೀತಿಯ ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿತ್ತು. ಅದರಿಂದ ಪ್ರೇರಣೆ ಪಡೆದಿರುವ ಪೊಲೀಸರು, ನಗರದ ಆಟೋ ಚಾಲಕರಿಗೆ ಕಾರ್ಡ್ ಹಂಚಿದ್ದಾರೆ.
ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ಖಾಸಗಿ, ಸರ್ಕಾರಿ ಸಂಸ್ಥೆಗಳಲ್ಲಿ ಉತ್ಪಾದಿಸುವ ವಸ್ತುಗಳ ಮೇಲೆ ಕನ್ನಡ ಸೇರ್ಪಡೆ - ಸಿಎಂ ಘೋಷಣೆ