ಬೆಂಗಳೂರು: ಮೆಡಿಕಲ್ ಸೀಟು ಕೊಡಿಸುವುದಾಗಿ ಉದ್ಯಮಿಗೆ 1.57 ಕೋಟಿ ರೂ. ವಂಚಿಸಿದ್ದ ಇಬ್ಬರು ಆರೋಪಿಗಳನ್ನು ನಗರದ ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಉದ್ಯಮಿಯೊಬ್ಬರಿಗೆ ವಂಚಿಸಿದ ಆರೋಪದ ಮೇಲೆ ವಿರೂಪಾಕ್ಷಪ್ಪ ಹಾಗೂ ಮಂಜಪ್ಪ ಎಂಬವರನ್ನು ಬಂಧಿಸಲಾಗಿದೆ.
2022ರಲ್ಲಿ ತಮ್ಮ ಮಗಳಿಗೆ ಮೆಡಿಕಲ್ ಸೀಟ್ ಕೊಡಿಸಲು ಪ್ರಯತ್ನಿಸುತ್ತಿದ್ದ ಉದ್ಯಮಿಗೆ ಅವರ ಪರಿಚಯಸ್ಥನಾಗಿದ್ದ ವಿರೂಪಾಕ್ಷಪ್ಪ ಮತ್ತೋರ್ವ ಆರೋಪಿ ಮಂಜಪ್ಪ ಎಂಬಾತನನ್ನು ಪರಿಚಯಿಸಿದ್ದ. ತನಗೆ 'ಬೆಂಗಳೂರಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯವರು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಮುಖ ಅಧಿಕಾರಿಗಳ ಪರಿಚಯವಿದೆ' ಎಂದಿದ್ದ ಮಂಜಪ್ಪ, ಸೀಟು ಕೊಡಿಸುವುದಾಗಿ ಭರವಸೆ ನೀಡಿ 1.57 ಕೋಟಿ ರೂ. ಕೇಳಿದ್ದ ಎಂದು ಉದ್ಯಮಿ ದೂರಿನಲ್ಲಿ ತಿಳಿಸಿದ್ದರು.
ಆರೋಪಿಯ ಮಾತು ನಂಬಿದ್ದ ಉದ್ಯಮಿ 2022ರಲ್ಲಿ ಆರೋಪಿಗೆ 1.57 ಕೋಟಿ ರೂ ಹಣ ನೀಡಿದ್ದರು. ನಂತರದಲ್ಲಿ 'ಕಾಲೇಜ್ ಸೀಟು ಸಿಗಲಿಲ್ಲ, ಆದರೆ ಷೇರು ಮಾರುಕಟ್ಟೆಯಲ್ಲಿ ಹಣ ಡಬಲ್ ಮಾಡಿಕೊಡುತ್ತೇವೆ' ಎಂದು ಆರೋಪಿಗಳು ಉದ್ಯಮಿಗೆ ನಂಬಿಸಿದ್ದರು. ಆದರೆ, 2 ವರ್ಷಗಳೇ ಕಳೆದರೂ ಹಣ ಹಿಂದಿರುಗಿಸದ ಆರೋಪಿಗಳು, ಉದ್ಯಮಿಗೆ ಜೀವ ಬೆದರಿಕೆ ಹಾಕಿದ್ದರು ಎಂದು ದೂರಲಾಗಿತ್ತು.
ಹಣ ಕಳೆದುಕೊಂಡ ಉದ್ಯಮಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಸದ್ಯ ಇಬ್ಬರೂ ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಅಥಣಿ ಪುರಸಭೆ ಮುಖ್ಯಾಧಿಕಾರಿ - ವಕೀಲರ ನಡುವೆ ಹೊಡೆದಾಟ, ಆಸ್ಪತ್ರೆಗೆ ದಾಖಲು - fight at Athani Municipal Office