ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬನಶಂಕರಿಯ ಹೋಲಿ ಚೈಲ್ಡ್ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿನಿ ಮೇಧಾ ಪಿ. ಶೆಟ್ಟಿ ಅವರು 624 ಅಂಕ ಗಳಿಸುವುದರೊಂದಿಗೆ ರಾಜ್ಯಕ್ಕೆ ಎರಡನೆಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಶಾಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮೇಧಾ ಪಿ ಶೆಟ್ಟಿ, ನಮ್ಮ ಶಾಲೆಯಲ್ಲಿ ಓದು, ಆಟ ಮತ್ತು ಸಾಂಸ್ಕೃತಿಕವಾಗಿ ಬೆಳೆಯಲು ಪೂರಕ ವಾತಾವರಣ ಇದೆ. ಇದರಿಂದ ನನಗೆ ಈ ಸಾಧನೆ ಮಾಡಲು ಸಾಧ್ಯವಾಯಿತು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡುವುದು ಕಷ್ಟಕರ. ಆದರೆ ನಾನು ನಿತ್ಯ ಓದಿನಿಂದ ಇಷ್ಟು ಅಂಕ ಗಳಿಕೆಗೆ ಸಹಕಾರಿಯಾಯಿತು. ನನ್ನ ಪೋಷಕರ ಸಲಹೆ, ಸಹಕಾರ ಕೂಡ ಪೂರಕವಾಗಿ ಕೆಲಸ ಮಾಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲೆಯಲ್ಲಿ ಕೂಡ ಶಿಕ್ಷಕರು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ನನ್ನ ಸಂದೇಹಗಳನ್ನು ಬಗೆಹರಿಸುತ್ತಿದ್ದರು. ಮನೆ ಪಾಠಕ್ಕೂ ಸೇರಿಕೊಂಡಿದ್ದು ಸಹಕಾರಿಯಾಯಿತು. ಸಂಸ್ಕೃತದಲ್ಲಿ 1 ಅಂಕ ಕಡಿಮೆ ಬಂದಿದೆ, ಮರುಮೌಲ್ಯಮಾಪನ ಹಾಕುವ ಕುರಿತು ಚಿಂತಿಸುತ್ತಿದ್ದೇನೆ. ಮುಂದೆ ಎಂಬಿಬಿಎಸ್ ಪೂರೈಸಿ ಸ್ತ್ರೀರೋಗ ತಜ್ಞೆ ಆಗುವ ಆಲೋಚನೆಯಿದೆ ಎಂದು ತಿಳಿಸಿದರು.
ಮೇಧಾ ಅವರ ತಾಯಿ ಉಮಾ ಪಿ ಶೆಟ್ಟಿ ಮಾತನಾಡಿ, ಪಿಯುಸಿಯಲ್ಲಿ ಪಿಸಿಎಂಬಿ ತೆಗೆದುಕೊಂಡು ನೀಟ್ ಪರೀಕ್ಷೆ ಬರೆಯಲಿದ್ದಾಳೆ. ಈ ಎಸ್ಎಸ್ಎಲ್ಸಿ ಫಲಿತಾಂಶ ನಮಗಂತೂ ಸಂತಸ ತಂದಿದೆ ಎಂದು ಹೇಳಿದರು.
ಮೇಧಾ ತುಂಬಾ ಉತ್ತಮ ವಿದ್ಯಾರ್ಥಿನಿ, ಅವಳು ಚಾಚು ತಪ್ಪದೆ ಎಲ್ಲ ಸಲಹೆ ಸೂಚನೆಗಳನ್ನು ಪಾಲಿಸುತ್ತಿದ್ದಳು. ಅವತ್ತಿನ ಪಾಠವನ್ನು ಆ ದಿನವೇ ಅವಳು ಅಭ್ಯಾಸ ಮಾಡಿ ಎಲ್ಲ ಸಂದೇಹಗಳನ್ನು ಶಿಕ್ಷಕರ ಬಳಿ ಪರಿಹರಿಸಿಕೊಳ್ಳುತ್ತಿದ್ದಳು. ಶಾಲೆಗಂತೂ ಅವಳ ಈ ಸಾಧನೆ ಸಂತಸ ತಂದಿದೆ ಎಂದು ಶಿಕ್ಷಕಿ ಅಣ್ಣಮ್ಮ ಅನಿತಾ ಅವರು ಹರ್ಷ ವ್ಯಕ್ತಪಡಿಸಿದರು.
ಪಾಲಿಕೆ ಶಾಲೆಗಳಲ್ಲಿ ಶೇ.68.78 ಫಲಿತಾಂಶ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಿಕ್ಷಣ ವಿಭಾಗದ 33 ಪ್ರೌಢಶಾಲೆಗಳಲ್ಲಿನ 2502 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದು, ಅದರಲ್ಲಿ 1721 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ. 68.78 ರಷ್ಟು ಫಲಿತಾಂಶ ಬಂದಿದೆ.
ಬಿಬಿಎಂಪಿ ಮತ್ತಿಕೆರೆ ಬಾಲಕಿಯರ ಪ್ರೌಢಶಾಲೆ ಶೇ. 92.78 ಫಲಿತಾಂಶ, ಬಿಬಿಎಂಪಿ ಭೈರವೇಶ್ವರ ನಗರ ಪ್ರೌಢಶಾಲೆ ಶೇ. 91.98 ಫಲಿತಾಂಶ ಪಡೆದು ಎರಡನೇ ಸ್ಥಾನ ಹಾಗೂ ಬಿಬಿಎಂಪಿ ಹೇರೋಹಳ್ಳಿ ಪ್ರೌಢಶಾಲೆಯು ಶೇ. 90.56 ಫಲಿತಾಂಶದೊಂದಿಗೆ ಮೂರನೇ ಸ್ಥಾನದಲ್ಲಿದೆ.
ಒಟ್ಟು 66 ವಿದ್ಯಾರ್ಥಿಗಳು ಶೇ. 85 ಕ್ಕಿಂತ ಹೆಚ್ಚು ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರೀರಾಂಪುರ ಬಾಲಕಿಯರ ಪ್ರೌಢಶಾಲೆಯ ಪಿ. ಚಂದನ 625ಕ್ಕೆ 619 ಅಂಕಗಳನ್ನು ಪಡೆದು, ಶೇ. 99ರ ಸಾಧನೆ ಮಾಡಿದ್ದಾರೆ. ಲಗ್ಗೆರೆ ಪ್ರೌಢಶಾಲೆಯ ಟಿ.ಜೆ. ಯಶವಂತ್ 625ಕ್ಕೆ 610 ಅಂಕಗಳನ್ನು ಪಡೆದು ಶೇ. 97.60 ರಷ್ಟು ಅಂಕಗಳನ್ನು ಗಳಿಸಿ ಪಾಲಿಕೆಗೆ ಕೀರ್ತಿ ತಂದಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂಓದಿ:SSLC ರಿಸಲ್ಟ್: ಶೇ.73.40ರಷ್ಟು ಫಲಿತಾಂಶ, ಉಡುಪಿ ಫಸ್ಟ್, ಬಾಲಕಿಯರ ಮೇಲುಗೈ - SSLC Result