ಬೆಂಗಳೂರು: ಬಿಟ್ ಕಾಯಿನ್ ಅಕ್ರಮ ಹಗರಣದ ಆರೋಪಿಗಳ ವಿರುದ್ಧ ಕೋಕಾ (ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ) ಅಡಿ ಎಸ್ಐಟಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. 2017ರಲ್ಲಿ ತುಮಕೂರು ಸಿಇಎನ್ ಠಾಣೆಯಲ್ಲಿ ದಾಖಲಾಗಿದ್ದ ಯುನೋ ಕಾಯಿನ್ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ, ಆರೋಪಿಗಳಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲಾನನ್ನ ಕೋಕಾ ಕಾಯ್ದೆಯಡಿ ಜೈಲಿಗಟ್ಟಲು ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
ಬಿಟ್ ಕಾಯಿನ್ ಅಕ್ರಮ ಪ್ರಕರಣದಲ್ಲಿ ಎಸ್ಐಟಿ ತನಿಖೆಗೆ ಹಾಜರಾಗದೆ ಕಳ್ಳಾಟವಾಡುತ್ತಿದ್ದ ಶ್ರೀಕಿಯನ್ನು ಮೇ 7ರಂದು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಆತನ ಸಹವರ್ತಿ ರಾಬಿನ್ ಖಂಡೇವಾಲಾನನ್ನು ರಾಜಸ್ಥಾನದಲ್ಲಿ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇದೀಗ ಇಬ್ಬರು ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಕ್ರಮ ಕೈಗೊಂಡು, ಜೈಲಿಗಟ್ಟಲು ಮುಂದಾಗಿದ್ದಾರೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಕೋಕಾ ಕಾಯ್ದೆ ಎಂದರೇನು?: ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (KCOCA) ಹೆಸರೇ ಸೂಚಿಸುವಂತೆ ಪದೇ ಪದೇ ಸಂಘಟಿತ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಆರೋಪಿಗಳನ್ನ ಈ ಕಾಯ್ದೆಯಡಿ ಬಂಧನಕ್ಕೊಳಪಡಿಸಬಹುದು. ಕೋಕಾ ಕಾಯ್ದೆಯಡಿ ಬಂಧಿಸಲ್ಪಡುವ ಅಪರಾಧಿಗೆ ಕನಿಷ್ಠ ಒಂದು ವರ್ಷ ಜಾಮೀನು ಸಿಗುವುದಿಲ್ಲ.