ಬೆಂಗಳೂರು: ನಕಲಿ ನೋಟು ನೀಡಿ ಕ್ಯಾಬ್ ಚಾಲಕರಿಗೆ ವಂಚಿಸುತ್ತಿದ್ದ ಆರೋಪದಡಿ ವೈದ್ಯನನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ. ಡಾ.ಕೆ.ಆರ್.ಸಂಜಯ್ ಬಂಧಿತ ಆರೋಪಿ. ಈತ ಮೂಲತಃ ತಮಿಳುನಾಡಿನ ಚೆನ್ನೈ ಮೂಲದವ. ವೈದ್ಯ ಎಂದು ಹೇಳಿಕೊಂಡಿರುವ ಬಗ್ಗೆ ಗುರುತಿನ ಚೀಟಿ ತೋರಿಸಿದ್ದು, ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ವಂಚಿಸುವ ಉದ್ದೇಶದಿಂದ ತಮಿಳುನಾಡಿನಿಂದ ನಗರದ ಯಶವಂತಪುರಕ್ಕೆ ಬಂದು ರೂಮ್ ಮಾಡಿಕೊಂಡಿದ್ದ ಆರೋಪಿ ಸಂಜಯ್, ಟ್ರಾವೆಲ್ ಏಜೆನ್ಸಿ ಮೂಲಕ ಕದ್ರಿಗೆ ಹೋಗಬೇಕೆಂದು ಕಾರು ಬುಕ್ ಮಾಡಿಕೊಂಡಿದ್ದ. ಅದರಂತೆ ಚಾಲಕ ಚಂದ್ರಶೇಖರ್ ಎಂಬವರ ಕ್ಯಾಬ್ನಲ್ಲಿ ಹೋಗುವಾಗ ಮಾಗಡಿ ರೋಡ್ ಬಳಿ ಊಟ ಮಾಡೋಣ ಎಂದು ಚಾಲಕನಿಗೆ ಸೂಚಿಸಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಕರೆದೊಯ್ದಿದ್ದಾನೆ.
ಈ ವೇಳೆ 10,500 ಸಾವಿರ 500 ಮುಖ ಬೆಲೆಯ ಖೋಟಾನೋಟುಗಳನ್ನು ಚಾಲಕನಿಗೆ ನೀಡಿ 10 ಸಾವಿರ ರೂ. ಫೋನ್ ಪೇ ಮೂಲಕ ಬಿಡಿಸಿಕೊಂಡಿದ್ದಾನೆ. ಬಳಿಕ ಕರೆ ಮಾಡುವುದಾಗಿ ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಊಟದ ಬಿಲ್ ಪಾವತಿಸುವ ಸಲುವಾಗಿ ಆರೋಪಿ ನೀಡಿದ ಹಣವನ್ನು ರೆಸ್ಟೊರೆಂಟ್ ಮಾಲೀಕನಿಗೆ ನೀಡಿದಾಗ ಇದು ಖೋಟಾನೋಟು ಎನ್ನುವುದು ಗೊತ್ತಾಗಿದೆ. ತಕ್ಷಣ ಕ್ಯಾಬ್ ಚಾಲಕ ಮಾಗಡಿ ರಸ್ತೆ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. ಪೊಲೀಸರು ಕಾರ್ಯಾಚರಣೆ ನಡೆಸಿ ವಂಚಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ಆರೋಪಿಯಿಂದ 90 ಸಾವಿರ ರೂ ಮೌಲ್ಯದ 500 ಮುಖಬೆಲೆಯ ಖೋಟಾನೋಟು, ಪ್ರಿಂಟರ್, 9 ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ. ಕ್ಯಾಬ್ ಡ್ರೈವರ್ಗೆ ನೀಡಿದ್ದ 500 ಮುಖಬೆಲೆಯ 21 ಖೋಟಾ ನೋಟುಗಳನ್ನೂ ಸಹ ವಶಕ್ಕೆ ಪಡೆದಿದ್ದಾರೆ.
ಇದನ್ನೂಓದಿ: ಶೋಭಾ ಕರಂದ್ಲಾಜೆ ಪ್ರಚಾರದ ವೇಳೆ ಕಾರಿಗೆ ಡಿಕ್ಕಿಯಾಗಿ ವ್ಯಕ್ತಿ ಸಾವು - Biker Dies