ಬೆಂಗಳೂರು: ಖಾಸಗಿ ಟ್ರಸ್ಟ್ಗಳಿಗೆ ಸಿಎಸ್ಆರ್ ಫಂಡ್ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ) ಅಡಿಯಲ್ಲಿ ಹಣ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಲು ಯತ್ನಿಸಿದ್ದ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುಧೀರ್, ಕಿಶೋರ್, ಚಂದ್ರಶೇಖರ್, ವಿನಯ್ ಹಾಗೂ ತೀರ್ಥ ರಿಷಿ ಬಂಧಿತರು . ಕೃಷ್ಣಮೂರ್ತಿ ಎಂಬವರು ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡ ಸಿಸಿಬಿ, 30.91 ಕೋಟಿ ರೂ ಖೋಟಾ ನೋಟುಗಳು ಹಾಗೂ 29.49 ಲಕ್ಷ ಮೌಲ್ಯದ ಅಸಲಿ ಹಣ ಜಪ್ತಿ ಮಾಡಿದ್ದಾರೆ.
ಬಂಧಿತರ ಪೈಕಿ ಓರ್ವ, ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಕೊಂಡು ಅವರ ವಿಶ್ವಾಸ ಬೆಳೆಸಿಕೊಂಡಿದ್ದಾನೆ. ತದನಂತರದಲ್ಲಿ ಅವರನ್ನು ಭೇಟಿ ಮಾಡಿ, ನಮಗೆ ಪರಿಚಯವಿರುವ ಕಂಪನಿಯವರ ಬಳಿ ಕಾನೂನುಬದ್ಧ ಹಣವಿದ್ದು, ಆ ಕಂಪನಿಯವರು ಅಧಿಕೃತವಾಗಿ ಟ್ರಸ್ಟ್, ಇನ್ನಿತರ ಸಂಸ್ಥೆಗಳಿಗೆ ಯಾವುದೇ ಲಾಭಾಂಶವಿಲ್ಲದೆ ಹಣ ವರ್ಗಾಯಿಸುವುದಾಗಿ ಹೇಳಿದ್ದಾನೆ. ಅದಕ್ಕೆ ಪ್ರತಿಯಾಗಿ ಆ ಟ್ರಸ್ಟ್ ಅಥವಾ ಸಂಸ್ಥೆಗಳು ಕಂಪನಿಯವರಿಗೆ ಶೇ.40 ರಷ್ಟು ಹಣವನ್ನು ನಗದು ಮುಖಾಂತರ ಮಾತ್ರ ಸಲ್ಲಿಸಿದರೆ ಸಾಕು. ಈ ವ್ಯವಸ್ಥೆ ಮಾಡುವುದಕ್ಕೆ ನೀವು ನಮಗೆ ಶೇ.10ರಷ್ಟು ಕಮಿಷನ್ ಹಣ ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾನೆ. ಒಂದು ಪಾರ್ಟಿಯ ಬಳಿ ಲಭ್ಯವಿರುವ ಕಪ್ಪು ಹಣವನ್ನು ವಿಡಿಯೋ ಕಾಲ್ ಮುಖಾಂತರ ತೋರಿಸಲು ನೀವು ನಮಗೆ 25 ಲಕ್ಷ ಹಣವನ್ನು ಮುಂಗಡವಾಗಿ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾನೆ.
ಈ ಹಣವನ್ನು ನೀಡಿದರೆ ನಾವು ನಿಮಗೆ ವಿಡಿಯೋ ಕಾಲ್ ಮಾಡಿ ನಮ್ಮ ಬಳಿ ಇರುವ ಹಣದ ಬಂಡಲ್‌ಗಳನ್ನು ತೋರಿಸುತ್ತೇವೆ ಎಂದು ನಂಬಿಸಿದ್ದಾನೆ. ಅದರಂತೆ ಆ ವ್ಯಕ್ತಿಯನ್ನು ಒಂದು ಸ್ಥಳಕ್ಕೆ ಕರೆಸಿಕೊಂಡು ವಿಡಿಯೋ ಕಾಲ್ ಮುಖಾಂತರ ತಮ್ಮ ಬಳಿ ಇರುವ ಹಣದ ಬಂಡಲ್‌ಗಳನ್ನು ತೋರಿಸಿದ್ದಾನೆ. ವಿಡಿಯೋ ಕಾಲ್ ಮಾಡಿದ ವ್ಯಕ್ತಿಯ ಬಗ್ಗೆ ಸಂದೇಹಪಟ್ಟು ಇವರ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಎಸಿಪಿ ಧರ್ಮೇಂದ್ರ ನೇತೃತ್ವದ ತಂಡ ಐದು ಮಂದಿಯನ್ನು ಬಂಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.
ಅಗ್ರಹಾರ ದಾಸರಹಳ್ಳಿ ಮೂಲದ ಆರೋಪಿ ಕಿಶೋರ್ ಮೇಲೆ ಈ ಹಿಂದೆ ಹೆಚ್.ಡಿ.ಕೋಟೆ, ಹೈಗ್ರೌಂಡ್ಸ್, ಕೆ.ಆರ್.ಪುರಂ ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಅಲ್ಲದೆ ಮುಂಬೈನಲ್ಲಿಯೂ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ವಂಚನೆ ಸಂಬಂಧ ಕಿಶೋರ್ ಮನೆ ಹಾಗೂ ಕಚೇರಿಯಲ್ಲಿದ್ದ 23.49 ಲಕ್ಷ ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಈತ ರೈಸ್ ಪುಲ್ಲಿಂಗ್, ಹವಾಲ ದಂಧೆಯಲ್ಲಿ ತೊಡಗಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ವಿಚಾರಣೆ ವೇಳೆ ಆರೋಪಿ ದೊಡ್ಡಮಟ್ಟದಲ್ಲಿ ಖೋಟಾ ನೋಟುಗಳನ್ನು ಆನ್ಲೈನ್ ಮೂಲಕ ತರಿಸಿಕೊಂಡಿರುವುದಾಗಿ ತಿಳಿಸಿದ್ದು, ಎಲ್ಲಿಂದ ಮತ್ತು ಯಾವಾಗ ಹಣ ತರಿಸಿಕೊಂಡ ಸೇರಿ ಇನ್ನಿತರ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಾಸನ: ₹9 ಕೋಟಿ ಮೌಲ್ಯದ ಬಿಯರ್ ವಶಕ್ಕೆ - Beer Seized