ಬೆಂಗಳೂರು: ಸಿಲಿಕಾನ್ ಸಿಟಿಯ ಮೋಟಾರ್ ಕಂಪನಿಯಾದ ಎ- ಥಾನ್ ಭಾರತದ ಮೊದಲ ಆಲ್ ಟೆರೆನ್ ವಾಹನಗಳನ್ನು ಅನಾವರಣಗೊಳಿಸಿದೆ. ನಗರದ ಪ್ಯಾಲೇಸ್ ಮೈದಾನದ ತ್ರಿಪುರವಾಸಿನ ಗೇಟ್ನಲ್ಲಿ ಆರಂಭವಾಗಿರುವ 'ದಿ ಆಟೋ ಶೋ'ನಲ್ಲಿ ಈ ವಾಹನಗಳು ಅನಾವರಣಗೊಂಡಿವೆ.
ಎ- ಥಾನ್ ಸಂಸ್ಥೆ ಭಾರತದಲ್ಲಿ ತಯಾರಿಸಲಾದ ಮೊದಲ ಆಲ್ ಟೆರೆನ್ ವಾಹನಕ್ಕೆ 'ಅಶ್ವ 4x4' ಎಂದು ನಾಮಕರಣ ಮಾಡಿದೆ. ಕಂಪನಿಯು ಯೋಜಿಸಿರುವ ನಾಲ್ಕು ಆಲ್-ಟೆರೆನ್ ಯುಟಿಲಿಟಿ ವಾಹನಗಳಲ್ಲಿ ಅಶ್ವ ಒಂದಾಗಿದೆ. ಇದು ಸ್ಪೇಸ್ ಫ್ರೇಮ್ ಚಾಸಿಸ್ ಅನ್ನು ಹೊಂದಿದ್ದು, 2 ಸೀಟರ್ ಹಾಗೂ 4 ವೀಲ್ ಡ್ರೈವ್ ವಾಹನವಾಗಿದೆ. 3,556 ಮಿ.ಮೀ ಉದ್ದ, 1,930 ಮಿ.ಮೀ ಅಗಲ ಮತ್ತು 2,010 ಮಿ.ಮೀ ಎತ್ತರವನ್ನು ಹೊಂದಿದೆ. ಇದರ ವ್ಹೀಲ್ ಬೇಸ್ 2,600 ಮಿ.ಮೀ ಇದ್ದು, ವಾಹನವು 850 ಕೆ.ಜಿ ತೂಕದ್ದಾಗಿದೆ. 60 ಕೆ.ಜಿ ಸರಕನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ಅಶ್ವ ವಾಹನಕ್ಕೆ 976 ಸಿಸಿ, ಲಿಕ್ವಿಡ್ ಕೂಲ್ಡ್ ಟ್ವಿನ್ ಎಂಜಿನ್ ಇದೆ. ಎರಡು ವೆರಿಯೆಂಟ್ನಲ್ಲಿ ಈ ವಾಹನ ಲಭ್ಯವಿದೆ. 65 ಡಿಗ್ರಿ ಇಳಿಜಾರಿನ ಮೇಲೆ ಏರುವ ಸಾಮರ್ಥ್ಯ ಈ ವಾಹನಕ್ಕಿದೆ. ಮುಂಭಾಗದಲ್ಲಿ ಸಸ್ಪೆನ್ಷನ್ ಜೊತೆಗೆ ಡ್ಯುಯಲ್-ರೇಟೆಡ್ ಕಾಯಿಲ್ ಓವರ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಕ್ಯಾಂಬರ್ ಲಿಂಕ್‌ಗಳೊಂದಿಗೆ ಟ್ರೇಲಿಂಗ್ ಆರ್ಮ್ ಸೆಟಪ್ ಅನ್ನು ಅಳವಡಿಸಲಾಗಿದೆ. ವಾಹನದ ಎಲ್ಲಾ ನಾಲ್ಕು ಮೂಲೆಗಳಲ್ಲಿ ಡಿಸ್ಕ್ ಬ್ರೇಕ್ಗಳನ್ನು ಅಳವಡಿಕೆ ಮಾಡಲಾಗಿದೆ.
ಎ- ಥಾನ್ ನಿರ್ದೇಶಕರು ಹೇಳುವುದೇನು?: ''ಭಾರತದ ಮೊದಲ ಆಲ್ ಟೆರೆನ್ ವಾಹನಗಳನ್ನು ಮಾರುಕಟ್ಟೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿರುವುದಕ್ಕೆ ಸಂತಸವಾಗಿದೆ. ಬೆಂಗಳೂರು ನಗರದ ಸ್ಕಿಲ್ಡ್ ಯುವಕರ ನೆಲೆಯಾಗಿದೆ. ಆದ್ದರಿಂದಲೇ ನಮ್ಮ ಕಾರ್ಪೊರೇಟ್ ಕಚೇರಿಯನ್ನು ಇಂದಿರಾನಗರದಲ್ಲಿ ಮತ್ತು ಉತ್ಪಾದನಾ ವ್ಯವಸ್ಥೆಯನ್ನು ಬೆಂಗಳೂರಿನಿಂದ 80 ಕಿ.ಮೀ ದೂರವಿರುವ ಬಂಗಾರಪೇಟೆಯಲ್ಲಿ ಸ್ಥಾಪಿಸಲಾಗಿದೆ'' ಎಂದು ಎ- ಥಾನ್ ಸಂಸ್ಥೆಯ ನಿರ್ದೇಶಕ ಆದಿತ್ಯ ಹೆಗಡೆ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.